ಜಿಲ್ಲಾ ಸುದ್ದಿ

ಚಾಕ್ ಪೀಸ್ ಖರೀದಿಸಲು ದುಡ್ಡಿಲ್ಲ, ಅಗತ್ಯ ವಸ್ತುಗಳಿಲ್ಲ; 3 ದಿನಗಳ ಕಾಲ ಸರ್ಕಾರಿ ಶಾಲೆ ಬಂದ್!

ಅಧ್ಯಾಪಕರೇ ಕೈಯಿಂದ ದುಡ್ಡು ಹಾಕಿ ಚಾಕ್ ಖರೀದಿಸಬೇಕಾದ ಅವಸ್ಥೆ. ಎಷ್ಟು ದಿನ ಹೀಗೆ ತಮ್ಮ ಕೈಯಿಂದ ಖರ್ಚು ಮಾಡಲಿ? ಹಾಗಾಗಿ ಸರ್ಕಾರಿ ಶಾಲೆಯ ಶಿಕ್ಷಕರು...

ಚಾಕ್ ಪೀಸ್ ಖರೀದಿಸಲು ದುಡ್ಡಿಲ್ಲ, ಅಗತ್ಯ ವಸ್ತುಗಳಿಲ್ಲ; 3 ದಿನಗಳ ಕಾಲ ಸರ್ಕಾರಿ ಶಾಲೆ ಬಂದ್!
ಸರ್ಕಾರಿ ಶಾಲೆ (ಸಾಂದರ್ಭಿಕ ಚಿತ್ರ)
Published On :
ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಸರ್ಕಾರ ಸರ್ಕಾರಿ ಶಾಲೆಗಳಿಗೆ ನೀಡಬೇಕಾದ ವಾರ್ಷಿಕ ಅನುದಾನವನ್ನು ಇನ್ನೂ ನೀಡಿಲ್ಲ. ಈ ಸರ್ಕಾರಿ ಶಾಲೆಗಳಲ್ಲೀಗ ಅಗತ್ಯ ವಸ್ತುಗಳಾಗಲೀ, ಬರೆಯಲು ಚಾಕ್ ಪೀಸ್‌ಗಳೂ ಇಲ್ಲ. ಅಧ್ಯಾಪಕರೇ ಕೈಯಿಂದ ದುಡ್ಡು ಹಾಕಿ ಚಾಕ್ ಖರೀದಿಸಬೇಕಾದ ಅವಸ್ಥೆ. ಎಷ್ಟು ದಿನ ಹೀಗೆ ತಮ್ಮ ಕೈಯಿಂದ ಖರ್ಚು ಮಾಡಲಿ? ಹಾಗಾಗಿ ಸರ್ಕಾರಿ ಶಾಲೆಯ ಶಿಕ್ಷಕರು ಮೂರು ದಿನಗಳ ಕಾಲ ಶಾಲೆ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಶಾಲೆಗೆ ಅಗತ್ಯ ವಸ್ತುಗಳನ್ನು ಪೂರೈಸಿ ಎಂದು ಜಿಲ್ಲೆಯ ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಮೂರು ದಿನಗಳ ಕಾಲ ಶಾಲೆ ಬಂದ್ ಮಾಡಲು ಶಿಕ್ಷಕರ ಸಂಘ ತೀರ್ಮಾನಿಸಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರೈಮರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಗುರಿಕರ್, ಶಾಲೆಗಳಿಗೆ ಅನುದಾನ ಬೇಕೇ ಬೇಕು.  ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರ ಅನುದಾನ ನೀಡಲೇ ಇಲ್ಲ ಎಂದು ಹೇಳಿದ್ದಾರೆ. 
