ಬೆಂವಿವಿಗೆ ಲೋಕಾ ನೋಟಿಸ್
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರ ಆರೋಪ ಸಂಬಂಧ ಸ್ಪಷ್ಟನೆ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸೇರಿ 9 ಮಂದಿಗೆ ಲೋಕಾಯುಕ್ತ ನೋಟಿಸ್ ನೀಡಿದೆ...

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರ ಆರೋಪ ಸಂಬಂಧ ಸ್ಪಷ್ಟನೆ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸೇರಿ 9 ಮಂದಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕಾಗಿ ಸೆ.5, 2009ರಂದು ರು.3.80 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪಿಎಂಜೆ ಕನ್ಸ್‍ಟ್ರಕ್ಷನ್ ಕಂಪೆನಿಗೆ ವಹಿಸಲಾಗಿತ್ತು.
ಕಾಮಗಾರಿಯನ್ನು 12 ತಿಂಗಳಿಗೆ ನಿಗದಿ ಮಾಡಿ ಬೆಂಗಳೂರು ವಿವಿ ಎಂಜಿನಿಯರ್‍ಗಳಾದ ಎನ್. ಪುಟ್ಟಸ್ವಾಮಿ ಹಾಗೂ ಪಿಎಂಜೆ ಕಂಪನಿಯ ಎಂ. ಜಗನ್ನಾಥ್ ಎಂಬುವವರ ನಡುವೆ ಗುತ್ತಿಗೆಗೆ ನೋಂದಣಿ ಮಾಡಿಕೊಳ್ಳಲಾಗಿತ್ತು. ಆದರೆ, 2013ರ ಜುಲೈನಲ್ಲಿ ಮತ್ತೆ ಅದೇ ಕಾಮಗಾರಿಗೆ ಬೆಂವಿವಿ ಕುಲಪತಿ ಪೊ್ರ. ಬಿ. ತಿಮ್ಮೇಗೌಡ ಅವರು ಹೆಚ್ಚುವರಿಯಾಗಿ ರು.149 ಲಕ್ಷವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಹೆಚ್ಚುವರಿಯಾಗಿ ನೀಡಿದ ರು.1.5 ಕೋಟಿ ಹಣದಲ್ಲಿ ಅವ್ಯವಹಾರ ನಡೆದಿದೆ. ಕಾಮಗಾರಿ ಪ್ರಾರಂಭಗೊಂಡು 6 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಣ ವೇದಿಕೆಯ ಅಧ್ಯಕ್ಷ ಕೆ. ಗಂಗಾಧರ ಮೂರ್ತಿ ಎಂಬುವರು ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ರು.149 ಲಕ್ಷ ಹಣ ಬಿಡುಗಡೆಗೆ ಕಾರಣರಾದ ಬೆಂವಿವಿ ಕುಲಪತಿ ಡಾ. ಬಿ. ತಿಮ್ಮೇಗೌಡ, ಕುಲಸಚಿವೆ ಕೆ.ಕೆ. ಸೀತಮ್ಮ, ಬೆಂವಿವಿ ಎಂಜಿನಿಯರ್ ಎನ್. ಪುಟ್ಟಸ್ವಾಮಿ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡಾ. ಬಿ.ಎಸ್. ನಾಗೇಂದ್ರ ಪ್ರಕಾಶ್, ವಾಸ್ತುಶಿಲ್ಪ ವಿಭಾಗದ ಪ್ರೊ. ಎಸ್.ವಿ. ರವೀಂದ್ರ, ಕಾನೂನು ಸಲಹೆಗಾರ ಕೆ.ಜಿ. ಬೋರೇಗೌಡ, ಹಣಕಾಸು ಅಧಿಕಾರಿ ಡಾ. ಜೀವನ್‍ಕುಮಾರ್, ಸಿಂಡಿಕೇಟ್ ಸದಸ್ಯರಾದ ಎನ್. ಅಪ್ಪಾಜಿಗೌಡ ಹಾಗೂ ಡಾ. ಗಂಗಾಧರ್ ಎಂಬುವವರ ಮೇಲೆ ಕ್ರಮಕ್ಕೆ ದೂರು ಮನವಿ ಮಾಡಲಾಗಿತ್ತು.
ದೂರನ್ನು ಪುರಸ್ಕರಿಸಿರುವ ಲೋಕಾಯುಕ್ತ ಸಂಸ್ಥೆಯು ಡಿ.24ರೊಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಮಾತನಾಡಿದ ಬೆಂವಿವಿ ಕುಲಸಚಿವೆ ಕೆ.ಕೆ. ಸೀತಮ್ಮ, `ಸರ್ಕಾರದ ಅನುಮತಿ ಕೋರಿಯೇ ಆಡಳಿತಾತ್ಮಕ ಮತ್ತು ಪಾರದರ್ಶಕವಾಗಿ ಸಿಂಡಿಕೇಟ್ ಸದಸ್ಯರ ಒಪ್ಪಿಗೆ ಪಡೆದು, ಸಭೆ ನಡೆಸಿಯೇ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಹಣ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಗುವುದು. ಇದರಲ್ಲಿ ಧೈರ್ಯಗೆಡುವ ಯಾವುದೇ ಸಂಗತಿಗಳಿಲ್ಲ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


