ಲೋಕಾಯುಕ್ತ ಅಂಗಳಕ್ಕೆ ಕೆಪಿಎಸ್‌ಸಿ ವಿವಾದ
ರಾಜ್ಯಪಾಲರ ಪತ್ರಕ್ಕೆ ಪ್ರತಿಯಾಗಿ ಕೌಶಿಕ್ ಮುಖರ್ಜಿ ನೀಡಿರುವ ಉತ್ತರ ಈಗ ವಿವಾದಕ್ಕೆ ಕಾರಣವಾಗಿದೆ...

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಶಿಫಾರಸು ವಿವಾದವೀಗ ಲೋಕಾಯುಕ್ತ ಅಂಗಳಕ್ಕೆ ಬಂದಿದೆ.
ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿರುವ ವಿವಾದವು ರಾಜ್ಯ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ರಾಜ್ಯಪಾಲರ ಪತ್ರಕ್ಕೆ ಪ್ರತಿಯಾಗಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ನೀಡಿರುವ ಉತ್ತರ ಈಗ ವಿವಾದಕ್ಕೆ ಕಾರಣವಾಗಿದೆ.
ಯಾವುದೇ ಅಧಿಕೃತ ವಿಚಾರಣೆ ನಡೆಸದೆ ವಿಚಕ್ಷಣ ದಳದಿಂದ ಶಿಫಾರಸು ಪಟ್ಟಿಯಲ್ಲಿರುವ 8 ಜನರಿಗೆ ನಿರಾಕ್ಷೇಪಣೆ ಪತ್ರ ಕಳುಹಿಸಲಾಗಿದೆ. ಈ ಮೂಲಕ ರಾಜ್ಯಪಾಲ ಆಕ್ಷೇಪಣೆಗಳನ್ನು ಮುಖ್ಯ ಕಾರ್ಯದರ್ಶಿ ಅವರು ಹಾಸ್ಯ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ವಿರುದ್ಧ ಐಪಿಸಿ ಸೆಕ್ಷನ್ 167, 409 ಹಾಗೂ 420ರ ಮೂಲಕ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ರಾಜ್ಯಪಾಲರ ಸೂಚನೆ ಪ್ರಕಾರ ಯಾವುದೇ ಸದಸ್ಯರ ಹೆಸರನ್ನು ಶಿಫಾರಸು ಮಾಡುವ ಮುಂಚೆ ವಿಚಕ್ಷಣ ದಳ ಹಾಗೂ ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆ ನಡೆಸಬೇಕು. ಆ ವ್ಯಕ್ತಿಯ ಹಿನ್ನೆಲೆ ಹಾಗೂ ಆರೋಪಗಳಿಗೆ ಸಂಬಂಧಿಸಿ ನಿರಾಕ್ಷೇಪಣೆ ಪತ್ರ ನೀಡಬೇಕು.
ಆದರೆ ಈ ಪ್ರಕರಣದಲ್ಲಿ ಲೋಕಾಯುಕ್ತರಿಗೆ ರಾಜ್ಯ ಸರ್ಕಾರ ಯಾವುದೇ ಪತ್ರವನ್ನೇ ಬರೆದಿಲ್ಲ. ಈ ವಿಷಯವನ್ನು ಸ್ವತಃ ಲೋಕಾಯುಕ್ತರೇ ಸ್ಪಷ್ಟಪಡಿಸಿದ್ದಾರೆ. ಆದರೆ ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಮುಖ್ಯ ಕಾರ್ಯದರ್ಶಿ, ತಾವೇ ಸ್ವತಃ ವಿಚಕ್ಷಣ ವರದಿ ತಯಾರಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ.
ಎಲ್ಲ ಎಂಟು ಜನರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ ಈ 8 ಜನರಲ್ಲಿ ಸೈಯದ್ ಉಲ್ಫಾತ್ ಹುಸೇನ್, ಪ್ರೋ.ಗೋವಿಂದಯ್ಯ ಹಾಗೂ ಡಾ.ರವಿಕುಮಾರ್ ಅವರ ಮೇಲೆ ಗಂಭೀರ ಆರೋಪಗಳಿದ್ದರೂ ನಿರಾಕ್ಷೇಪಣೆ ಪತ್ರ ಸಲ್ಲಿಸಲಾಗಿದೆ. ಸ್ವಯಂಪ್ರೇರಿತವಾಗಿ ಮುಖ್ಯ ಕಾರ್ಯದರ್ಶಿಗಳು ನಿರಾಕ್ಷೇಪಣೆ ಪತ್ರ ನೀಡಿದ್ದಾರೆ.
ದುರುದ್ದೇಶ ಪೂರ್ವಕವಾಗಿ ಹೀಗೆ ಕಾರ್ಯನಿರ್ವಹಿಸಿರುವುದು ನಾನಾ ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯ ಸರ್ಕಾರ ಕೂಡ ಕಳಂಕಿತರ ಪರವಾಗಿರುವುದು ಸಾಭೀತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯ ಕಾರ್ಯದರ್ಶಿ ವಿರುದ್ಧ ದಾಖಲೆ ತಿದ್ದಿದ ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡಿದ ಆರೋಪ ಹೊರೆಸಿ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


