ಕಬ್ಬನ್ ಪಾರ್ಕ್ ಪ್ರಾಧಿಕಾರಕ್ಕೆ ಒಪ್ಪಿಗೆ
ವಿವಾದಿತ ಕಬ್ಬನ್ ಪಾರ್ಕ್ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಒಪ್ಪಿಗೆ ನೀಡಿದ್ದಾರೆ. ಪ್ರಾಧಿಕಾರ ರಚನೆ ಸಂಬಂಧ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು...
ಬೆಂಗಳೂರು: ವಿವಾದಿತ ಕಬ್ಬನ್ ಪಾರ್ಕ್ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಒಪ್ಪಿಗೆ ನೀಡಿದ್ದಾರೆ.
ಪ್ರಾಧಿಕಾರ ರಚನೆ ಸಂಬಂಧ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಹೀಗಾಗಿ ಕಳೆದ 6 ತಿಂಗಳಿಂದ ಈ ಪ್ರಸ್ತಾಪ ನನೆಗುದಿಗೆ ಬಿದ್ದಿತ್ತು. ಉದ್ದೇಶಿತ ಪ್ರಾಧಿಕಾರಕ್ಕೆ ಉದ್ಯಮಿ ಕಿರಣ್ ಮುಜುಂದಾರ್ ಷಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಹಾಗೂ ಪ್ರವೇಶ ಶುಲ್ಕ ವಿಧಿಸುವ ಪ್ರಸ್ತಾಪ ಈ ಇಬ್ಬರು ಸಚಿವರ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಇನ್ನೊಂದು ಸುತ್ತಿನ ಸಭೆ ನಡೆದಿದ್ದು, ಸಚಿವರಾದ ಶಾಮನೂರು ಶಿವಶಂಕರಪ್ಪ, ಆರ್.ವಿ.ದೇಶಪಾಂಡೆ, ವಾರ್ತಾ ಸಚಿವ ರೋಷನ್ ಬೇಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದು, ಸೂಕ್ತ ಪ್ರಸ್ತಾಪ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆಯಾಗಲಿದೆ. ಪ್ರಾಧಿಕಾರದ ಸ್ವರೂಪ, ಮಾರ್ಗಸೂಚಿ ಹಾಗೂ ಇನ್ನಿತರ ವಿಷಯಗಳನ್ನು ಒಳಗೊಂಡ ಪ್ರಸ್ತಾಪವನ್ನು ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಿದ್ದಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಿದ್ದಾರೆ.
ಪ್ರಾಧಿಕಾರದ ಸ್ವರೂಪ ಏನು?:
ಮೂಲಗಳ ಪ್ರಕಾರ ಕಬ್ಬನ್ ಪಾರ್ಕ್ ನ ಸಮಗ್ರ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗುತ್ತದೆ. ಇದಕ್ಕಾಗಿ ಖಾಸಗಿ ಸಹಭಾಗಿತ್ವವನ್ನು ಸರ್ಕಾರ ಅಪೇಕ್ಷಿಸುತ್ತಿದೆ. ಉದ್ಯಾನಕ್ಕೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವುದು, ಪ್ರಾಧಿಕಾರ ವತಿಯಿಂದ ಆಯೋಜಿಸಲಾಗುತ್ತದೆ.
ಜತೆಗೆ ಬಾಲಭವನ, ಮತ್ಸ್ಯಾಲಯ, ಚಿಣ್ಣರ ಉದ್ಯಾನಗಳ ಸೌಲಭ್ಯವನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಪ್ರಾಧಿಕಾರ ರಚನೆಯಾದರೂ ಕಬ್ಬನ್ ಪಾರ್ಕ್ ಮಾಲೀಕತ್ವ ತೋಟಗಾರಿಕೆ ಇಲಾಖೆ ಬಳಿಯೇ ಇರಲಿದೆ. ಹಾಲಿ ಇರುವ ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಪ್ರವಾಸಿಗರನ್ನು ಸೆಳೆಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.
ಏನಿದು ಪ್ರಾಧಿಕಾರ ?
2014--15ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಟೂರಿಸಂ ವಿಷನ್ ಗ್ರೂಪ್ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಅದರ ಭಾಗವಾಗಿ ಕಬ್ಬನ್ ಪಾರ್ಕ್ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಚಿಂತನೆ ನಡೆಸಲಾಗಿತ್ತು. ಇಂಗ್ಲೆಂಡ್‍ನಲ್ಲಿ ಪ್ರವಾಸಿ ತಾಣಗಳು ಮತ್ತು ಸ್ಮಾರಕಗಳನ್ನು ರಕ್ಷಣೆ ಮಾಡಲು ನಿರ್ಮಿಸಿರುವ ಇಂಗ್ಲಿಷ್ ಹೆರಿಟೇಜ್ ಎಂಬ ಸ್ವಾಯತ್ಥ ಸಂಸ್ಥೆಯ ಮಾದರಿಯಲ್ಲಿ ಈ ಪ್ರಾಧಿಕಾರ ರಚನೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಇದಕ್ಕೆ ತೋಟಗಾರಿಕೆ ಇಲಾಖೆಯಿಂದಲೇ ವಿರೋಧ ವ್ಯಕ್ತವಾಗಿತ್ತು.
ಪ್ರಾಧಿಕಾರ ರಚನೆಯಾದರೆ ಕಬ್ಬನ್ ಪಾರ್ಕ್ ಮೇಲೆ ತೋಟಗಾರಿಕೆ ಇಲಾಖೆ ಹೊಂದಿರುವ ಅಧಿಕಾರ ತಪ್ಪಿ ಹೋಗುತ್ತದೆ. ಜತೆಗೆ 6 ಜನ ಸಾರ್ವಜನಿಕರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಿ ಅವರಲ್ಲಿ ಒಬ್ಬರು ಉಪಾಧ್ಯಕ್ಷರಾಗಿರಬೇಕೆಂಬ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗಿತ್ತು. ಜತೆಗೆ ಪಾರ್ಕ್ ನಲ್ಲಿ ವಾಯು ವಿಹಾರ ನಡೆಸುವುದಕ್ಕೂ ಶುಲ್ಕ ವಿಧಿಸುವುದಕ್ಕೆ ತೋಟಗಾರಿಕೆ ಇಲಾಖೆ ವಿರೋಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

