ಜಿಲ್ಲಾ ಸುದ್ದಿ

ಬೆಂಗಳೂರಲ್ಲಿ ಸರಗಳ್ಳರ ಕೈಚಳಕ: ಬರೊಬ್ಬರಿ 11 ಕಡೆ ಕಳ್ಳತನ

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಗುರುವಾರ ಒಂದೇ ದಿನ ನಗರದ 11 ಪ್ರದೇಶಗಳಲ್ಲಿ ಸರಗಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

ಬೆಂಗಳೂರಲ್ಲಿ ಸರಗಳ್ಳರ ಕೈಚಳಕ: ಬರೊಬ್ಬರಿ 11 ಕಡೆ ಕಳ್ಳತನ
ಸರಗಳ್ಳರ ಕೈಚಳಕ
Published On :

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಗುರುವಾರ ಒಂದೇ ದಿನ ನಗರದ 11 ಪ್ರದೇಶಗಳಲ್ಲಿ ಸರಗಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

ಕಾಮಾಕ್ಷಿಪಾಳ್ಯ, ವಿಜಯನಗರ, ಬಸವೇಶ್ವರನಗರ, ಕೆಂಗೇರಿ, ಗಿರಿನಗರ ಸೇರಿದಂತೆ ನಗರದ 10 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಸರಗಳ್ಳರು ಕೈಚಳಕ ತೋರಿದ್ದಾರೆ. ಒಂದು ಕಡೆ ನಡೆದ ಸರಗಳ್ಳತನದ ಮಾಹಿತಿ ಹಿಡಿದು ಹೊರಟ ಪೊಲೀಸರಿಗೆ ಮತ್ತೊಂದು ಕಡೆ ಸರಗಳ್ಳತನ ನಡೆದ ಕುರಿತು ಮಾಹಿತಿ ಬರುತ್ತಿತ್ತು. ಅದನ್ನು ಆಧರಿಸಿ ಹೊರಟರೆ ಇನ್ನೊಂದು ಕಡೆ ಸರ ಕಳವು ನಡೆದ ಮಾಹಿತಿ ವಾಕಿಯಲ್ಲಿ ಕೇಳಿ ಬರುತ್ತಿತ್ತು.

ಹೀಗೆ ಬೆಳಿಗ್ಗೆ 7 ರಿಂದ ಆರಂಭಗೊಂಡ ಸರಗಳ್ಳತನ ಕೃತ್ಯಗಳು ಮಧ್ಯಾಹ್ನ 12 ಗಂಟೆಯಾದರೂ ನಿಂತಿರಲಿಲ್ಲ. ಮಾಹಿತಿ ಬಂದ ಕಡೆಗಳೆಲ್ಲಾ ಧಾವಿಸುತ್ತಿದ್ದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರಾದರೂ ಆದರೆ ಕಳ್ಳರು ಮಾತ್ರ ಅವರಿಗೆ ಚಳ್ಳೆಹಣ್ನು ತಿನ್ನಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದರು. ಹೀಗಾಗಿ ಬೇರೆಲ್ಲಾ ಕೆಲಸಗಳನ್ನು ಬಿಟ್ಟು ಸರಗಳ್ಳರ ಹಿಂದೆ ನಗರದ ಪಶ್ಚಿಮ, ದಕ್ಷಿಣ, ಉತ್ತರ ವಿಭಾಗದ ಪೊಲೀಸರು ಬಿದ್ದಿದ್ದು ಸರಗಳ್ಳರ ಪತ್ತೆಗಾಗಿ ಬೆವರು ಹರಿಸತೊಡಗಿದ್ದಾರೆ.

