ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಈ ವರ್ಷ 221 ರೈತರ ಆತ್ಮಹತ್ಯೆ

ರಾಜ್ಯದಲ್ಲಿ ಈ ವರ್ಷ 221 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ಜೀವನಕ್ಕೆ ಭದ್ರತೆ ಹಾಗೂ ಕೃಷಿಗೆ ಆದ್ಯತೆ ಸೇರಿದಂತೆ...

ರಾಜ್ಯದಲ್ಲಿ ಈ ವರ್ಷ 221 ರೈತರ ಆತ್ಮಹತ್ಯೆ
ಬಿಜೆಪಿ ಮುಖಂಡ ಸಿ.ಟಿ ರವಿ
Published On :

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ 221 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ಜೀವನಕ್ಕೆ ಭದ್ರತೆ ಹಾಗೂ ಕೃಷಿಗೆ ಆದ್ಯತೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾದ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳ ಕುರಿತ ಸಮಗ್ರ ವರದಿಯನ್ನು ಬಿಜೆಪಿ ತಯಾರಿಸಿದೆ. ಇದನ್ನು ಪ್ರತ್ಯೇಕವಾಗಿ ಮುಂದಿನ ವಾರ ಎರಡೂ ಸರ್ಕಾರಗಳಿಗೆ ಅದು ಸಲ್ಲಿಸಲಿದೆ. ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಬಿಜೆಪಿಯ ನಾಯಕರು ಆರು ತಂಡಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದರು. ಈ ಸಂದರ್ಭದಲ್ಲಿ ರೈತರೊಂದಿಗೆ ಸಮಾಲೋಚನೆ ನಡೆಸಿ ಅಲ್ಲಿನ ಸಮಸ್ಯೆಗಳನ್ನೂ ಆಲಿಸಲಾಗಿದೆ. ರಾಜ್ಯ ಸರ್ಕಾರ 191 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದೆ. ಆದರೆ ನಮ್ಮ ಪ್ರಕಾರ ಜನವರಿಯಿಂದ ಈವರೆಗೆ 221 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಬಹುತೇಕ ರೈತರು ಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಇವರ ಭದ್ರತೆಗೆ ಸಮಗ್ರ ಕಾರ್ಯಗಳು ಆಗಬೇಕಿವೆ. ಇದು ಕೇಂದ್ರ ಹಾಗೂ ರಾಜ್ಯ ಎರಡು ಸರ್ಕಾರಗಳಿಗೆ ಸಂಬಂಧಿಸಿದ್ದಾಗಿರುವುದರಿಂದ ಎರಡು ಸರ್ಕಾರಗಳಿಗೆ  ಪ್ರತ್ಯೇಕವಾಗಿ ಸಮಗ್ರ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ 63 ರೈತ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಕೆಲವು ಕಡೆ ರಾಜಕೀಯ ಪ್ರಭಾವದಿಂದ ಈ ಪರಿಹಾರ ನೀಡುವ ಪ್ರಕ್ರಿಯೆ ದುರ್ಬಳಕೆಯಾಗಿದೆ.
ವಾಸ್ತವ ಸಂಗತಿಯನ್ನು ಮಾನವೀಯ ನೆಲೆಯಲ್ಲಿ ಸರ್ಕಾರ ಪರಿಗಣಿಸಬೇಕು. ಕೇವಲ
ತಾಂತ್ರಿಕ ಮಾಹಿತಿಯನ್ನಷ್ಟೇ ಪಡೆದು ಪರಿಹಾರ ನೀಡಿದರೆ ಸರಿ ಇರುವುದಿಲ್ಲ. ಕೆಲವರು ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡಿರುತ್ತಾರೆ. ಇನ್ನು ಕೆಲವರು ಅವಿಭಕ್ತ ಕುಟುಂಬದಲ್ಲಿದ್ದು ಜಮೀನು ಅವರ ಹೆಸರಿನಲ್ಲಿ ಇರುವುದಿಲ್ಲ. ಇವರಿಗೆಲ್ಲ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದು ಸರಿಯಲ್ಲ. ಮಂಡ್ಯದಲ್ಲಿ ಅಂತ್ಯ ಸಂಸ್ಕಾರಕ್ಕೆ 21 ಸಾವಿರ ನೀಡಿದರೆ, ಬೇರೆ ಕಡೆ ಕೇವಲ 1 ಸಾವಿರ ನೀಡಿದ್ದಾರೆ ಎಂದರು. ತಮ್ಮ ಪಕ್ಷ ನೀಡಿರುವ ಸಲಹೆಗಳಲ್ಲಿ ಕೆಲವನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಹಾಗೂ ಇನ್ನು ಕೆಲವನ್ನು ಕೇಂದ್ರ ಜಾರಿಗೆ ತರಬೇಕಿದೆ. ಹೀಗಾಗಿ ಎರಡೂ ಸರ್ಕಾರಗಳಿಗೆ ಪ್ರತ್ಯೇಕ ವರದಿಯನ್ನು ಸಲ್ಲಿಸಲಾಗುತ್ತದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ರೈತರ ಜೀವನಕ್ಕೆ ಆಸರೆಯಾಗಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.

