ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ಇನ್ನು ಹೈಟೆಕ್
ರೈಲ್ವೆ ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ರಾಜ್ಯ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ಹೈಟೆಕ್ ತಂತ್ರಜ್ಞಾನಕ್ಕೆ ತೆರೆದುಕೊಂಡಿದೆ.

ಬೆಂಗಳೂರು: ರೈಲ್ವೆ ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ರಾಜ್ಯ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ಹೈಟೆಕ್ ತಂತ್ರಜ್ಞಾನಕ್ಕೆ ತೆರೆದುಕೊಂಡಿದೆ.
ಟೋಲ್ ಫ್ರೀ, ವಾಟ್ಸ್ ಆ್ಯಪ್, ಸಿಸಿಟಿವಿ ಘಟಕ ಹಾಗೂ ವಾಯ್ಸ್ ಆನ್‍ಲಾಗ್‍ನಂತಹ ಅತ್ಯಾಧುನಿಕ ತಂತ್ರಜ್ಞಾನದ ಸಂಪರ್ಕ ಸಾಧನಗಳ ಮೂಲಕ ಇಡೀ ನಿಯಂತ್ರಣ ವ್ಯವಸ್ಥೆಯನ್ನೇ ಮೇಲ್ದರ್ಜೆಗೇರಿಸಲಾ ಗಿದ್ದು, ತರಬೇತಿ ಹೊಂದಿದ ನುರಿತ ಸಿಬ್ಬಂದಿ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ರಾಜ್ಯದಲ್ಲಿ 3089 ಕಿಲೋಮೀಟರ್ ರೈಲ್ವೆ ಮಾರ್ಗವಿದ್ದು, 1131 ರೈಲುಗಳು ಸಂಚರಿಸುತ್ತಿವೆ.
362 ನಿಲ್ದಾಣಗಳಲ್ಲಿ ಒಟ್ಟು 620 ಪ್ಲಾಟ್ ಫಾರಂಗಳಿವೆ. ಇಲಾಖೆ ಮಾಹಿತಿ ಪ್ರಕಾರ ನಿತ್ಯ 8.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇವರ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಪೊಲೀಸ್ ಇಲಾಖೆ, ನಿಯಂತ್ರಣ ಕೊಠಡಿಯನ್ನು ಹೈಟೆಕ್ ತಂತ್ರಜ್ಞಾನದಲ್ಲಿ ಮೇಲ್ದರ್ಜೆಗೇರಿಸಿದ್ದು, ಇದು ದಿನದ 24 ಗಂಟೆಯೂ ಕಾರ್ಯಪ್ರವೃತ್ತವಾಗಲಿದೆ. ಇದರ ನಿರ್ವಹಣೆಗಾಗಿ ರೈಲ್ವೆ ಪೊಲೀಸ್ ಇಲಾಖೆಯು ನುರಿತ 300 ನಾಗರಿಕ ಪೊಲೀಸರನ್ನು ನಿಯೋಜಿಸಿದೆ.
ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 18004251363. ಇದು ದೇಶಾದ್ಯಂತ ಎಲ್ಲ ರೈಲ್ವೆ ಪ್ರಯಾಣಿಕರಿಗೆ ಉಚಿತವಾಗಿ ಲಭ್ಯ. ಅಲ್ಲದೇ, ಶೀಘ್ರವಾಗಿ ಮಾಹಿತಿ ತಲುಪಿಸುವ ಉದ್ದೇಶದೊಂದಿಗೆ ಇದು ಕಾರ್ಯಗತಕ್ಕೆ ಬಂದಿದೆ. ಹಾಗೆಯೇ, ರೈಲ್ವೆ ಪೊಲೀಸರ ವಾಟ್ಸ್ ಆ್ಯಪ್ ಸಂಖ್ಯೆ 9480802140. ಇದಕ್ಕೆ ಸಾರ್ವಜನಿಕರು ರೈಲ್ವೆ ಇಲಾಖೆಯ ಬಗ್ಗೆ ಮಾಹಿತಿ ನೀಡುವುದರ ಜತೆಗೆ, ರೈಲ್ವೆ ವಲಯದಲ್ಲಿ ಸಂಭವಿಸುವ ಯಾವುದೇ ಪ್ರಮುಖ ಘಟನೆಗಳು, ಸಂಶಯಾಸ್ಪದ ವಸ್ತು ಹಾಗೂ ವ್ಯಕ್ತಿಗಳ ಬಗ್ಗೆ ದೃಶ್ಯಗಳೊಂದಿಗೆ ಮಾಹಿತಿ ತಲುಪಿಸಬಹುದು.
