ಆಗಸ್ಟ್ ನಲ್ಲಿ ಪ್ರಕ್ರಿಯೆ ಶುರು, ಐದು ವರ್ಷಗಳ ಬಳಿಕ ಪ್ರಾಧ್ಯಾಪಕರಿಗೆ ಸಿಹಿ ಸುದ್ದಿ
ವರ್ಗಾವಣೆ ಬಯಸಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ರಾಜ್ಯದ ಸರ್ಕಾರಿ ಕಾಲೇಜುಗಳ ಸಾವಿರಾರು ಪ್ರಾಧ್ಯಾಪಕರಿಗೆ ಅಂತೂ ಇಂತೂ ಸಿಹಿ ಸುದ್ದಿ ಸಿಕ್ಕಿದೆ...

ಬೆಂಗಳೂರು:ವರ್ಗಾವಣೆ ಬಯಸಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ರಾಜ್ಯದ ಸರ್ಕಾರಿ ಕಾಲೇಜುಗಳ ಸಾವಿರಾರು ಪ್ರಾಧ್ಯಾಪಕರಿಗೆ ಅಂತೂ ಇಂತೂ ಸಿಹಿ ಸುದ್ದಿ ಸಿಕ್ಕಿದೆ. ಕಾಲೇಜು ಶಿಕ್ಷಣ ಇಲಾಖೆಯು ಆಗಸ್ಟ್ ಮೊದಲ ವಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ಈಗ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.
ಕಳೆದ ಐದು ವರ್ಷಗಳಿಂದ ಸಾರ್ವತ್ರಿಕ ವರ್ಗಾವಣೆಯನ್ನು ಬೇರೆ ಬೇರೆ ಕಾರಣಗಳಿಂದ ಮುಂದೂಡಿದ್ದ ಇಲಾಖೆ, ಈ ಬಾರಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಈ ಮುಂಚೆ ಪ್ರಕಟಿಸಿ, ಬೋಧಕೇತರ ಸಿಬ್ಬಂದಿಗೆ ವರ್ಗಾವಣೆ ಯನ್ನೂ ಪೂರ್ತಿಗೊಳಿಸಿ, ನಂತರ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ಇದಕ್ಕೆ ಕಾರಣ ಬಿಬಿಎಂಪಿ ಚುನಾವಣೆ ಹಾಗೂ ವಿಧಾನಮಂಡಲ ಅಧಿವೇಶನದ ನೆವ.
ವರ್ಗಾವಣೆಗಾಗಿ ಸರದಿಯಲ್ಲಿದ್ದ ಪ್ರಾಧ್ಯಾಪಕರು ಇದರಿಂದ ನಿರಾಶೆಗೊಂಡಿದ್ದರು. `ಕನ್ನಡಪ್ರಭ' ಈ ಸಂಬಂಧ ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ, ವರ್ಗಾವಣೆ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಆರಂಭವಾಗುತ್ತಿರುವ ಸುದ್ದಿ ಪ್ರಾಧ್ಯಾಪಕರಲ್ಲಿ ಸಂತಸ ತಂದಿದೆ. ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ: ಈಗಾಗಲೇ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿರುವ ಸಿಬ್ಬಂದಿ ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಹೇಳಿರುವ ಇಲಾಖೆ, ವರ್ಗಾವಣೆ ಕೌನ್ಸೆಲಿಂಗ್ ಹಾಜರಾಗುವ ಅರ್ಹ ಬೋಧಕ ಸಿಬ್ಬಂದಿ, ವಿಕಲಚೇತನ, ಮಾರಣಾಂತಿಕ ಕಾಯಿಲೆ, ಪತಿ-ಪತ್ನಿ ಪ್ರಕರಣ, ವಿಧವೆ ಈ ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂಲದಾಖಲೆ, ಗುರುತಿನ ಪತ್ರ ಹಾಗೂ ಆನ್‍ಲೈನ್ ಮೂಲಕ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸ್ವೀಕೃತ ಪತ್ರದೊಂದಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ವಿಧವಾ ವಿಶೇಷ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಿಬ್ಬಂದಿ ತಮ್ಮ ಪತಿಯ ಮರಣ ಪ್ರಮಾಣಪತ್ರ ಮಾತ್ರ ಸಲ್ಲಿಸಿದ್ದು, ಈ ಸಂಬಂಧ ಪ್ರಪತ್ರ 3(ಸಿ)ನ್ನು ಸಂಬಂಧಪಟ್ಟ ಪ್ರಾಂಶುಪಾಲರ ದೃಢೀಕರಣದೊಂದಿಗೆ ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಲಾಗಿದೆ.
