ಜಿಲ್ಲಾ ಸುದ್ದಿ

ಅಪ್ನಾ ದೇಶ್ ಪ್ರಚಾರ ಮಾಡಿ ಉಪನ್ಯಾಸಕರಿಗೆ ಮೀನಾದೇಶ

ಸರ್ಕಾರಿ ಕಾರ್ಯಕ್ರಮ, ಆದರೆ ಅಧಿಕಾರಿಯ ಎನ್‍ಜಿಒ ಪ್ರಚಾರಕ್ಕೆ ವೇದಿಕೆ! ತಾವೇ ಕಟ್ಟಿ ಬೆಳೆಸಿದ `ಅಪ್ನಾ ದೇಶ್' ಎಂಬ ಎನ್‍ಜಿಒ ಪ್ರಚಾರಕ್ಕೆ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಎಲ್ಲ ವಿಶ್ವವಿದ್ಯಾಲಯಗಳಿಗೆ ಅಲಿಖಿತ ಆದೇಶ ಹೊರಡಿಸಿದ್ದಾರೆ...

ಅಪ್ನಾ ದೇಶ್ ಪ್ರಚಾರ ಮಾಡಿ ಉಪನ್ಯಾಸಕರಿಗೆ ಮೀನಾದೇಶ
ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ
Published On :

ಬೆಂಗಳೂರು: ಸರ್ಕಾರಿ ಕಾರ್ಯಕ್ರಮ, ಆದರೆ ಅಧಿಕಾರಿಯ ಎನ್‍ಜಿಒ ಪ್ರಚಾರಕ್ಕೆ ವೇದಿಕೆ! ತಾವೇ ಕಟ್ಟಿ ಬೆಳೆಸಿದ `ಅಪ್ನಾ ದೇಶ್' ಎಂಬ ಎನ್‍ಜಿಒ ಪ್ರಚಾರಕ್ಕೆ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಎಲ್ಲ ವಿಶ್ವವಿದ್ಯಾಲಯಗಳಿಗೆ ಅಲಿಖಿತ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆ ಕುರಿತ ಸಂವಾದ ಆಯೋಜಿಸಿ ತಮ್ಮ ಎನ್‍ಜಿಒಗೆ ಬಿಟ್ಟಿ ಪ್ರಚಾರ ಗಿಟ್ಟಿಸುವ ತಂತ್ರವನ್ನು ಮೀನಾ ಅನುಸರಿಸುತ್ತಿದ್ದಾರೆ. ಮಂಗಳೂರು ಹೊರತುಪಡಿಸಿ ಉಳಿದೆಲ್ಲ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿರುವ ಮೀನಾ ಅದೇ ಕೆಲಸ ಮಾಡಿದ್ದಾರೆ. ಕಳೆದ ವಾರ ಧಾರವಾಡದಲ್ಲಿ ನಡೆದ ಗಲಾಟೆಗೂ `ಅಪ್ನಾ ದೇಶ್' ಬಗ್ಗೆ ನಡೆಸಲು ಹೋದ ಬಿಟ್ಟಿ ಪ್ರಚಾರವೇ ಕಾರಣವಾಗಿದೆ. ಬೆಂಗಳೂರು ವಿವಿಯಲ್ಲಿ ಮಂಗಳವಾರ ನಡೆದ ಕಾರ್ಯ ಕ್ರಮದಲ್ಲಿಯೂ ಅದೇ ಪುನರಾವರ್ತನೆಯಾಯಿತು.

