ಜಿಲ್ಲಾ ಸುದ್ದಿ

ಗ್ರಾಮ ಪಂಚಾಯ್ತಿಗೆ ಮಹಿಳಾ ದರ್ಬಾರ್

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಮುಂದೆ ಮಹಿಳಾ ದರ್ಬಾರ್! ವಾರದ ಹಿಂದಷ್ಟೇ ಪ್ರಕಟವಾದ ಪಂಚಾಯಿತಿ ಚುನಾವಣೆ ಫಲಿತಾಂಶದಲ್ಲಿ ...

ಗ್ರಾಮ ಪಂಚಾಯ್ತಿಗೆ ಮಹಿಳಾ ದರ್ಬಾರ್
ಮಹಿಳೆಯರ ಗುಂಪು (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಮುಂದೆ ಮಹಿಳಾ ದರ್ಬಾರ್! ವಾರದ ಹಿಂದಷ್ಟೇ ಪ್ರಕಟವಾದ ಪಂಚಾಯಿತಿ ಚುನಾವಣೆ ಫಲಿತಾಂಶದಲ್ಲಿ ಮಹಿಳೆಯರೇ ಮೈಲುಗೈ ಸಾಧಿಸಿದ್ದು, ಸುಮಾರು 3000  ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಯರೇ ಅಲಂಕರಿಸಲಿದ್ದಾರೆ. ಈ ಮೂಲಕ ತಳಹಂತದ ಆಡಳಿತದಲ್ಲಿ ಈ ಬಾರಿ ಮಹಿಳೆಯರದ್ದೇ ಪಾರುಪತ್ಯ. ಆದರೆ ರಾಜ್ಯದಲ್ಲಿ ಮಹಿಳೆಯರಿಗೆ ಇಷ್ಟೊಂದು ಬೃಹತ್  ಪ್ರಮಾಣದಲ್ಲಿ ಅಧಿಕಾರ ಸಿಗುವುದಕ್ಕೆ ಕಾರಣ ಕಾಂಗ್ರೆಸ್. ಇಂಥದೊಂದು ಕುತೂಹಲಕಾರಿ ಮಾಹಿತಿಯನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಹಿರಂಗಗೊಳಿಸಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜವಾಬ್ದಾರಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದಸಿದ್ದರಾಮಯ್ಯ ಅವರು ಈ ವಿಷಯ ತಿಳಿಸಿದ್ದಾರೆ.  ಗ್ರಾಮಮಟ್ಟದಿಂದಲೇ ಮಹಿಳಾ ಸಶಕ್ತೀಕರಣಕ್ಕೆ ಕಾಂಗ್ರೆಸ್ ಮುಂದಾಗಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್‍ನವರು ಯಥಾಸ್ಥಿತಿವಾದಿಗಳು. ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಮಹಿಳೆ ಇರುವುದನ್ನು ಬಿಟ್ಟರೆ ಉಳಿದ ಕ್ಷೇತ್ರಗಳಲ್ಲಿ ಅವರು ಮಹಿಳೆಯರಿಗೆ ಆದ್ಯತೆನೀಡುವುದಿಲ್ಲ ಎಂದು ಕುಟುಕಿದ್ದಾರೆ. ಮಹಿಳೆಯರಿಗಾಗಿ ಮೋದಿ ಏನೂ ಮಾಡಿಲ್ಲ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಒಂದು ವರ್ಷ ಕಳೆದರೂ, ದಲಿತರು, ಬಡವರು ಮತ್ತು ಮಹಿಳೆಯರ ಬಗ್ಗೆ ಯಾವುದೇ ಕಾರ್ಯಕ್ರಮ ತಂದಿಲ್ಲ. ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ಕೊಡಬೇಕೆಂಬ ಕಲ್ಪನೆ ಹುಟ್ಟು ಹಾಕಿದ್ದೇ ಕಾಂಗ್ರೆಸ್. ಇದು ಪಂಚಾಯಿತಿ ಚುನಾವಣೆಯಲ್ಲಿ ಸಾಬೀತಾಗಿದೆ. ನಾವು ಪಂಚಾಯಿತಿ ಚುನಾವಣೆಯಲ್ಲಿ ಶೇ.50ರಷ್ಟು ಮಹಿಳಾ ಮೀಸಲು ಘೋಷಿಸಿದ್ದೆವು. ಇದರ ಪರಿಣಾಮವಾಗಿ ಈ ಬಾರಿಯ ಚುನಾವಣೆಯಲ್ಲಿ 50 ಸಾವಿರ ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ. ರಾಜ್ಯದಲ್ಲಿರುವ 5830 ಗ್ರಾಮ ಪಂಚಾಯಿತಿಗಳ ಪೈಕಿ ಸುಮಾರು 3000ದಷ್ಟು ಪಂಚಾಯಿತಿಯ ಅಧ್ಯಕ್ಷರಾಗಿ ಮಹಿಳೆಯರು ಆಯ್ಕೆಗೊಳ್ಳಲಿದ್ದಾರೆ. ಜತೆಗೆ ಇವರ ಅಧಿಕಾರ ಅವಧಿಯನ್ನು 5 ವರ್ಷಕ್ಕೆ ನಿಗದಿ
ಮಾಡಿರುವುದರಿಂದ ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡಬಹುದು ಎಂದರು. ಸಿದ್ದರಾಮಯ್ಯನವರ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್‍ನವರು ಭಾರಿ ಅಪಪ್ರಚಾರ ನಡೆಸಿದರು. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. 24 ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಸ್ಥಾನ ಗೆದ್ದಿದ್ದಾರೆ. 43 ಸಾವಿರ ಸ್ಥಾನಗಳಲ್ಲಿ ನಾವು ಗೆದ್ದಿದ್ದೇವೆ. ಇನ್ನೇನು ನಾವು ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂದು ಕನಸು ಕಾಣುತ್ತಿದ್ದ ಬಿಜೆಪಿಯವರಿಗೆ ಉತ್ತರ ಕರ್ನಾಟಕದ ಒಂದೇ ಒಂದು ಜಿಲ್ಲೆಯಲ್ಲಿ ನಮಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಡಿಕೇರಿಯಲ್ಲಿ ಮಾತ್ರ ಬಿಜೆಪಿಗೆ ಅಸ್ತಿತ್ವ ಇದೆ. ಜೆಡಿಎಸ್‍ಗೆ ಬೆಂಗಳೂರಿನ ಸುತ್ತಲಿನ ಒಂದೆರಡು ಜಿಲ್ಲೆಯಲ್ಲಿ ಮಾತ್ರ ಅಸ್ತಿತ್ವ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಭದ್ರವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.