ಕೊಲೆಗೈದು ದರೋಡೆಗೆ ಹೊಂಚು
ವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ಗುಂಪಿನ ವ್ಯಕ್ತಿಯನ್ನು ಕೊಲೆಗೈದು ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಕುಖ್ಯಾತ ರೌಡಿ ಅಪ್ಸರ್‍ಖಾನ್ ಅಲಿಯಾಸ್ ಅಪ್ಸಿಯ ಐದು ಮಂದಿ ಸಹಚರರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗ...

ಬೆಂಗಳೂರು: ವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ಗುಂಪಿನ ವ್ಯಕ್ತಿಯನ್ನು ಕೊಲೆಗೈದು ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಕುಖ್ಯಾತ ರೌಡಿ ಅಪ್ಸರ್‍ಖಾನ್ ಅಲಿಯಾಸ್ ಅಪ್ಸಿಯ ಐದು ಮಂದಿ ಸಹಚರರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು, ಆರೋಪಿಗಳಿಂದ ಮಾರಕಾಸ್ತ್ರ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲಿಯಾಸ್ ನಗರದ ನಿವಾಸಿ ಮಹಮದ್ ತೌಸಿಫ್ (26), ಮುಸೀರ್(32), ಮಸೂದ್ (25), ಉಮೇಶ(27) ಮತ್ತು ರಾಮಕೃಷ್ಣನಗರದ ಮಂಜೇಶ ಅಲಿಯಾಸ್ ಲಾರಿ ಮಂಜ(25) ಬಂಧಿತರು. ಡಿ.22ರಂದು ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಘುವನಹಳ್ಳಿ ಪೈಪ್‍ಲೈನ್ ರಸ್ತೆಯಲ್ಲಿರುವ ಜಲಮಂಡಲಿ ರಸ್ತೆ ಜಂಕ್ಷನ್ ಸಮೀಪ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಎದುರಾಳಿ ಗುಂಪಿನ ಮೃತ ರೌಡಿ ದಿವಾನ್ ಆಲಿಯ ತಮ್ಮ ಅಸ್ಗರ್‍ನನ್ನು ಕೊಲೆಗೈದು ದರೋಡೆ ಮಾಡಲು ಆರೋಪಿಗಳು ಸಜ್ಜಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ತಕ್ಷಣ ಕಾರ್ಯಪ್ರವೃತ್ತರಾಗಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿಕೊಂಡಿದ್ದ ಕ್ವಾಲೀಸ್ ಕಾರು, ಅಕ್ಸೇಸ್ ಸ್ಕೂಟರ್, ಬುಲೆಟ್ ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಯಾಜ್ ಕೊಲೆ ಪ್ರಕರಣದಲ್ಲಿ ರಾಮನಗರದ ಜೈಲು ಸೇರಿರುವ ಕುಖ್ಯಾತ ರೌಡಿ ಅಪ್ಸರ್‍ಖಾನ್ ಮತ್ತು ವಾಸೀಂನ ಕುಮ್ಮಕ್ಕಿನಿಂದ ಆರೋಪಿಗಳಾದ ತೌಸಿಫ್, ಮಂಜೇಶ, ಲಾರಿ ಮಂಜ, ಮಸೂದ್ ಹಾಗೂ ಉಮೇಶ ಗುಂಪು ಕಟ್ಟಿ ಮೃತ ದಿವಾನ್ ಆಲಿ ಸಹೋದರರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಆರೋಪಿಗಳಾದ ಮುಸೀರ್ ಮತ್ತು ಮಸೂದ್ ಜೈಲಿನಲ್ಲಿರುವ ವಾಸೀಂನ ಹತ್ತಿರದ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷ್ಯ ನಾಶಕ್ಕೆ ಕೊಲೆ ಸಂಚು: ರೌಡಿ ಶೀಟರ್ ದಿವಾನ್ ಆಲಿ ಕೊಲೆ ಪ್ರಕರಣದ ಸಾಕ್ಷಿದಾರ ನಯಾಜ್‍ನ ಕೊಲೆ ಮಾಡಿ ಜೈಲು ಸೇರಿರುವ ಅಪ್ಸರ್‍ಖಾನ್ ಮತ್ತು ವಾಸೀಂ, ದಿವಾನ್ ಆಲಿಯ ಉಳಿದ ಸಹೋದರರನ್ನು ಕೊಲೆ ಮಾಡಿದರೆ, ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳಲು ಯಾರು ಇರುವುದಿಲ್ಲ. ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ದಿವಾನ್ ಆಲಿ ಕೊಲೆ ಪ್ರಕರಣ ಬಿದ್ದು ಹೋಗುತ್ತದೆ ಎಂದು ಭಾವಿಸಿ, ಜೈಲಿನಲ್ಲಿದ್ದುಕೊಂಡು ಈ ಕೊಲೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಲಾರಿ ಮಂಜನ ವಿರುದ್ಧ ತುಳುನಾಡಿನ ಹೊಸೂರು ಸಿಪ್ಕಾಟ್ ಪೊಲೀಸ್ ಠಾಣೆ, ಕನಕಪುರದ ಹಲಗೂರು ಮತ್ತು ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಮರಳು ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