ರೈತರ ಆತ್ಮಹತ್ಯೆಗೆ ಬಿಜೆಪಿ ನೀಡಿರುವ ಕಾರಣಗಳು
ಬೋರ್‍ವೆಲ್ ವಿಫಲವಾಗಿರುವುದರಿಂದ ರೈತರ ಸಾಲದ ಹೊರೆ ಹೆಚ್ಚಾಗಿದೆ. ನೀರಿನ ಕೊರತೆಯಿಂದ ಬೆಳೆಗಳು ಹಾನಿಯಾಗಿದ್ದು, ವಾಣಿಜ್ಯ ಬೆಳೆಗಳ ಮೇಲಿನ ವ್ಯಾಮೋಹದಿಂದ ಒಂದೇ ಬೆಳೆಯನ್ನು ಸತತವಾಗಿ ಬೆಳೆದು ಇಳುವರಿ ಕಡಿಮೆಯಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಇದರಲ್ಲಿ ಹೊಗೆಸೊಪ್ಪು, ಕಬ್ಬು, ಆಲೂಗಡ್ಡೆ, ರೇಷ್ಮೆ ಸೇರಿವೆ.

ಇಳುವರಿ ಖಾತ್ರಿ ಇಲ್ಲದೆ ಕೃಷಿ ಇಲಾಖೆ ದೃಢೀಕರಿಸದ ನಕಲಿ ಬೀಜದ ಹಾವಳಿ ಹೆಚ್ಚಿದೆ. ನಕಲಿ ಗೊಬ್ಬರ, ಕ್ರಿಮಿನಾಶಕ ಕಂಪನಿಗಳ ಹಾವಳಿಯೂ ಸೇರಿದೆ.

ನಿರಂತರ ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಇಳುವರಿ ಕಡಿಮೆ ಆಗಿದೆ. ಸಣ್ಣ ಹಿಡುವಳಿದಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರು ವಿಫಲರಾಗಿದ್ದು, ಅಸಾಂಪ್ರದಾಯಿಕ, ಅವೈಜ್ಞಾನಿಕ ಸಾಗುವಳಿ ಪದಟಛಿತಿ ಅನುಸರಿಸುತ್ತಿದ್ದಾರೆ.

ಸಾಂಪ್ರದಾಯಿಕ ಬೆಳೆಗಳಿಂದ ವಾಣಿಜ್ಯ ಬೆಳೆಗಳಿಗೆ ಬದಲಾವಣೆ ಆಗಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಳ. ಬೀಜ, ರಸಗೊಬ್ಬರದ ದುಬಾರಿ. ಖಾಸಗಿಯವರ ಸಾಲದ ಬಡ್ಡಿ ಅಸಲಿಗಿಂತ ಹೆಚ್ಚು.

ಅವಿಭಕ್ತ ಕುಟುಂಬಗಳಲ್ಲದೇ ಸಮಸ್ಯೆಯ ಹೊಣೆಗಾರಿಕೆ, ವ್ಯವಹಾರ ನಡೆಸುವ ಒತ್ತಡ ಯಜಮಾನನ ಮೇಲಿದೆ.ಶಿಕ್ಷಣ ಬದಲಾವಣೆ ಮೂಲ ಉದ್ಯೋಗದಲ್ಲಿ ವಂಚನೆ ಆಗಿರುವುದರಿಂದ ಪರ್ಯಾಯ ಉದ್ಯೋಗ ಸಿಗುತ್ತಿಲ್ಲ.