ಧಾರವಾಡದ ಗಲಾಟೆಗೂ `ಅಪ್ನಾ' ನಂಟು: ಉಪನ್ಯಾಸಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿನ ಗೊಂದಲ ಹಾಗೂ ಉಪನ್ಯಾಸಕರ ಸಮಸ್ಯೆಗಳಿಗೆ ಉತ್ತರ ನೀಡುತ್ತೇನೆ ಎಂದು ಪ್ರಧಾನ ಕಾರ್ಯದರ್ಶಿ ಮೀನಾ ಸಂವಾದ ಸಭೆ ಕರೆದಿದ್ದರು. ಆದರೆ ಸಭೆ ಆರಂಭವಾಗಿ ಒಂದೂವರೆ ತಾಸಾದರೂ, ವೇದಿಕೆಯಲ್ಲಿದ್ದವರು ಉದ್ದುದ್ದ ಭಾಷಣ ಹೊಡೆಯುತ್ತಿದ್ದರು. ಉಪನ್ಯಾಸಕರ ಸಮಸ್ಯೆ ಕೇಳಲು ಬಂದಿದ್ದವರು ಮೊದಲಿಗೆ ಆರೋಗ್ಯದ ಬಗ್ಗೆ ಭಾಷಣ ಕೇಳಿದರು. ನಂತರ ಮಾತನಾಡಲು ಬಂದ ವ್ಯಕ್ತಿ ಸುಮಾರು 40 ನಿಮಿಷ, ಸಾಮಾಜಿಕ ಹೊಣೆಗಾರಿಕೆ ಹಾಗೂ ಕೆಲಸದ ಬಗ್ಗೆ ಮಾತನಾಡಲು ಆರಂಭಿಸಿದರು. ಕೊನೆಗೆ `ಅಪ್ನಾದೇಶ್' ಬಗ್ಗೆ ಮಾತನಾಡಲು ಆರಂಭಿಸಿದರು. `ಅಪ್ನಾ ದೇಶ್' ಎನ್ನುವ ಎನ್‍ಜಿಒ ಒಂದನ್ನು ಮೀನಾ ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದು ಅದರ ಹೊಗಳಿಕೆಯನ್ನು ಆರಂಭಿಸಿದರು. ಆಗಲೇ ಒಂದೂವರೆ ಗಂಟೆ ಅರ್ಥವಿಲ್ಲದ ಭಾಷಣ ಕೇಳಿ ಸುಸ್ತಾಗಿದ್ದ ಉಪನ್ಯಾಸಕರು ನೇರವಾಗಿ, `ಕಾರ್ಯಕ್ರಮದ ಉದ್ದೇಶವೇನು? ನೀವೇನು ಮಾಡುತ್ತಿದ್ದೀರಿ? ನಮ್ಮನ್ನು ಕರೆಸಿದ್ದು ಏಕೆ? ಎಂದು ಪ್ರಶ್ನಿಸಿದರು. ಕೂಡಲೇ ಮೀನಾ ಸಿಟ್ಟಾದರು. `ಅಪ್ನಾ ದೇಶ್' ಪ್ರಚಾರಕ್ಕೆ ಅಷ್ಟೊಂದು ಅವಕಾಶ ಸಿಗಲಿಲ್ಲ ಎಂಬ ಕಾರಣವೂ ಇರಬಹುದು.

ಉಪನ್ಯಾಸಕರ ಪ್ರಶ್ನೆಗಳಿಗೆ ಕೊನೆಗೂ ಅವಕಾಶ ಸಿಕ್ಕುತ್ತಿದ್ದಂತೆ, ಪಿಎಚ್.ಡಿ ಸಮಸ್ಯೆ ಬಗ್ಗೆ ಒಬ್ಬರಾದ ಮೇಲೆ ಒಬ್ಬರು ಅತಿಥಿ ಉಪನ್ಯಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. `ಇದು ಸರ್ಕಾರದ ಕ್ರಮ, ನಾನೇನು ಮಾಡಲಾಗುವುದಿಲ್ಲ' ಎಂದು ಬೈಗುಳ ಆರಂಭಿಸಿದ ಭರತ್‍ಲಾಲ್ ಮೀನಾ, ಪ್ರಶ್ನೆ ಕೇಳಿದ್ದೇ ದೊಡ್ಡ ಪ್ರಮಾದ ಎಂಬಂತೆ ವರ್ತಿಸಿದರು. ಕೆಲಸದಿಂದ ತೆಗೆದುಹಾಕುವ ಮಾತುಗಳನ್ನೂ ಆಡಿದ್ದಾರೆ. `ನಮ್ಮನ್ನು ಕೆಲಸದಿಂದ ತೆಗೆದುಹಾಕಲು ಅಧಿಕಾರ ಹೊಂದಿರುವ ಅಧಿಕಾರಿಗೆ, ನಮ್ಮ ಸಮಸ್ಯೆ ನಿವಾರಿಸುವ ಶಕ್ತಿಯಿಲ್ಲವೇ? ಎಂದು ಸಂವಾದದಲ್ಲಿ ಭಾಗವಹಿಸಿದ್ದ ಉಪನ್ಯಾಸಕರು ಪ್ರಶ್ನಿಸಿದ್ದಾರೆ. ತಾವು ಯಾವುದೇ ಇಲಾಖೆ ಜವಾಬ್ದಾರಿ ತೆಗೆದುಕೊಂಡರೂ ಅಲ್ಲಿ `ಅಪ್ನಾ ದೇಶ್' ಎನ್ ಜಿಒ ಕಾರ್ಯಚಟುವಟಿಕೆಗೆ ಪ್ರಚಾರ ನೀಡುವುದು ಮೀನಾ ಅವರ ರೂಢಿ. ಇದನ್ನು ಅವರ ವೆಬ್‍ಸೈಟ್ ಕೂಡ ಹೇಳುತ್ತದೆ. ಆದರೆ ಸರ್ಕಾರಿ ಕಾರ್ಯಕ್ರಮದಲ್ಲೂ ಪರೋಕ್ಷವಾಗಿ ಪ್ರಚಾರ ಮಾಡುವ ಔಚಿತ್ಯದ ಬಗ್ಗೆ ಈಗ ಪ್ರಶ್ನೆಗಳೆದ್ದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.