ವಿಭಜನೆ ವಿಧೇಯಕಕ್ಕೆ ರಾಜ್ಯಪಾಲರ ಸಹಿಯಾದರೆ ಬಿಬಿಎಂಪಿ ಚುನಾವಣೆ ಅನುಮಾನ?
ಬಿಬಿಎಂಪಿ ಚುನಾವಣೆ ಹಣೆಬರಹ ಇದೀಗ ಸುಪ್ರೀಂ ಕೋರ್ಟ್ ನಿಂದ ರಾಜಭವನದ ಅಂಗಳಕ್ಕೆ ಬಂದು ನಿಂತಿದೆ...

ಬೆಂಗಳೂರು: ಬಿಬಿಎಂಪಿ ಚುನಾವಣೆ ಹಣೆಬರಹ ಇದೀಗ ಸುಪ್ರೀಂ ಕೋರ್ಟ್ ನಿಂದ ರಾಜಭವನದ ಅಂಗಳಕ್ಕೆ ಬಂದು ನಿಂತಿದೆ. ಸರ್ಕಾರ ವಿಧಾನಮಂಡಲದಲ್ಲಿ ಅನುಮೋದಿಸಿರುವ ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ರಾಜ್ಯಪಾಲರು ಆ.3ರೊಳಗೆ ಸಹಿ ಹಾಕಿದರೆ ಚುನಾವಣೆಗೆ ಕಂಟಕ ಖಾತರಿ.
ಹೀಗಾಗಿ, ಆ.3ರಂದು ಅಧಿಸೂಚನೆ ಹೊರಬಿದ್ದು ನಾಮಪತ್ರ ಸಲ್ಲಿಕೆ ಆರಂಭವಾದರೆ ಮಾತ್ರ ಚುನಾವಣೆ ಗ್ಯಾರಂಟಿ ಎಂಬಂತಾಗಿದೆ. ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಗೆ 8 ವಾರ ಗಡುವು ನೀಡಿದ್ದ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಂಡಿದೆ.
ಹೀಗಾಗಿ ಚುನಾವಣೆ ಖಾತರಿ ಎಂಬ ಮಾತು ಒಂದೆಡೆ ಇದೆ. ಆದರೆ, ಚುನಾವಣೆ ಅಧಿಸೂಚನೆಗೆ ಮುನ್ನ ರಾಜ್ಯಪಾಲರು ಬಿಬಿಎಂಪಿ ವಿಭಜನೆಗೆ ಸಹಿ ಹಾಕಿದರೆ ಈಗಿನ ಬಿಬಿಎಂಪಿಯೇ ಅಸ್ತಿತ್ವ ಕಳೆದುಕೊಳ್ಳಲಿದೆ. ಇನ್ಯಾವುದಕ್ಕೆ ಚುನಾವಣೆ ನಡೆಯುತ್ತದೆ ಎಂಬ ಪ್ರಶ್ನೆ ಎದುರಾಗಿದೆ.
ರಾಜ್ಯಪಾಲರ ನಿಲವು ನಿರ್ಣಾಯಕ:
ರಾಜ್ಯ ಚುನಾವಣೆ ಆಯೋಗದ ವೇಳಾಪಟ್ಟಿ ಪ್ರಕಾರ ಆ.22ರಂದು ಬಿಬಿಎಂಪಿಯ 198 ವಾರ್ಡ್‍ಗಳಿಗೆ ಚುನಾವಣೆ ನಡೆಯಬೇಕು. ಇದಕ್ಕಾಗಿ, ಆ.3ರಂದು ಆಯುಕ್ತರು ಅಧಿಸೂಚನೆ ಹೊರಡಿಸಬೇಕು. ಈ ಅಧಿಸೂಚನೆಯ ನಂತರವಷ್ಟೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಆರಂಭಿಸಬೇಕಾಗುತ್ತದೆ. ಒಂದೇ ಒಂದು ನಾಮಪತ್ರ ಸಲ್ಲಿಕೆಯಾದರೂ ಚುನಾವಣೆಗೆ ಇನ್ನಾವುದೇ ತಡೆ ಬರಲಾರದು ಎಂಬುದು ಹಿಂದಿನ ಚುನಾವಣೆಗಳ ಬಗ್ಗೆ ನ್ಯಾಯಾಲಯ ನೀಡಿರುವ ತೀರ್ಪಿನ ಸಾರಾಂಶ. ಆದರೆ, ಅದಕ್ಕೂ ಮುನ್ನ ರಾಜ್ಯಪಾಲರು ಅಂಕಿತ ಹಾಕಿದರೆ ಎಂಬುದೇ ಪ್ರಮುಖ ಅಂಶ.
