ಜಿಲ್ಲಾ ಸುದ್ದಿ

ವೃದ್ಧೆಯರ ಸರ ಕದ್ದ ಕಳ್ಳರು

ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಮುಂದುವರಿದಿದ್ದು ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಬನಶಂಕರಿ, ಚಂದ್ರಾ ಲೇಔಟ್, ವಿಜಯನಗರ ಹಾಗೂ ಜ್ಞಾನಭಾರತಿಯಲ್ಲಿ ಮಂಗಳವಾರ ನಾಲ್ವರು ವೃದ್ಧೆಯರ ಸರ ಕಸಿದಿದ್ದಾರೆ...

ವೃದ್ಧೆಯರ ಸರ ಕದ್ದ ಕಳ್ಳರು
ವೃದ್ಧೆಯರ ಸರ ಕದ್ದ ಕಳ್ಳರು (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಮುಂದುವರಿದಿದ್ದು ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಬನಶಂಕರಿ, ಚಂದ್ರಾ ಲೇಔಟ್, ವಿಜಯನಗರ ಹಾಗೂ ಜ್ಞಾನಭಾರತಿಯಲ್ಲಿ ಮಂಗಳವಾರ ನಾಲ್ವರು ವೃದ್ಧೆಯರ ಸರ ಕಸಿದಿದ್ದಾರೆ.

ಬೆಳಿಗ್ಗೆ 6.05 ಬನಶಂಕರಿ
: ಇಲ್ಲಿನ ಕಾವೇರಿನಗರದಲ್ಲಿ ಬೆಳಿಗ್ಗೆ ಮನೆ ಮುಂದೆ ಕಸ ಗುಡಿಸುತ್ತಿದ್ದ ಲಕ್ಷ್ಮಿ (65) ಎಂಬುವರಿಂದ ಅಪರಿಚಿತರು 12 ಗ್ರಾಂ ಸರ ದೋಚಿದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಲಕ್ಷ್ಮೀ ಬಳಿ ಹೋದ ಒಬ್ಬ ಸರ ಕಿತ್ತುಕೊಂಡು ಸಹಚರನೊಂದಿಗೆ ಬೈಕ್‍ನಲ್ಲಿ ಪರಾರಿಯಾಗಿದ್ದಾನೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಿಗ್ಗೆ 11.10 ಚಂದ್ರಾ ಲೇಔಟ್: ಸಮೀಪದ ಕೆನರಾಬ್ಯಾಂಕ್ ಕಾಲೊನಿಯಲ್ಲಿರುವ ಮಾವನ ಮನೆಗೆ ಹೋಗುತ್ತಿದ್ದ ಸಾವಿತ್ರಮ್ಮ (70) ಎಂಬುವರಿಂದ ದುಷ್ಕರ್ಮಿಗಳು 55 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಹಾಲಕ್ಷ್ಮೀ ಬಡಾವಣೆ ನಿವಾಸಿ ಸಾವಿತ್ರಮ್ಮ, ಬೆಳಿಗ್ಗೆ 11.10ಕ್ಕೆ ಸಹೋದರಿಯೊಂದಿಗೆ ಕೆನರಾ ಬ್ಯಾಂಕ್ ಬಸ್ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ಐದನೇ ಅಡ್ಡರಸ್ತೆಯಲ್ಲಿರುವ ಮಾವ ಮಂಜುನಾಥ ಅವರ ಮನೆಗೆ ಹೋಗಿದ್ದರು. ಮನೆ ಮುಂದಿನ ಗೇಟ್ ತೆಗೆದು ಒಳ ಹೋಗಬೇಕು ಎನ್ನುವಷ್ಟರಲ್ಲಿ ದುಷ್ಕರ್ಮಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದಿದ್ದಾನೆ. ಅವರು ವಿಳಾಸದ ಚೀಟಿ ನೋಡುತ್ತಿದ್ದಾಗ 35 ಹಾಗೂ 40 ಗ್ರಾಂನ ಎರಡು ಸರಗಳನ್ನು ಎಳೆದುಕೊಂಡಿದ್ದಾನೆ. ಆಗ ಸಾವಿತ್ರಮ್ಮ ಎರಡೂ ಸರಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಆದರೆ, 35 ಗ್ರಾಂ ಸರ ಸಂಪೂರ್ಣ ಕಳ್ಳನ ಪಾಲಾಯಿತು. ಜತೆಗೆ 40 ಗ್ರಾಂ ಸರ ತುಂಡಾದ ಕಾರಣ ಅದರ 20 ಗ್ರಾಂ ದುಷ್ಕರ್ಮಿ ಕಿತ್ತು ಕೊಂಡು ಹೋದ. ಸಾವಿತ್ರಮ್ಮ ಅವರ ಕೂಗಾಟ ಕೇಳಿದ ಸ್ಥಳೀಯರು ನೆರವಿಗೆ ಧಾವಿಸಿದರು. ಅಷ್ಟರಲ್ಲೇ ದುಷ್ಕರ್ಮಿ ಮತ್ತೊಬ್ಬನೊಂದಿಗೆ ಬೈಕ್‍ನಲ್ಲಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದರು. ಕಾವೇರಿ ಶಾಲೆಯ ಸಿಸಿ ಕ್ಯಾಮರಾದಲ್ಲಿ ಸರಗಳ್ಳರ ಚಲನವಲನ ರೆಕಾರ್ಡ್ ಆಗಿದೆ. ಆದರೆ, ಬೈಕ್‍ನ ನೋಂದಣಿ ಸಂಖ್ಯೆ ಸ್ಪಷ್ಟವಾಗಿಲ್ಲ.

