ಜಿಲ್ಲಾ ಸುದ್ದಿ

ಗುರಿ ತಪ್ಪಿದ ಬಿಬಿಎಂಪಿ ಬಜೆಟ್

ಬಿಬಿಎಂಪಿ ಬಜೆಟ್ ಅನುಷ್ಠಾನ ಹಾದಿ ತಪ್ಪಿದ್ದು, ಹಣ ಕಾಸಿನ ಸ್ಥಿತಿ ತೀರಾ ದಿಕ್ಕೆಟ್ಟು ಹೋಗಿದೆ. ಇದರಿಂದ ಬಿಜೆಪಿಯ...

ಗುರಿ ತಪ್ಪಿದ ಬಿಬಿಎಂಪಿ ಬಜೆಟ್
ಬಿಬಿಎಂಪಿ
Published On :

ಬೆಂಗಳೂರು: ಬಿಬಿಎಂಪಿ ಬಜೆಟ್ ಅನುಷ್ಠಾನ ಹಾದಿ ತಪ್ಪಿದ್ದು, ಹಣ ಕಾಸಿನ ಸ್ಥಿತಿ ತೀರಾ ದಿಕ್ಕೆಟ್ಟು ಹೋಗಿದೆ. ಇದರಿಂದ ಬಿಜೆಪಿಯ ಬಹುನಿರೀಕ್ಷಿತ ಬಜೆಟ್‌ನಲ್ಲಿ  ಘೋಷಣೆಯಾಗಿದ್ದ ಕಾರ್ಯಕ್ರಮಗಳು ನೆಲ ಕಚ್ಚುತ್ತಿವೆ.

ಪ್ರಥಮ ಬಾರಿಗೆ ರು  5977 ಕೋಟಿಗಳ ವಾಸ್ತವ ಬಜೆಟ್ ಮಂಡಿಸಲು ಯತ್ನಿಸಿದ ಬಿಬಿಎಂಪಿ ಅದನ್ನು ಅನುಷ್ಠಾನ  ಮಾಡಲಾಗದೆ ಪರದಾಡುತ್ತಿದೆ. ಈವರೆಗೂ  ಕೇವಲ ಶೇ. 30 ರಷ್ಟು  ಸಾಧನೆ ಮಾಡಲಾಗಿದ್ದು, ಶೇ. 70 ರಷ್ಟು ಸಾಧನೆ ಆಗಬೇಕಿದೆ.

ಮುಂದೆ ಚುನಾವಣೆ ಇರುವುದರಿಂದ ಇನ್ನುಳಿದ ಕೇವಲ 2 ತಿಂಗಳಲ್ಲಿ ಬಜೆಟ್ ಅನುಷ್ಠಾನ ಮಾಡಿ ನುಡಿದಂತೆ ನಡೆದು ತೋರಿಸಬೇಕಿದೆ. ಆದರೆ, ಆದಾಯ ಸಂಗ್ರಹ ವೇಗ ನೋಡಿದರೆ ಬಜೆಟ್ ಅನುಷ್ಠಾನ ಹಳ್ಳ ಹಿಡಿಯುವ ಲಕ್ಷಣ ಕಾಣುತ್ತಿದೆ. ಇದರಿಂದ ದೊಡ್ಡ ತಲೆನೋವಾಗಿರುವ ರು. 3000 ಕೋಟಿ  ಸಾಲ ಮತ್ತು ರು. 1500 ಬಾಕಿ ಬಿಲ್ ಪಾವತಿಗೂ ಪರದಾಡುವ ಸ್ಥಿತಿ ತೀವ್ರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಳಿದ್ದು ಸುಳ್ಳಾಗಬಹುದು!:
ಹಿಂದಿನ ವರ್ಷಗಳಲ್ಲಿ ಬಿಬಿಎಂಪಿ ಸುಮಾರು ರು. 9000 ಕೋಟಿಗೂ ಅಧಿಕ ಮೊತ್ತದ ಬಜೆಟ್ ಮಂಡಿಸುತ್ತಾ ಬಂದಿತ್ತು. ಅದರಲ್ಲಿ ಶೇ. 40 ರಷ್ಟೂ ಸಾಧನೆ ಮಾಡಲಾಗದೆ ನಗೆ ಪಾಟಲಿಗೆ ಗುರಿಯಾಗುತ್ತಿತ್ತು. ಅದೇ ರೀತಿ ಕಳೆದ ಬಾರಿ (2014-15) ರು. 7700 ಮೊತ್ತದ ಬಜೆಟ್ ಮಂಡಿಸಲಾಗಿತ್ತು.  ಇದನ್ನು ಅವಾಸ್ತವದ ಬಜೆಟ್ ಎಂದು ಪರಿಗಣಿಸಿದ ರಾಜ್ಯ ಸರ್ಕಾರ,  ಬಜೆಟ್ ಗಾತ್ರಕ್ಕೆ ಕತ್ತರಿ ಹಾಕಿತ್ತು. ಅಂದರೆ ಒಟ್ಟಾರೆ ಮೊತ್ತದಲ್ಲಿ ರು. 1700 ಕೋಟಿ ಕಡಿಮೆ ಮಾಡಿತ್ತು. ಹೀಗಾಗಿ ಬಜೆಟ್ ಗಾತ್ರ ರು.5977 ಕೋಟಿಗೆ ನಿಗದಿಯಾಗಿ ವಾಸ್ತವ ಗಾತ್ರದ ಬಜೆಟ್ ಆಗಿತ್ತು. ಆದರೂ ಬಿಬಿಎಂಪಿ ವಾಸ್ತವದ ಬಜೆಟ್‌ಗೆ ತಕ್ಕಂತೆ ಸಂಪನ್ಮೂಲ ಕ್ರೋಡೀಕರಿಸುವಲ್ಲಿ ಸೋತಿದೆ.