ಈ ಹಿಂದೆ ಬಿಬಿಎಂಪಿಯನ್ನು ವಿಸರ್ಜಿಸಿ ವಿಭಜಿಸುವ ಬಗ್ಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಪ್ರಸ್ತಾವನೆ ಕಳುಹಿಸಿಕೊಟ್ಟಿತ್ತು. ಆ ಸಮಯದಲ್ಲಿ ಸುಗ್ರೀವಾಜ್ಞೆಗೆ ಸಹಿ ಹಾಕದೆ ವಾಪಸ್ ಕಳುಹಿಸಿದ್ದ ರಾಜ್ಯಪಾಲರು, ವಿಧೇಯಕವನ್ನು ಮಂಡಿಸಿ ತನ್ನಿ. ಹೊಸ ಕಾಯಿದೆಯನ್ನೇ ಮಾಡಿ ಎಂದು ಸಲಹೆ ನೀಡಿದ್ದರು.
ಅದರಂತೆಂಯೇ ಸರ್ಕಾರ ತನ್ನ ಪ್ರಕ್ರಿಯೆಯನ್ನು ಇದೀಗ ಮುಗಿಸಿ ರಾಜ್ಯಪಾಲರ ಮುಂದೆ ವಿಧೇಯಕವನ್ನು ಇರಿಸಿದೆ.ಈಗ ಹಿಂದಿನ ಮಾತಿನಂತೆ ನಡೆಯಬೇಕಾದ್ದು ರಾಜ್ಯಪಾಲರ ಸರದಿಯಾಗಿದೆ. ಆದರೆ ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಿಬಿಎಂಪಿಯನ್ನು ವಿಭಜಿಸುವ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ಸಹಿ ಹಾಕಬಾರದು. ಚುನಾವಣೆ ನಡೆಸಿ ಸಂವಿಧಾನದ ಹಕ್ಕನ್ನು ಕಾಪಾಡಬೇಕು ಎಂದು ರಾಜ್ಯಪಾಲರನ್ನು ಭೇಟಿ ಮಾಡಿ,ಮನವಿ ಪತ್ರವನ್ನೂ ನೀಡಿ ಆಗ್ರಹಿಸಿದ್ದಾರೆ.
ಈ ಎಲ್ಲ ಒತ್ತಡಗಳ ನಡುವೆ ರಾಜ್ಯಪಾಲರು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.ಒಟ್ಟಿನಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಾಪಸ್ ಪಡೆದಿದ್ದರೂ ಎಲ್ಲವೂ ಸುಸೂತ್ರವೇನೂ ಅಲ್ಲ. ರಾಜ್ಯಪಾಲರ ಈಗಿನ ನಡೆಯ ಮೇಲೆಯೇ ಎಲ್ಲವೂ ಅವಲಂಬಿತ.
ರಾಜ್ಯಪಾಲರು ವಿಧೇಯಕದ ಬಗ್ಗೆ ಇನ್ನೊಂದು ವಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಚುನಾವಣೆ ನಡೆಯುತ್ತದೆ. ಅದಕ್ಕೂ ಮುನ್ನ ಅಂಕಿತ ಹಾಕಿದರೆ ಬಿಬಿಎಂಪಿ ಇರುವುದಿಲ್ಲ. ಇನ್ನಾರು ತಿಂಗಳು ಬಿಟ್ಟು ಅಂಕಿತ ಹಾಕಿದರೆ ಬಿಬಿಎಂಪಿ ಇರುವುದಿಲ್ಲ. ಇನ್ನಾರು ತಿಂಗಳು ಬಿಟ್ಟು ಅಂಕಿತ ಹಾಕಿದರೂ ಆಗಲೂ ಬಿಬಿಎಂಪಿಗೆ ಆಯ್ಕೆಯಾದ 198 ಸದಸ್ಯರೂ ಅಧಿಕಾರ
ಕಳೆದುಕೊಳ್ಳಲಿದ್ದಾರೆ. ಬಿಬಿಎಂಪಿಯ ಚುನಾವಣೆ ಪ್ರಕ್ರಿಯೆ ನಗರವನ್ನು ದಶಕ
ಗಳಿಂದ ಕಾಡುತ್ತಿರುವ ತ್ಯಾಜ್ಯ ಸಮಸ್ಯೆ ನಿವಾರಣೆಯಷ್ಟೇ ಕಗ್ಗಂಟಾಗಿದೆ.
ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ಧವಾಗಿದೆ. ಇದರ ನಡುವೆ ಬಿಬಿಎಂಪಿಯನ್ನು ವಿಭಜಿಸುವ ಕುರಿತಂತೆ ವಿಧೇಯಕ ಅಂಗೀಕಾರವಾಗಿದ್ದು ರಾಜ್ಯಪಾಲರ ಅಂಕಿತಕ್ಕೆ ಕಾಯುತ್ತಿದೆ.
ರಾಜ್ಯಪಾಲರು ಯಾವಾಗಲೇ ಅಂಕಿತ ಹಾಕಲಿ, ಆಗ ಆ ಕಾಯಿದೆಯಂತೆ ಚುನಾವಣೆ ನಡೆಯಬೇಕಾಗುತ್ತದೆ. ಈಗ ಬಿಬಿಎಂಪಿಯ 198 ವಾರ್ಡ್‍ಗಳಿಗೆ ಚುನಾವಣೆ ನಡೆದರೂ ಮತ್ತೆ ಆಮೇಲೆ ಚುನಾವಣೆ ನಡೆಯಬೇಕಾಗುತ್ತದೆ. ಏನಾಗುತ್ತದೋ ನೋಡಬೇಕು. ಆಗಿನ ಪರಿಸ್ಥಿತಿಗೆ ಕಾನೂನು ತಜ್ಞರ ಸಲಹೆ ಪಡೆದು ಮುಖ್ಯಮಂತ್ರಿಯವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ.
ರಾಮಲಿಂಗಾರೆಡ್ಡಿ, ನಗರ ಉಸ್ತುವಾರಿ ಸಚಿವ
ಸಹಿ ಹಾಕಿದರೆ ಏನಾಗುತ್ತದೆ?
ಒಂದೊಮ್ಮೆ ರಾಜ್ಯಪಾಲರು ವಿಧೇಯಕಕ್ಕೆ ಸಹಿ ಹಾಕಿದರೂ ಚುನಾವಣೆ ಸದ್ಯವೇ ಆಗುವುದಿಲ್ಲ. ರಾಜ್ಯಪಾಲರ ಅಂಕಿತದಿಂದ ವಿಧೇಯಕ ಕಾನೂನಾಗುತ್ತದೆ. ಬಿಬಿಎಂಪಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ನಂತರ ಸರ್ಕಾರ ಎಷ್ಟು ಪಾಲಿಕೆಗಳನ್ನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಯಾವ ಪಾಲಿಕೆಗೆ ಎಷ್ಟು ವಾರ್ಡ್‍ಗಳು? ಯಾವ ಯಾವ ಪ್ರದೇಶ ಸೇರಿಕೊಳ್ಳಬೇಕು? ಇದಕ್ಕೆಲ್ಲ ಒಂದೇ ಕಾನೂನಾ? ಅಥವಾ ಈ ಪಾಲಿಕೆಗಳ ಮೇಲೆ ಮತ್ತೊಂದು ಪ್ರಾಕಾರ ಬೇಕಾ ಎಂಬುದನ್ನು ಅಂತಿಮಗೊಳಿಸಬೇಕು. ಐದು ಪಾಲಿಕೆಯನ್ನಾಗಿ ಮಾಡಬೇಕು ಎಂದು ಹೇಳಿರುವ ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ಸಮಿತಿ, ಈ ಪಾಲಿಕೆಗಳ ಸ್ಪಷ್ಟ ರೂಪ ಹಾಗೂ ನೀತಿ ರಚನೆಗೆ ಕನಿಷ್ಠ 6 ತಿಂಗಳ ಅವಕಾಶ ಕೋರಿದೆ.
ಅಂದರೆ, ಮೂರೋ, ಐದೋ ಭಾಗವಾಗಬೇಕಾದ ಬಿಬಿಎಂಪಿಗೆ ಹೊಸ ಸ್ವರೂಪ ನೀಡಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿದರೂ ಇನ್ನೊಂದು ವರ್ಷ ಚುನಾವಣೆ ಸಾಧ್ಯ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


