ಜಿಲ್ಲಾ ಸುದ್ದಿ

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಚಿಂತನೆ: ಸಿಎಂ ಸಿದ್ದರಾಮಯ್ಯ

ಕೆಳವರ್ಗ, ಹಿಂದುಳಿದವರು, ಮಹಿಳೆಯರನ್ನು ಶೋಷಿಸುತ್ತಿರುವ ಮೌಢ್ಯಾಚಾರಣೆಗಳನ್ನು ನಿರ್ಬಂಧಿಸಲು ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೆ ತರಲು ...

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಚಿಂತನೆ: ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ
Published On :

ಬೆಂಗಳೂರು: ಕೆಳವರ್ಗ, ಹಿಂದುಳಿದವರು, ಮಹಿಳೆಯರನ್ನು ಶೋಷಿಸುತ್ತಿರುವ ಮೌಢ್ಯಾಚಾರಣೆಗಳನ್ನು ನಿರ್ಬಂಧಿಸಲು ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಮಾನವ ಧರ್ಮಪೀಠದ ಬೆಳ್ಳಿಹಬ್ಬದ 2ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ 19 ಮಂದಿಗೆ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮೌಢ್ಯ ನಿಷೇಧ ಕಾಯಿದೆ ಜಾರಿ ವೇಳೆ ವಿರೋಧಗಳು ಬರುವುದು ಸಹಜ. ಆ ವಿರೋಧವನ್ನು ಸದೃಢವಾಗಿ ಎದುರಿಸಲು ನಮ್ಮ ಸರ್ಕಾರ ಸಿದ್ಧವಿದೆ.

ಮೌಢ್ಯ ನಿಷೇಧವೆಂದರೆ ಧರ್ಮಗಳ, ನಂಬಿಕೆಗಳ ನಿಷೇಧವಲ್ಲ. ಅಪನಂಬಿಕೆಗಳು, ದೇವರು, ಧರ್ಮದ ಹೆಸರಿನಲ್ಲಿ ಜನರನ್ನು ಶೋಷಿಸುವ ಮತ್ತು ಇದನ್ನೇ ಬಂಡವಾಳನ್ನಾಗಿ ಮಾಡಿಕೊಂಡು ಶೋಷಿಸುತ್ತಿರುವ ಪಟ್ಟಭದ್ರರನ್ನು ನಿಯಂತ್ರಿಸಲು ಈ ಕಾಯಿದೆ ಜಾರಿಗೊಳಿಸಲಾಗುವುದು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಮೌಢ್ಯ ಪ್ರತಿಬಂಧಕ ಕಾಯಿದೆ ವಿಚಾರ ಪ್ರಸ್ತಾಪಿಸಿದಾಗ ಕೆಲವರು ವಿರೋಧ ವ್ಯಕ್ತಪಡಿಸಿ, ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಿದರು. ಆದರೆ ಇತ್ತೀಚೆಗೆ ನಾಡಿನ ಮಠಾಧೀಶರು ಈ ಕಾಯಿದೆ ಜಾರಿಗೆ ಒತ್ತಾಯಿಸುತ್ತಿರುವುದರಿಂದ ಜಾರಿಗೆ ತರಲು ಚಿಂತಿಸಿದ್ದೇವೆ. ಜ್ಯೋತಿಷಿಗಳು ಹೆದರಿಸುವುದರ ಜತೆಗೆ ಅದಕ್ಕೆ ಪರಿಹಾರವನ್ನು ಅವರೇ ಸೂಚಿಸುತ್ತಾರೆ.

`ಸಿದ್ದರಾಮಯ್ಯ 2015-16ನೇ ಸಾಲಿನ ಬಜೆಟ್ ಮಂಡಿಸುವುದಿಲ್ಲ' ಎಂದು ಒಬ್ಬ ಜ್ಯೋತಿಷಿ ಹೇಳಿದ್ದರೆ, ಮತ್ತೊಬ್ಬ ಜ್ಯೋತಿಷಿ `ಬಜೆಟ್ ಮಂಡಿಸುತ್ತಾರೆ, ಆದರೆ ಅಧಿಕಾರದಲ್ಲಿ ಉಳಿಯುವುದಿಲ್ಲ' ಎಂದಿದ್ದರು. ತಾವು ಬಜೆಟ್ ಮಂಡಿಸಿದ ಬಳಿಕವೂ ಇಂದಿಗೂ ಅಧಿಕಾರದಲ್ಲಿದ್ದೇನೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ತಪ್ಪು ತಿಳವಳಿಕೆಯನ್ನು ಬದಲಾಯಿಸಿದ್ದೇನೆ ಎಂದು ಸಿಎಂ ಹೇಳಿದರು.

ಸಾಮಾಜಿಕ ನ್ಯಾಯಕ್ಕೆ ಬದ್ಧ: ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುತ್ತದೆ. ಪ್ರತಿಯೊಬ್ಬರಿಗೂ ಅವಕಾಶ ಸಿಗಬೇಕು, ಯಾವುದೇ ಜಾತಿಗೆ ರಾಜಕೀಯ, ಆರ್ಥಿಕ ಶಕ್ತಿ ದೊರಕಿದಾಗಲೆ ಸಮಾನತೆ ಕಾಣಲು ಸಾಧ್ಯ ಎಂಬುದು ಸಂವಿಧಾನದಲ್ಲೆ ಇದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸಿಗುತ್ತಿದ್ದು, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಎಲ್ಲರಿಗೂ ಮೀಸಲಾತಿ ಸಿಗುತ್ತಿಲ್ಲ. ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಮೀಸಲಾತಿಗೆ ಶಾಸನ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.  ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ನ್ಯಾಯವಾದಿ ಎಂ.ಸಿ. ನರಸಿಂಹನ್, ಕಾರ್ಮಿಕ ಮುಖಂಡ ಮೈಕಲ್ ಫರ್ನಾಂಡೀಸ್, ಪರಿಸರ ತಜ್ಞ ಡಾ.ಅ.ನ. ಯಲ್ಲಪ್ಪರೆಡ್ಡಿ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.