ಕಳೆದ ನಾಲ್ಕು ತಿಂಗಳಿಂದ ಹಾಲಿನ ಸಹಾಯಧನವನ್ನೂ ಸರ್ಕಾರ ವಿತರಿಸಿಲ್ಲ. ರೂ. 229 ಕೋಟಿ ಬಿಡುಗಡೆ ಆಗಿಲ್ಲ.ವೈಯಕ್ತಿಕ ಕಾರಣಗಳು, ಖಾಸಗಿ ವೆಚ್ಚಗಳಿಗೆ ಪಡೆದ ಸಾಲಗಳು ರೈತನಿಗೆ ಮುಳುವಾಗುತ್ತಿವೆ

ದೀರ್ಘಾವಧಿ ಪರಿಹಾರ


  •   ಸಮಗ್ರ ಸಾಲನೀತಿ ರೂಪಿಸಿ, ಬೇಕಾದ ಪೂರ್ಣ ಸಾಲವನ್ನು ಒಂದೇ ಕಡೆ ಸಿಗುವಂತೆ ಮಾಡಬೇಕು.
  •  ಎಲ್ಲ ರೈತರಿಗೂ ಬಡ್ಡಿರಹಿತ ಸಾಲ ದೊರೆಯುವಂತೆ ಮಾಡಬೇಕು.
  •  ಬೆಳೆ ನೀತಿ ರೂಪಿಸಿ, ಮಾರುಕಟ್ಟೆ ಬೇಡಿಕೆ ಅಧ್ಯಯನ, ಪ್ರದೇಶವಾರು, ಎಕರೆವಾರು ಕಡ್ಡಾಯ ಬೆಳೆ ನೀತಿ ಶಾಸನಬದ್ಧಗೊಳಿಸಬೇಕು
  •  ಬೆಳೆ ನೀತಿ ಅನ್ವಯ ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗುವಂತೆ ಖಾತ್ರಿ ಬೆಂಬಲ ಬೆಲೆ ನಿಗದಿಪಡಿಸಬೇಕು.
  • ಕೃಷಿಯಲ್ಲಿ ತಾಂತ್ರೀಕರಣ ತರಬೇಕು.  ಸಮಗ್ರ ವೆಚ್ಚ ಖಾತ್ರಿ ಬೆಳೆ ವಿಮೆ ಯೋಜನೆ ಜಾರಿಗೆ ತಂದು, ರೈತ ಕೇಂದ್ರಿತವಾಗಿ ರೂಪಿಸಬೇಕು
  •  ಸಾವಯವ ಸಹಜ ಕೃಷಿ ವ್ಯವಸ್ಥೆ ತರಬೇಕು. ನದಿ ಜೋಡಣೆ, ಕೆರೆ ತುಂಬುವ ಯೋಜನೆಗಳನ್ನುಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು
  • ದಲ್ಲಾಳಿ ಮುಕ್ತ ಉತ್ಪಾದಕ ಮತ್ತು ಗ್ರಾಹಕ ಕೇಂದ್ರಿತ ಮಾರುಕಟ್ಟೆ ವ್ಯವಸ್ಥೆ ಬಲಗೊಳಿಸಬೇಕು
  • ಹಾಲಿನ ಪ್ರೋತ್ಸಾಹಧನ ಕೂಡಲೇ ಪಾವತಿಸಬೇಕು.  ಬೆಳೆ ಪರಿಹಾರ ಘೋಷಿಸಬೇಕು. 5 ಲಕ್ಷದವರೆಗೆ ಸಾಲ-ಬಡ್ಡಿ ಮನ್ನಾ,  ಬೋರ್‍ವೆಲ್ ಸಬ್ಸಿಡಿ, ವಿಮೆ ಪಾಲಿಸಿ ಜಾರಿ ಮಾಡಬೇಕು, ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ಪ್ರತಿ ತಾಲೂಕಿನಲ್ಲಿ ಸ್ಥಾಪಿಸಬೇಕು
  •  ರೈತರಿಗೆ ವಿಶ್ವಾಸ ತುಂಬಲು ಜನಪ್ರತಿನಿಧಿಗಳು, ಯಶಸ್ವಿ ಕೃಷಿಕರು, ತಂತ್ರಜ್ಞರಿಂದ `ವಿಶ್ವಾಸ ಯಾತ್ರೆ' ಕಾರ್ಯಕ್ರಮ ಆಯೋಜಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.