ರಾಜ್ಯದಲ್ಲಿ ಸುಮಾರು 46,000 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಸರ್ಕಾರ ಪ್ರತೀ ವರ್ಷ ರು. 15,000 ವನ್ನು ವಾರ್ಷಿಕ ದುರಸ್ಥಿಗಾಗಿ ನೀಡಿದರೆ, ರು. 7000 ವನ್ನು ಪ್ರೈಮರಿ ಶಾಲೆಗಳಿಗೆ ಪ್ರಾಥಮಿಕ ಅನುದಾನವಾಗಿ ನೀಡುತ್ತದೆ. ಅದೇ ವೇಳೆ ಎಲ್‌ಪಿ ಶಾಲೆಗಳಿಗೆ  ರು. 15,000 ದುರಸ್ಥಿ ಅನುದಾನ ಮತ್ತು ರು. 5000 ವನ್ನು ಪ್ರಾಥಮಿಕ ಅನುದಾನನಾಗಿ ನೀಡುತ್ತದೆ.
ಪ್ರತೀ ವರ್ಷ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗುವ ಜೂನ್ ತಿಂಗಳಲ್ಲಿ ಈ ಅನುದಾನ ನೀಡಲಾಗುತ್ತದೆ. ಇದು ಸಿಗದೇ ಇದ್ದಾಗ ಜಿಲ್ಲಾ ಮಟ್ಟದಲ್ಲಿ ಅಧಿಕೃತರಿಗೆ ವಿಷಯ ತಿಳಿಸಿದ್ದೇವೆ. ಇದರಿಂದ ಏನೂ ಪ್ರಯೋಜನ ಆಗಿಲ್ಲ. ಹಾಗಾಗಿ ನಾವು ಶಾಲೆ ಮುಚ್ಚಲು ತೀರ್ಮಾನಿಸಿದ್ದೇವೆ ಎಂದು ಗುರಿಕರ್ ಹೇಳಿದ್ದಾರೆ.
ಆದಾಗ್ಯೂ, ಯಾವ ದಿನ ಶಾಲೆ ಮುಚ್ಚಿ ಪ್ರತಿಭಟನೆ ಮಾಡುತ್ತೇವೆ ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಜನವರಿ 19 ಮತ್ತು 20 ರಂದು ನ್ಯಾಷನಲ್ ಎಜ್ಯುಕೇಶನಲ್ ಕಾನ್ಫರೆನ್ಸ್ ನಡೆಸಲು ನಾವು ತೀರ್ಮಾನಿಸಿದ್ದು, ಇದರಲ್ಲಿ ರಾಜ್ಯಾದ್ಯಂತವಿರುವ ಶಿಕ್ಷಕರು ಭಾಗವಹಿಸಲಿದ್ದಾರೆ. ಆ ಸಭೆಯಲ್ಲಿ ನಮ್ಮ ಪ್ರತಿಭಟನೆ ದಿನಾಂಕದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗುರಿಕರ್ ಹೇಳಿದ್ದಾರೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಶಾಲಾ ಅಭಿವೃದ್ದಿ ಮತ್ತು ಮೇಲ್ವಿಚಾರಣಾ ಸಮಿತಿಯ ಪಾತ್ರ ಮತ್ತು ಸಹಯೋಗದ ಬಗ್ಗೆ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅನುದಾನ ವಿಳಂಬವಾಗಿರುವ ವಿಷಯ ಚರ್ಚೆಯಾಗಿದೆ.
ಶಾಲೆಗಳು ಉತ್ತಮ ರೀತಿಯಲ್ಲಿ ಇರಬೇಕೆಂದು ಸರ್ಕಾರ ಬಯಸುತ್ತದೆ. ಅದೇ ವೇಳೆ ದುರಸ್ಥಿಗಾಗಿ ಹಣವನ್ನೂ ನೀಡುತ್ತಿಲ್ಲ. ಹೀಗೆ ಸಿಕ್ಕ ಹಣಗಳು ಚಿಕ್ಕ ಪುಟ್ಟ ದುರಸ್ಥಿಗಳಿಗೆ, ಕಟ್ಟಡಗಳಿಗೆ ಪೇಂಟ್ ಮಾಡಲು ಬಳಸಲಾಗುತ್ತದೆ ಎಂದು ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ ಹೇಳಿದ್ದಾರೆ.
-ರಶ್ಮಿ ಬೇಲೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.