ಅಂದರೆ ನಿಗದಿತ ಗುರಿಯಂತೆ ಬಿಬಿಎಂಪಿ ಎಲ್ಲಾ ಮೂಲಗಳಿಂದ ಒಟ್ಟು ರು. 5977 ಕೋಟಿ ಆದಾಯ ಸಂಗ್ರಹಿಸಬೇಕಿದೆ. ಆದರೆ, ಡಿಸೆಂಬರ್ ಅಂತ್ಯದ ಮಾಹಿತಿ ಪ್ರಕಾರ ಸಂಗ್ರಹವಾಗಿರುವುದು ಬರೀ ರು. 2307 ಕೋಟಿ ಮಾತ್ರ. ಇನ್ನೂ ರು. 3670 ಕೋಟಿಗಳನ್ನು ಕೇವಲ ಇನ್ನೆರಡು  ತಿಂಗಳ ಅವಧಿಯಲ್ಲಿ ಸಂಗ್ರಹಿಸಬೇಕಿದೆ.

ಗುರಿ ತಪ್ಪಿದ ಆದಾಯ ಸಂಗ್ರಹ: ಪ್ರಮುಖ ಆದಾಯ ಮೂಲವಾದ ಆಸ್ತಿ ತೆರಿಗೆಯನ್ನು ರು.2701 ಕೋಟಿ ಸಂಗ್ರಹಿಸಬೇಕಿದೆ. ಆದರೆ ಆಗಿರುವುದು ರು. 870 ಕೋಟಿ ಮಾತ್ರ. ಬಿಬಿಎಂಪಿಯ ಹಿಂದಿನ ಸಾಧನೆಗಳ ಪ್ರಕಾರ ತೆರಿಗೆ ಸಂಗ್ರಹದಲ್ಲಿ ಶೇ. 75 ರಷ್ಟಾದರೂ ಸಾಧನೆ ಆಗಬೇಕಿತ್ತು. ಆದರೆ ಆಗಿರುವುದು ಶೇ. 40 ರಷ್ಟು ಮಾತ್ರ. ಜಾಹೀರಾತು ಮೂಲಗಳಿಂದ ನಿರೀಕ್ಷಿತ ರು. 37 ಕೋಟಿಗಳಿಗೆ ಬರೀ ರು. 13 ಕೋಟಿ ಸಂಗ್ರಹವಾಗಿದೆ.

ಇದಲ್ಲದೆ ಈವರೆಗೆ ಸುಮಾರು ರು. 2627 ಕೋಟಿ ಅನುದಾನ ಸರ್ಕಾರದಿಂದ ಬಿಬಿಎಂಪಿ ಬೊಕ್ಕಸಕ್ಕೆ ಬರಬೇಕಿತ್ತು. ಆದರೆ ಲಭಿಸಿದ್ದು ರು. 960 ಕೋಟಿ ಮಾತ್ರ. ಅಂದರೆ ಸರ್ಕಾರದಿಂದ ಸಿಗಬೇಕಿರುವ ಉಳಿಕೆ ರು. 1667 ಕೋಟಿ ಅನುದಾನ ಪಡೆಯಲು ಮೇಯರ್, ಪ್ರತಿಪ್ರಕ್ಷ ನಾಯಕ ಹಾಗೂ ಹಿರಿಯ ಸದಸ್ಯರ ಜತೆಗೂಡಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಬೇಕಿತ್ತು. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಆಗಬೇಕಿತ್ತು.

ಕಲ್ಯಾಣ,  ಆರೋಗ್ಯ ಏನೂ ಇಲ್ಲ:
ವೆಚ್ಚದ ವಿಚಾರಕ್ಕೆ ಬಂದರೆ ಸಾಧನೆ ತೀರಾ ಕಳಪೆ. ಬಜೆಟ್‌ನಲ್ಲಿ ನಿಗದಿ ಪಡಿಸಿರುವಂತೆ ಬಿಬಿಎಂಪಿ ರು. 6024 ಕೋಟಿಗಳನ್ನು ವೆಚ್ಚ ಮಾಡಬೇಕಿದೆ. ಆದರೆ ಈ ತನಕ ಆಗಿರುವ  ವೆಚ್ಚ 2300 ಮಾತ್ರ. ಅಂದರೆ ಬಜೆಟ್ ಗುರಿಯಂತೆ ಇನ್ನೂ ರು. 3724ಗಳನ್ನು  ಹಲವು ಯೋಜನೆಗಳು ಮತ್ತು ಕಾಮಗಾರಿಗಳಿಗೆ ವೆಚ್ಚ  ಮಾಡಬೇಕಿದೆ.

ಹೀಗಾಗಿ ಕಾಮಗಾರಿಗಳು , ಯೋಜನೆಗಳಿಗೆ ರು. 602 ಕೋಟಿ ವೆಚ್ಚ ಆಗುವ ಬದಲಿಗೆ ರು. 233 ಕೋಟಿ ವಿನಿಯೋಗವಾಗಿದೆ. ಸಾಮಾಜಿಕ ನ್ಯಾಯ ವಿಭಾಗದ ಹಲವು ಕಾರ್ಯಕ್ರಮಗಳಿಗೆ  ರು. 390 ಕೋಟಿ ವೆಚ್ಚ ಮಾಡುವ ನಿರೀಕ್ಷೆ ಇತ್ತು. ಆದರೆ ಆಗಿರುವುದು ರು.109 ಕೋಟಿಗಳಷ್ಟೇ. ಅಂದರೆ ಸುಮಾರು ರು. 200 ಕೋಟಿಗೂ ಹೆಚ್ಚು ಅನುದಾನದ ಕೊರತೆ ಕಾಣುತ್ತಿದೆ. ಅದೇ ರೀತಿ ಆರೋಗ್ಯಕ್ಕೆ ನಿಗದಿತ ರು.345 ಕೋಟಿ ವೆಚ್ಚ ಮಾಡುವ ಬದಲಿಗೆ ರು. 217 ಕೋಟಿ ಮಾತ್ರ ನೀಡಲಾಗಿದೆ.


ಸದ್ಯದಲ್ಲೇ ಅಧಿಕಾರಿಗಳ ಸಭೆ ನಡೆಸಿ ಆಸ್ತಿ ತೆರಿಗೆ ಗುರಿಗಿಂತ ಹೆಚ್ಚುವರಿ ರು. 400 ಕೋಟಿ ಸಂಗ್ರಹವಾಗುವಂತೆ ಮಾಡುತ್ತೇವೆ. ಇದಲ್ಲದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಬಿಎಂಪಿ ಪರವಾಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರ 69,000 ಕೋಟಿ ಸಂಗ್ರಹಿಸುತ್ತದೆ. ಆದರೆ ಶೇ. 2 ರಷ್ಟೂ ಅನುದಾನ ನೀಡುತ್ತಿಲ್ಲ. ಹೀಗಾಗಿ ಆರ್ಥಿಕ ಸಮಸ್ಯೆ ಪರಿಹರಿಸುವುದು ಕಷ್ಟವಾಗಿದೆ.

ಎನ್.ಆರ್. ರಮೇಶ್
ಬಿಬಿಎಂಪಿ ಆಡಳಿತ ಪಕ್ಷ ನಾಯಕ


ಆದಾಯ, ವೆಚ್ಚ ಎಷ್ಟೆಷ್ಟು? (ಕೋಟಿ ರು.ಗಳಲ್ಲಿ)

 ನಿರೀಕ್ಷಿತ ಆದಾಯ-  5977
ಸಂಗ್ರಹವಾಗಿದ್ದು- 2307
ಸಂಗ್ರಹ ಬಾಕಿ -3670
ಆಸ್ತಿ ತೆರಿಗೆ ಗುರಿ  -2701
ಸಂಗ್ರಹವಾಗಿದ್ದು  -725
ಜಾಹೀರಾತಿನಿಂದ  -37
ಸಂಗ್ರಹವಾಗಿದ್ದು -13
ಸರ್ಕಾರದ ಅನುದಾನ  -3627
ಲಭಿಸಿರುವುದು- 960
ವೆಚ್ಚದ ಗುರಿ - 6024
ಆಗಿರುವ ವೆಚ್ಚ -2300

-ಶಿವಕುಮಾರ್ ಬೆಳ್ಳಿತಟ್ಟೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.