ಬೆಂಗಳೂರು ವಿವಿ ಕುಲಪತಿ ಕಚೇರಿಯಲ್ಲಿ ಕಡತ ಕಳವು
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿಯಲ್ಲಿ ಕಡತಗಳು ನಾಪತ್ತೆಯಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ...

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿಯಲ್ಲಿ ಕಡತಗಳು ನಾಪತ್ತೆಯಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ
ದೂರು ದಾಖಲಿಸಿದೆ.
ಕುಲಪತಿಗಳ ಕಚೇರಿ ಹಿಂಭಾಗದ ಕಾರಿಡಾರ್‍ನ ವೆಂಟಿಲೇಟರನ್ನು (ಕಿಟಕಿ) ಕತ್ತರಿಸಿ ಕೋಣೆ ಪ್ರವೇಶಿಸಲಾಗಿದೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ವಿವಿ ಸಿಬ್ಬಂದಿ ಕಚೇರಿ ಬಾಗಿಲು ತೆರೆದಾಗ ಕಡತಗಳು ಚೆಲ್ಲಾಪಿಲ್ಲಿಯಾಗಿರುವುದು ಗಮನಕ್ಕೆಬಂದಿದೆ. ತಕ್ಷಣ ಈ ಸಂಬಂಧ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೆ, ಕಚೇರಿಯಲ್ಲಿದ್ದ ಯಾವ ಕಡತಗಳು ಕಳವಾಗಿವೆ ಎಂಬ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹಾಗೂ ವಿವಿ ಸಿಬ್ಬಂದಿ ತಿಳಿಸಿದ್ದಾರೆ. ಈ ಕುರಿತು ಯಾರ ಮೇಲೂ ಅನುಮಾನವಿಲ್ಲ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ರಾತ್ರಿ ವೇಳೆ ಕಚೇರಿ ಆವರಣದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿರುತ್ತದೆ. ಘಟನೆ ನಡೆದ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಇದ್ದರು. ಈ ಬಗ್ಗೆ ಅವರ ಬಳಿ ವಿಚಾರಣೆ ನಡೆಸಿ, ನೋಟಿಸ್ ನೀಡಲಾಗುವುದು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ಕಡತ ಕಳವು?
ಕಳೆದ ಒಂದು ವರ್ಷದಿಂದ ಪರೀಕ್ಷಾ ವಿಭಾಗದಲ್ಲಿ ಹಲವು ಅಕ್ರಮಗಳು ನಡೆದಿರುವುದು ಕಂಡು ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ತನಿಖೆಯೂ ನಡೆಯುತ್ತಿದೆ. ಅಲ್ಲದೆ, ವಿವಿಯಲ್ಲಿ ಹೊಸ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದೆ. ಇವುಗಳು ಸೇರಿದಂತೆ ಕುಲಪತಿಗಳ ಕಚೇರಿಯಲ್ಲಿ ಬಹುಮುಖ್ಯವಾದ ಕಡತಗಳನ್ನು ಇರಿಸಲಾಗಿರುತ್ತದೆ. ಈ ಕಡತಗಳು ಕಳುವಾಗಿರುವ ಸಾಧ್ಯತೆ ಇದೆ.
ಇದಲ್ಲದೆ ಕುಲಪತಿ ಕಚೇರಿ ಸುರಕ್ಷತೆ ಅರಿವಿದ್ದರೂ ಕೊಠಡಿಯಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿಲ್ಲ.. ವಿವಿಯ 50 ವರ್ಷದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕುಲಪತಿ ಕಚೇರಿಯಲ್ಲಿ ಕಡತಗಳು ಕಾಣೆಯಾಗಿವೆ. ಈ ಹಿಂದೆ ವಿವಿ ಆವರಣದಲ್ಲಿ ಗಂಧದ ಮರದ ಕಳ್ಳತನ ಹಾಗೂ ವಿಭಾಗಗಳಲ್ಲಿ ಕಡತಗಳ ಕಳ್ಳತನ ಜರುಗಿತ್ತು. ವಿವಿಯಲ್ಲಿ ಸುರಕ್ಷತೆಯ ವೈಫಲ್ಯವೇ ಕಡತಗಳ ಕಳ್ಳತನಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಜೂ. 8ರಂದು ಉನ್ನತ ಪರಿಷತ್‍ನಲ್ಲಿ ಸಭೆ ಇದ್ದುದರಿಂದ ಜ್ಞಾನಭಾರತಿಗೆ ಭೇಟಿ ನೀಡಲಾಗಿಲ್ಲ. ಕಡತಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಆದರೆ, ಯಾವ ಕಡತಗಳು ಕಳ್ಳತನವಾಗಿವೆ ಎಂಬುದು ನಿಖರವಾಗಿ ತಿಳಿದಿಲ್ಲ. ಈ ಕುರಿತು ಮಂಗಳವಾರ ಹೆಚ್ಚಿನ ಮಾಹಿತಿ ದೊರೆಯಲಿದೆ.
-ಪ್ರೊ. ಬಿ. ತಿಮ್ಮೇಗೌಡ,
ಕುಲಪತಿ, ಬೆಂಗಳೂರು ವಿವಿ
ವಿವಿ ಕುಲಪತಿಗಳ ಕಚೇರಿಯಲ್ಲಿ ಹಲವು ಕಡತಗಳು ನಾಪತ್ತೆಯಾಗಿವೆ. ಪೊಲೀಸರು ರಾತ್ರಿವರೆಗೂ ಪರಿಶೀಲನೆಯಲ್ಲಿ ತೊಡಗಿದ್ದರು. ಆದರೆ, ನಾಪತ್ತೆಯಾಗಿರುವ ಕಡತಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುವುದು.
-ಸಂದೀಪ್ ಪಾಟೀಲ್,
ಡಿಸಿಪಿ, ಸೆಂಟ್ರಲ್ ವಿಭಾಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


