ಸೇತುವೆ ಕೆಳಗಿನ ತ್ಯಾಜ್ಯ ತೆರವುಗೊಳಿಸಲು ಬಿಬಿಎಂಪಿ, ಬಿಎಂಆರ್‍ಸಿಎಲ್ ಕೆಸರೆರೆಚಾಟ
ಮೆಟ್ರೋ ಮಾರ್ಗದಲ್ಲಿ ನಿರ್ಮಾಣ ಕಾಮಗಾರಿ ವ್ಯರ್ಥ, ಕಸ ಹಾಕುತ್ತಿರುವುದರಿಂದ ಉಂಟಾಗುತ್ತಿರುವ ತೊಂದರೆ ಸರಿಪಡಿಸಲು ಸೂಕ್ತ ಕ್ರಮ ಕೈ ಗೊಳ್ಳುವ ಬದಲು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವ ಬಿಬಿಎಂಪಿ ಹಾಗೂ ಬಿಎಂಆರ್ ಸಿಎಲ್ ವರ್ತನೆಗೆ ಸುಭಾಷ ಬಿ.ಅಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ...

ಬೆಂಗಳೂರು: ಮೆಟ್ರೋ ಮಾರ್ಗದಲ್ಲಿ ನಿರ್ಮಾಣ ಕಾಮಗಾರಿ ವ್ಯರ್ಥ, ಕಸ ಹಾಕುತ್ತಿರುವುದರಿಂದ ಉಂಟಾಗುತ್ತಿರುವ ತೊಂದರೆ ಸರಿಪಡಿಸಲು ಸೂಕ್ತ ಕ್ರಮ ಕೈ ಗೊಳ್ಳುವ ಬದಲು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವ ಬಿಬಿಎಂಪಿ ಹಾಗೂ ಬಿಎಂಆರ್ ಸಿಎಲ್ ವರ್ತನೆಗೆ ಸುಭಾಷ ಬಿ.ಅಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಉಪ ಲೋಕಾಯುಕ್ತರಿಗೆ ಬಿ.ಪ್ಯಾಕ್ ಸಲ್ಲಿಸಿದ್ದ ದೂರಿನ ಬಗ್ಗೆ ಬುಧವಾರ ಬಿ.ಪ್ಯಾಕ್ ಕಾರ್ಯಕರ್ತರು, ಬಿಬಿಎಂಪಿ ಹಾಗೂ ಬಿಎಂಆರ್ ಸಿಎಲ್ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿತ್ತು. ಆದರೆ, ಎರಡು ಸಂಸ್ಥೆಯ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವ ಬದಲು, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪತ್ರ ವ್ಯವಹಾರ ನಡೆಸಿದ್ದರು.
ಮೆಟ್ರೋ ಮೇಲ್ಸೆತುವೆಗಳ ಕೆಳ ಭಾಗದ ಖಾಲಿ ಜಾಗದಲ್ಲಿ ಬಿಬಿಎಂಪಿ, ಬಿಎಂಆರ್ ಸಿಎಲ್, ಕಸ ಸುರಿಯುತ್ತಿದಾದರೆ. ಇದರಿಂದಾಗಿ ಮೆಟ್ರೋ ಸೇತುವೆಗಳ ಕೆಳಭಾಗದಲ್ಲಿ ಗಲೀಜು ಉಂಟಾಗಿ ಮೆಟ್ರೋ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿ. ಪ್ಯಾಕ್ ಸಂಗಟನೆ ಸದಸ್ಯರು 2015ರ ಮಾರ್ಚ್ 24 ರಂದು ಇಂತಹ ಸ್ಥಳಗಳ 700 ಕ್ಕೂ ಅಧಿಕ ಫೋಟೋಗಳನ್ನು ತೆಗೆದು ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ಅವರಿಗೆ ನೀಡಿ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ದೂರು ಸ್ವೀಕರಿಸಿದ ಉಪ ಲೋಕಾಯುಕ್ತರು, ಬಿಬಿಎಂಪಿ ಹಾಗೂ ಬಿಎಂಆರ್ ಸಿಎಲ್ ಗೆ ನೋಟಿಸ್ ಜಾರಿ ಮಾಡಿದ್ದರು. ಅಂತಹ ಸ್ಥಳಗಳ ಸ್ವಚ್ಛಗೊಳಿಸಿ ಈ ಬಗ್ಗೆ ಮೇ 18 ರ ಒಳಗೆ ಖುದ್ದಾಗಿ ಭೇಟಿ ನೀಡಿ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದರು.
