ಬೆಳ್ಳಂದೂರು, ಅಗರ ಕೆರೆಗಳ ಸುತ್ತ ವಿಶೇಷ ಆರ್ಥಿಕ ವಲಯ ವಿರೋಧಿಸಿ ನಿವಾಸಿಗಳ ಪ್ರತಿಭಟನೆ
ಬೆಳ್ಳಂದೂರು ಹಾಗೂ ಅಗರ ಕೆರೆಗಳ ಸುತ್ತ `ವಿಶೇಷ ಆರ್ಥಿಕ ವಲಯ' ರೂಪಿಸುತ್ತಿರುವ ಸರ್ಕಾರದ ಯೋಜನೆ ವಿರೋಧಿಸಿ ಕೋರಮಂಗಲ ಹಾಗೂ ಎಚ್‍ಎಸ್‍ಆರ್ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು...

ಹೆಬ್ಬಗೋಡಿ: ಬೆಳ್ಳಂದೂರು ಹಾಗೂ ಅಗರ ಕೆರೆಗಳ ಸುತ್ತ `ವಿಶೇಷ ಆರ್ಥಿಕ ವಲಯ' ರೂಪಿಸುತ್ತಿರುವ ಸರ್ಕಾರದ ಯೋಜನೆ ವಿರೋಧಿಸಿ ಕೋರಮಂಗಲ ಹಾಗೂ ಎಚ್‍ಎಸ್‍ಆರ್ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು.
change.org ಎಂಬ ವೆಬ್ ತಾಣದ ಮೂಲಕ `ಎಸ್‍ಇಜೆಡ್' ಯೋಜನೆಗೆ ಸ್ಥಗಿತಕ್ಕೆ ಅಭಿಯಾನ ಅರಂಭವಾಗಿದ್ದು, ಈ ಕಾರ್ಯದಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿತ್ತು. ಅಭಿಯಾನಕ್ಕೆ ಜಾಲತಾಣದ ಮೂಲಕ 3,752 ಮಂದಿಯ ಸಹಿ ದೊರೆತಿದ್ದು, ಮುಂದಿನ ಭಾಗವಾಗಿ ಪ್ರತಿಭಟನೆ ನಡೆಸಲಾಯಿತು. `ಮಾಲ್ ಬೇಡ, ನೀರು ಬೇಕು' ಎಂಬ ಘೋಷಣೆ ಕೂಗಿದ ನಿವಾಸಿಗಳು, ಯೋಜನೆಯನ್ನು ಹಿಂದಕ್ಕೆ ಪಡೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಎಸ್‍ಇಜೆಡ್ ಯೋಜನೆಯಲ್ಲಿ ಪ್ರಮುಖ ಪಾಲುದಾರರಾಗಿರುವ `ಮಂತ್ರಿ ಟೆಕ್ ಝೋನ್' ಹಾಗೂ `ಸಾಲಾರ್ ಪುರಿಯಾ' ಸಂಸ್ಥೆಗಳು ಕೆರೆಯ ದಂಡೆಯಲ್ಲಿ ಅಕ್ರಮವಾಗಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದು, ಇದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗುವುದಿಲ್ಲ.
ಕಾಮಗಾರಿಯಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಇದರ ಪರಿಣಾಮ ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ನೀರು ಅಪಾಯದ ಮಟ್ಟದಲ್ಲಿ ಹರಿಯುವ ಸಾಧ್ಯತೆಯಿದೆ. ಈ ಎರಡೂ ಸಂಸ್ಥೆಗಳು ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಕಾಮಗಾರಿ ಕೈಗೊಂಡಿದ್ದು, ನಿಯಮಾವಳಿ ಉಲ್ಲಂಘಿಸಿವೆ ಎಂದು ನಿವಾಸಿಗಳು ದೂರಿದರು. ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಈ ವಿವಾದ ನ್ಯಾಯಾಲಯದಲ್ಲಿದೆ. ಆದರೆ, ಸ್ಥಳೀಯ ಪರಿಸರದ ಮೇಲೆ ಪ್ರತಿಕೂಲ ಪ್ರಭಾವ ಬೀರುವ ಯೋಜನೆಗಳಿಗೆ ಸರ್ಕಾರ ಬೆಂಬಲ ನೀಡಬಾರದು ಎಂದರು.
ಪ್ರತಿಭಟನೆಯಲ್ಲಿ ಒಂದು ಗುಂಪು ಯೋಜನೆ ಪರ ಹಾಗೂ ಮತ್ತೊಂದು ಗುಂಪು ಯೋಜನೆ ವಿರುದ್ಧ ಪ್ರತಿಭಟಿಸಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಕಾಮಗಾರಿಗೆ ರೈತರು ಕೂಡ ಭೂಮಿ ನೀಡಿದ್ದು, ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇವೆ.
ನಮಗೂ ಕೆರೆಯ ರಕ್ಷಣೆ ಬಗ್ಗೆ ಕಾಳಜಿಯಿದ್ದು, ಕಾಮಗಾರಿಯಲ್ಲಿ ಕೆರೆ ಒತ್ತುವರಿ ನಡೆದಿದ್ದರೆ ಅದರ ವಿರುದಟಛಿ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು. ಸುಮಾರು 96 ಎಕರೆ ಜಾಗ ರೈತರಿಗೆ ಸೇರಿದೆ. ಯೋಜನೆಗಾಗಿ `ಜಾಯಿಂಟ್ ವೆಂಚರ್' ಒಪ್ಪಂದದಂತೆ ಭೂಮಿ ನೀಡಲಾಗಿದೆ. ಅಕ್ರಮದ ವಿರುದಟಛಿ ಪ್ರತಿಭಟಿಸುತ್ತಿರುವವರು ರೈತರ ಸ್ವಂತ ಜಮೀನಿಗೂ ಕುತ್ತು ತರುತ್ತಿದ್ದಾರೆ.ಕಾಮಗಾರಿಯಲ್ಲಿ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು ಯೋಜನೆ ಸ್ಥಗಿತಗೊಳಿಸಬಾರದು ಎಂದು ರೈತರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