ಬಹು ಮುಖ್ಯವಾಗಿ ರೈಲ್ವೆ ನಿಲ್ದಾಣದಲ್ಲಿನ ಪ್ರಯಾಣಿಕರ ಚಲನವಲನಗಳ ಮೇಲೆ ನಿಗಾ ಇಡಲು ಈಗಾಗಲೇ ಎಲ್ಲ ಕಡೆ ಸಿಸಿಟಿವಿ ಅಳವಡಿಸಲಾಗಿದೆ. ಇದರ ನಿರ್ವಹಣೆಯ ನಿಯಂತ್ರಣ ಕೊಠಡಿಯನ್ನು ಈಗ ಅಷ್ಟೇ ಹೈಟೆಕ್ ವ್ಯವಸ್ಥೆಗೆ ಅಳವಡಿಸಲಾಗಿದೆ. ದಿನದ 24 ಗಂಟೆಯೂ ಇದು ಕಾರ್ಯಾಚರಣೆಯಲ್ಲಿರುತ್ತದೆ. ಅಹಿತಕರ ಘಟನೆಗಳನ್ನು ತಡೆಯಲು ಅನುಕೂಲವಾಗುವುದರ ಜತೆಗೆ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿಸಲೂ ಸಹಕಾರಿಯಾಗುತ್ತಿದೆ ಎಂಬುದು ರೈಲ್ವೆ ಸಿಬ್ಬಂದಿ ಅಭಿಪ್ರಾಯ.
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಚಾಲನೆ
ಇಂಥ ಸುಸಜ್ಜಿತ ವ್ಯವಸ್ಥೆಗೆ ಶುಕ್ರವಾರ ನಗರದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಪ್ರತಿ ವರ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ರೈಲ್ವೆ ಪೊಲೀಸ್ ಇಲಾಖೆಯಲ್ಲಿ 1977ರಿಂದ ಈವರೆಗೂ ಅಗತ್ಯ ಸಿಬ್ಬಂದಿಗಳ ನೇಮಕ ಆಗಿಲ್ಲ. ಹೀಗಾಗಿ ರಕ್ಷಣೆ ಸವಾಲಾಗಿದೆ. ಇರುವ ಪೊಲೀಸ್ ಸಿಬ್ಬಂದಿಗೆ ಒತ್ತಡ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡಬೇಕಾದರೆ, ಆಧುನಿಕ ತಂತ್ರಜ್ಞಾನವೇ ಪರಿಹಾರವಾಗಿದೆ.
ಈ ನಿಟ್ಟಿನಲ್ಲಿ ರೈಲ್ವೆ ನಿಯಂತ್ರಣ ಕೊಠಡಿಗೆ ಹೈಟೆಕ್ ಸ್ಪರ್ಶ ನೀಡಿರುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದರು. ಇದೇ ವೇಳೆ ಅವರು, ರೈಲ್ವೆ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಪೊಲೀಸ್ ಅಧಿಕಾರಿಗಳ ತರಬೇತಿ ಕಾರ್ಯಾಗಾರಕ್ಕೂ ಚಾಲನೆ ನೀಡಿದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಕುಮ್ ಪಚಾವೊ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಎಡಿಜಿಪಿ ಶರ್ಮ, ಹಿರಿಯ ಅ„ಕಾರಿಗಳಾದ ಸುಶಾಂತ್ ಮಹಾಪಾತ್ರ, ಶ್ರೀಕಂಠಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