ಮೆಟ್ರೋ ಮೇಲ್ಸೇತುವೆಗಳ ಕೆಳಗಿನ ಖಾಲಿ ಜಾಗದಲ್ಲಿ ಕಸ ಬಿದ್ದಿರುವುದಕ್ಕೆ ಬಿಬಿಎಂಪಿ ಹಾಗೂ ಸಾರ್ವಜನಿಕರು ಕಾರಣ. ಹೀಗಾಗಿ, ಅದನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಅವರಿಗೆ ಸೇರಿದ್ದು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡು ಉತ್ತರ ನೀಡಿದ್ದರು. ಹೀಗಾಗಿ, ಮೆಟ್ರೋ ಮೇಲ್ಸೆತುವೆ ಕೆಳಗೆ ಬಿದ್ದಿರುವ ಎಲ್ಲ ವ್ಯರ್ಥ ವಸ್ತುಗಳನ್ನು ತೆರವುಗೊಳಿಸಿ ಈ ಬಗ್ಗೆ ಜೂನ್ 3 ರಂದು ವರದಿ ನೀಡಬೇಕು ಎಂದು ಉಪ ಲೋಕಾಯುಕ್ತರು ಬಿಬಿಎಂಪಿಗೆ ಸೂಚಿಸಿದ್ದರು. ಆದರೆ ಸಿಮೆಂಟ್ ಹಾಗೂ ಇತರ ಗಲೀಜನ್ನು ತೆರವುಗೊಳಿಸುವ ಬದಲು ಬಿಬಿಎಂಪಿ ಅಧಿಕಾರಿಗಳು, ಮೆಟ್ರೆ ಮೇಲ್ಸೆತುವೆ ಕೆಳಗೆ ಬಿದ್ದಿರುವ ಸಿಮೆಂಟ್ ವ್ಯರ್ಥ ಸೇರಿದಂತೆ ವಿವಿಧ ತ್ಯಾಜ್ಯದ 79 ಫೋಟೋಗಳನ್ನು ತೆಗೆದು ಉಪ ಲೋಕಾಯುಕ್ತರಿಗೆ ತೋರಿಸಿದ್ದರು. ಅಲ್ಲದೇ ಕಸ ತೆರವುಗೊಳಿಸುವ ಜವಾಬ್ದಾರಿ ಬಿಎಂಆರ್ ಸಿಎಲ್ ನದ್ದೇ ಆಗಿದೆ ಎಂದು ಉತ್ತರ ನೀಡಿದ್ದರು.
ಅಸಮಾಧಾನಗೊಂಡ ಸುಭಾಷ್ ಅಡಿ, ಒಬ್ಬರನ್ನೊಬ್ಬರನ್ನು ದೂಷಣೆ ಮಾಡುವುದನ್ನು ನಿಲ್ಲಿಸಿ. ಪರಸ್ಪರ ಸಹಕಾರದೊಂದಿಗೆ ಸಮಾನ ಜವಾಬ್ದಾರಿ ತೆಗೆದುಕೊಂಡು ಕಸವನ್ನು ಸ್ವಚ್ಛಗೊಳಿಸಿ ಎಂದು ಎರಡು ಸಂಸ್ಥೆಗಳಿಗೂ ನೋಟಿಸ್ ನೀಡಿದ್ದಾರೆ. ಈ ಸಂಬಂಧ 15 ದಿನಗಳ ಒಳಗೆ ಕ್ರಮಕೈಗೊಂಡಿರುವ ವರದಿ ನೀಡಬೇಕು ಎಂದು ಬಿಬಿಎಂಪಿ ಆಯುಕ್ತರು ಹಾಗೂ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಜೂನ್ 18 ಕ್ಕೆ ಮುಂದೂಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


