2 ದಿನಕ್ಕೆ ಕಾಲಿಟ್ಟ ಶಿಕ್ಷಕರ ಧರಣಿ
ಸೇವೆ ಕಾಯಂಗೆ ಆಗ್ರಹಿಸಿ ಕಳೆದ 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ...

ಬೆಂಗಳೂರು: ಸೇವೆ ಕಾಯಂಗೆ ಆಗ್ರಹಿಸಿ ಕಳೆದ 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ 12ಕ್ಕೂ ಅಧಿಕ ಶಿಕ್ಷಕರು ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ 108 ಆ್ಯಂಬುಲೆನ್ಸ್ ಸಿಬ್ಬಂದಿಯನ್ನು ಸ್ಥಳದಲ್ಲೇ ನಿಯೋಜಿಸಲಾಗಿದೆ.
ಸರ್ಕಾರ ಪ್ರತಿಭಟನಾಕಾರರ ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಶಿಕ್ಷಕರು ಗುರುವಾರ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಮಧ್ಯಾಹ್ನ ದ ವೇಳೆಗೆ 9 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಕಾರಣ, ಪ್ರತಿಭಟನಾ ಸ್ಥಳದಲ್ಲೇ ಚಿಕಿತ್ಸೆಗೆ ದಾದಿಯರ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಸ್ವಸ್ಥರಾಗಿದ್ದ ಎಲ್ಲಾ ಪ್ರತಿಭಟನಾಕಾರರು ಚೇತರಿಸಿಕೊಂಡಿದ್ದು, ನಂದಿನಿ ಎಂಬುವವರು ಮಾತ್ರ ಕಳೆದ 3 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿದ್ದರೂ ಯಾವೊಬ್ಬ ಅಧಿಕಾರಿಯೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಶಿಕ್ಷಕರ ಸಮಸ್ಯೆ ಆಲಿಸಿಲ್ಲ. ಹಾಗಾಗಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸಚಿವರೇ ಬಂದು ಮಾತಾಡಲಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಅವರು, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದರೂ ಯಾರೂ ತಮ್ಮ ಗೋಳು ಕೇಳಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರು, ಬುಧವಾರ ಸಂಬಂಧ ಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ ತಮ್ಮ ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ, ಆ ವೇಳೆ ಸಂಬಂಧಪಟ್ಟ ಪ್ರಾಂಶುಪಾಲ, ಶಿಕ್ಷಕರನ್ನು ಆಹ್ವಾನಿಸಿಲ್ಲ. ಹಾಗಾಗಿ ಅಲ್ಲಿ ನಡೆದಿರುವ ಚರ್ಚೆ ಬಗ್ಗೆ ಕೂಡ ತಮಗೆ ಯಾವುದೇ ಮಾಹಿತಿ ಇಲ್ಲ. ಸಚಿವರು ಖುದ್ದಾಗಿ ತಮ್ಮ ಬಳಿ ಬಂದು ಸಮಸ್ಯೆ ಆಲಿಸಬೇಕು ಎಂದರು. ಉಪವಾಸ ನಿರತ ಬೀದರ್‍ನ ವಿನೋದ್ ರಾಥೋಡ್, ಯಾದಗಿರಿ ನಿವಾಸಿಗಳಾದ ಹನುಮಂತಪ್ಪ ಬಿಂಗಿ, ಸಿರಿಕಾಂತ್ ರಾಥೋಡ್, ಶಾಂತ ನಿಂಗ ಪಾಟೀಲ್, ಶಾಂತಪ್ಪ, ಚಿಕ್ಕಮಗಳೂರಿನ ಚರಣ್ ಸಿ. ಮಠ್, ಹಾಸನದ ನಂದಿನಿ, ಮೈಸೂರಿನ ರವಿಪ್ರಕಾಶ್ ಸೇರಿದಂತೆ ಅಸ್ವಸ್ಥರಾಗಿರುವ ಎಲ್ಲರೂ ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ನೂರಾರು ಪ್ರಾಂಶುಪಾಲರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ಶಿಕ್ಷಕರ ಧರಣಿ 2ನೇ ದಿನಕ್ಕೆ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸಂಗೀತ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಪಂಚಾಕ್ಷರಿ ಗವಾಯಿಗಳ ಅಂಧ ಕಲಾವಿದರ ಸಂಘದ ಸದಸ್ಯರು ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸುಮಾರು 11,600 ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಆದರೆ, ಸಂಗೀತ ಶಿಕ್ಷಕರ ನೇಮಕಕ್ಕೆ ಮಾತ್ರ ಮನಸ್ಸು ಮಾಡಿಲ್ಲ. ಸರ್ಕಾರದ ಈ ನಿರ್ಧಾರಿದಿಂದ ಅಂಧ ವಿದ್ಯಾರ್ಥಿಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಂಗೀತ ಶಿಕ್ಷಕರ ನೇಮಕಕ್ಕೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಚಿವರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಕ್ಕಾಗಮಿಸಿ ತಮ್ಮ ಸಮಸ್ಯೆ ಆಲಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