ಪತಿ-ಪತ್ನಿ ವಿಶೇಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಪತ್ರ 3(ಡಿ)ನ್ನು ಸಂಬಂಧಪಟ್ಟ ಪ್ರಾಂಶುಪಾಲರ ದೃಢೀಕರಣದೊಂದಿಗೆ ಕೌನ್ಸೆಲಿಂಗ್‍ನಲ್ಲಿ ಕಡ್ಡಾಯ ವಾಗಿ ಹಾಜರುಪಡಿಸಬೇಕು, ಒಂದು ವೇಳೆ ಕೇಂದ್ರ ಕಚೇರಿಯಿಂದ ಪರೀಕ್ಷಾ ಪೂರ್ವ ಅವಧಿ ಘೋಷಣೆಯಾಗದೆ ಇರುವಂತಹ ಬೋಧಕ ಸಿಬ್ಬಂದಿ ಕೌನ್ಸೆಲಿಂಗ್‍ಗೆ ಹಾಜರಾದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಹೈ-ಕ ವಲಯಕ್ಕೆ ಅನ್ವಯವಿಲ್ಲ: ಸಂವಿಧಾನದ ಅನುಚ್ಛೇದ 371-ಜೆ ಪ್ರಕಾರ ಹೈದ್ರಾಬಾದ್ ಕರ್ನಾಟಕ ಸ್ಥಳೀಯ ವೃಂದ ರಚನೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಯಥಾಸ್ಥಿತಿಯನ್ನು ಕಾಯ್ದು ಕೊಳ್ಳುವಂತೆ ಆದೇಶಿಸಿ ಮಧ್ಯಂತರ ತೀರ್ಪು ನೀಡಿದೆ. ಹೀಗಾಗಿ ಪ್ರಸ್ತುತ ಹೈದ್ರಾಬಾದ್ ಕರ್ನಾಟಕ ಸ್ಥಳೀಯ ವೃಂದ ರಚನೆಯಾಗಿಲ್ಲದ ಕಾರಣ ಅಂತಹ ಸಿಬ್ಬಂದಿಯನ್ನು 2015-16ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ ಎಂದು ಇಲಾಖೆ ನಿರ್ದೇಶಕರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಲಾಖೆ ಆದೇಶದಲ್ಲೇನಿದೆ?
ಹೊಸ ಆದೇಶದ ಪ್ರಕಾರ, ಸಹ-ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಬೋಧಕರ 2015-16ನೇ ಸಾಲಿನ ಸಾಮಾನ್ಯ ವರ್ಗಾವಣೆ ಕೌನ್ಸೆಲಿಂಗ್ ಅವಧಿ ಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ಹೊಸ ವೇಳಾಪಟ್ಟಿ ಪ್ರಕಟಿಸಿದ್ದು, ಇದರ ಪ್ರಕಾರವೇ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಪ್ರಕ್ರಿಯೆಗಳು ಬೆಂಗಳೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿವೆ.
ಆಗಸ್ಟ್ 3 ಬೆಳಗ್ಗೆ 10ರಿಂದ ಮಧ್ಯಾಹ್ನ 1.30 ಸಹ/ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ಬೋಧಕರ ವಿಶೇಷ ಪ್ರಕರಣಗಳ ದಾಖಲಾತಿ ಪರಿಶೀಲನೆ. ಮಧ್ಯಾಹ್ನ 2.30ರಿಂದ 5.30 ಸಹ/ಸಹಾಯಕ ಪ್ರಾಧ್ಯಾಪಕರ ವಿಶೇಷ ಪ್ರಕರಣಗಳು ಮತ್ತು ಎಲ್ಲ ಅರ್ಹ ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ಬೋಧಕರ ಕೌನ್ಸೆಲಿಂಗ್. ಆಗಸ್ಟ್ 4 ಮತ್ತು 5 ಬೆಳಗ್ಗೆ 10ರಿಂದ ಸಂಜೆ 5 ಸಹ/ಸಹಾಯಕ ಪ್ರಾಧ್ಯಾಪಕರ ಸಾಮಾನ್ಯ ಪ್ರಕರಣಗಳ ಕೌನ್ಸೆಲಿಂಗ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