ಬೆಳಿಗ್ಗೆ 7 ಕ್ಕೆ ಕಾಮಾಕ್ಷಿಪಾಳ್ಯದ ಕೆಹೆಚ್‍ಬಿ ಕಾಲೋನಿಯ ಅಕ್ಕಗ್ರಾಮ ಲೇಔಟ್‍ನಲ್ಲಿ ರಂಗೋಲಿ ಹಾಕುತ್ತಿದ್ದ ವೃದ್ಧೆ ದಾಕ್ಷಾಯಿಣಿ (80) ಎಂಬುವವರ 80 ಗ್ರಾಂ ಚಿನ್ನದ ಸರವನ್ನು ಕಪ್ಪುಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಕಸಿದುಕೊಂಡು ಹೋಗಿದ್ದಾರೆ. ಅಲ್ಲದೆ ಅದೇ ಕಾಲೋನಿಯ ಟೆಲಿಕಾಂ ಕಚೇರಿ ಹಿಂಭಾಗಕ್ಕೆ ತೆರಳಿದ ಕಳ್ಳರು ಬೆಳ್ಳಗ್ಗೆ 8ಗಂಟೆ ವೇಳೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಜಗದಾಂಬ (65) ಅವರ 70 ಗ್ರಾಂ ಚಿನ್ನದ ಸರಕಸಿದು ಪರಾರಿಯಾಗಿದ್ದಾರೆ.

ಬಸವೇಶ್ವರನಗರದ ಬಿಇಎಂಎಲ್ ಲೇಔಟ್‍ನ ಓಂಶಕ್ತಿ ದೇವಾಲಯದ ಬಳಿ ಬೆಳಿಗ್ಗೆ 7ರಲ್ಲಿ ವಾಕಿಂಗ್ ಮಾಡುತ್ತಿದ್ದ ಸತ್ಯಭಾಮ ಅವರ 60 ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಗಳು ಕಸಿದಿದ್ದರೆ, ಸುಬ್ರಮಣ್ಯಪುರದ ಉತ್ತರಹಳ್ಳಿಯ ಚೈತನ್ಯ ಟೆಕ್ನೊ ಸ್ಕೂಲ್ ಬಳಿ ವಾಕಿಂಗ್ ಮಾಡುತ್ತಿದ್ದ ವಿಶಾಲಾಕ್ಷಿ (72) ಅವರ 32 ಗ್ರಾಂ ಸರವನ್ನು ಬೆಳಿಗ್ಗೆ 8ರಲ್ಲಿ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.  ಈ ಮಧ್ಯೆ ಚಂದ್ರಲೇಔಟ್‍ನ ಕಲ್ಯಾಣನಗರದಲ್ಲಿ ಬೆಳಿಗ್ಗೆ 7.30ರಲ್ಲಿ ಮನೆ ಮುಂಭಾಗ ವಾಕಿಂಗ್ ಮಾಡುತ್ತಿದ್ದ ಇಂದಿರಮ್ಮ (76 ವರ್ಷ) ಅವರ 40 ಗ್ರಾಂ ಮಾಂಗಲ್ಯ ಸರವನ್ನು ಕಸಿದು ಕಳ್ಳರು ಪರಾರಿಯಾಗಿದ್ದಾರೆ.

ಕೆಂಗೇರಿ ಉಪನಗರದ ಲಲಿತಮ್ಮ (75) ಅವರು ಬೆಳಿಗ್ಗೆ 10.30 ಗಂಟೆ ಸುಮಾರಿನಲ್ಲಿ ಹತ್ತಿರದ ರಾಘವೇಂದ್ರ ಮಠಕ್ಕೆ ಹೋಗಿ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಅವರ ಕತ್ತಿನಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಕಳ್ಳರು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಬೆಳಿಗ್ಗೆ 8.15ರ ಸುಮಾರಿನಲ್ಲಿ ವಿಜಯನಗರದ ಆರ್ ಪಿಸಿ ಬಡಾವಣೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಶುಭಾರಾಣಿ (35) ಎಂಬ ಮಹಿಳೆಯ ಚಿನ್ನದ ಸರವನ್ನು ದುಷ್ಕರ್ಮಿಗಳು ಕಸಿದಿದ್ದಾರೆ.