ಬೆ. 11.30 ವಿಜಯನಗರ: ಕೇವಲ 20 ನಿಮಿಷಗಳ ಅಂತರದಲ್ಲಿ ವಿಜಯನಗರ ಸಮೀಪದ ವಿನಾಯಕ ಬಡಾವಣೆಯಲ್ಲಿ ತಮ್ಮ ಕೃತ್ಯ ಆರಂಭಿಸಿದ ಸರಗಳ್ಳರು, ಕಮಲಮ್ಮ (60) ಎಂಬುವರ 15 ಗ್ರಾಂನ ಸರ ದೋಚಿದ್ದಾರೆ. ಕಮಲಮ್ಮ ಮನೆ ಎದುರು ನಿಂತಿದ್ದಾಗ, ವಿಳಾಸ ಕೇಳುವ ನೆಪದಲ್ಲಿ ಒರ್ವ ಸಮೀಪದ ಬಂದಿದ್ದ. ತನಗೆ ಗೊತ್ತಿಲ್ಲ ಎಂದ ಅವರು ಪತಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಒಳಗೆ ಹೋಗಲು ತಿರುಗಿದ್ದಾರೆ. ಆಗ, ದುಷ್ಕರ್ಮಿ ಸರ ಎಗರಿಸಿ ಸಹಚರ ನೊಂದಿಗೆ ಪರಾರಿಯಾಗಿದ್ದಾನೆ ಎಂದು ವಿಜಯನಗರ ಪೊಲೀಸರು ಹೇಳಿದರು.

ಮಧ್ಯಾಹ್ನ 12.15 ಜ್ಞಾನಭಾರತಿ:
ಇಲ್ಲಿ ಗುರುಕೃಪಾ ಬಡಾವಣೆಗೆ ಸಂಬಂಧಿಕರ ಮನೆಗೆ ಬಂದಿದ್ದ ತಾವರೆಕೆರೆ ನಿವಾಸಿ ಗಿರಿಜಾಂಬ (58), ಮಧ್ಯಾಹ್ನ 12.15ಕ್ಕೆ ಮನೆಗೆ ವಾಪಸ್ ಮರಳುತ್ತಿದ್ದರು. ಸಮೀಪದ ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂದಿನಿಂದ ಬಂದ ದುಷ್ಕರ್ಮಿಗಳು, 60 ಗ್ರಾಂ ಸರ ಕಿತ್ತು ಕೊಂಡು ಪರಾರಿಯಾಗಿದ್ದಾರೆ. ಬೈಕ್‍ನ ನೋಂದಣಿ ಸಂಖ್ಯೆ ನೋಡಲಾಗಲಿಲ್ಲ ಎಂದು ಗಿರಿಜಾಂಬ ಜ್ಞಾನಭಾರತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.