ರಾಜರಾಜೇಶ್ವರಿನಗರದ ಬಿಎಚ್‍ಇಎಲ್ ಬಡಾವಣೆಯಲ್ಲಿ ಮಧ್ಯಾಹ್ನ 12.20ರಲ್ಲಿ ಮನೆ ಮುಂದೆ ನಿಂತಿದ್ದ ಸುಷ್ಮಾ ಅವರ ಕತ್ತಿಗೆ ಕೈ ಹಾಕಿದ ಕಳ್ಳರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಗಿರಿನಗರದ ಬೈರಪ್ಪ ಬ್ಲಾಕ್‍ನ ಶಾಂತಮ್ಮ (62) ಅವರು ಬೆಳಿಗ್ಗೆ 9ಗಂಟೆಯ ಸುಮಾರಿನಲ್ಲಿ ಮೊಮ್ಮಗನನ್ನು ಸ್ಕೂಲ್‌ಗೆ ಬಿಟ್ಟು ಬರುವಾಗ ಅವರ ಕತ್ತಿನಲ್ಲಿದ್ದ 105 ಗ್ರಾಂ ತೂಕದ ಮಾಂಗಲ್ಯಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಶುಭ ಸಮಾರಂಭಕ್ಕೆ ಹೋಗಿ ಮನೆಗೆ ಬಂದಿದ್ದ ಗಿರಿನಗರದ ಬೈರಪ್ಪ ಗಾರ್ಡನ್‌ನ ಶಾಂತಮ್ಮ ಅವರು ಮೊಮ್ಮಗನನ್ನು ಸ್ಕೂಲ್‌ಗೆ ಬಿಟ್ಟು ಬರಲು ಹೋಗಿದ್ದರು. ಬೆಳಗ್ಗೆ 8.55ರಲ್ಲಿ ಮೊಮ್ಮಗನನ್ನು ಸ್ಕೂಲ್‌ಗೆ ಬಿಟ್ಟು ಮನೆಗೆ ನಡೆದುಕೊಂಡು ಬರುವಾಗ ಹಿಂದಿನಿಂದ ಅವರಿಗೆ ಗೊತ್ತಾಗದಂತೆ ಪಲ್ಸರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು 105 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಮಾತ್ರದಲ್ಲಿ ಕಸಿದುಕೊಂಡು ಹೋಗಿದ್ದಾರೆ. ಶಾಂತಮ್ಮ ಅವರು ಏನಾಯಿತು ಎಂದು ಕತ್ತು ಮುಟ್ಟಿ ನೋಡಿಕೊಳ್ಳುವಷ್ಟರಲ್ಲಿ ಸರ ನಾಪತ್ತೆಯಾಗಿತ್ತು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ರಾಜಧಾನಿ ಬೆಂಗಳೂರಿನಲ್ಲಿ ಇಂದು ಸರಣಿ ಸರಗಳ್ಳತನ ಪೊಲೀಸರ ನಿದ್ದೆ ಗೆಡಿಸಿದ್ದು, ಬೆಳಿಗ್ಗೆಯಿಂದ ನಗರದ ಪಶ್ಚಿಮ ದಕ್ಷಿಣ ವಿಭಾಗಗಳ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿದ್ದರೂ ಸರಗಳ್ಳರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ಈ ಕೃತ್ಯಗಳನ್ನು ನೋಡಿದರೆ ನಗರದಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡುವುದು ಕಷ್ಟವಾಗಿ ಹೋಗಿದೆ. ಬೆಳಿಗ್ಗೆ ಇರಲಿ ಸಂಜೆಯಾಗಿರಲಿ ರಣಹದ್ದಿನಂತೆ ಕಾದು ಕುಳಿತಿರುವ ಸರಗಳ್ಳರು ತಮ್ಮ ಕೈಚಳಕ ತೋರಿ ಆತಂಕ ಉಂಟು ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.