ಸತ್ತ ಮಗನ ಆಸೆ ಪೂರೈಸಲು ಎತ್ತು-ಕರುವಿಗೆ ಮದುವೆ ಮಾಡಿಸಿದ ಪೋಷಕರು!
ಸತ್ತ ಮಗನ ಆಸೆ ಪೂರೈಸಲು ಮುಂದಾದ ಪೋಷಕರು, ಎತ್ತು ಹಾಗೂ ಹಸುವಿನ ಕರುವಿಗೆ ವಿವಾಹ ಮಾಡಿಸಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ..

ಚನ್ನರಾಯಪಟ್ಟಣ: ವಯಸ್ಸಿಗೆ ಬಂದ ಮಗ ಅಕಾಲಿಕ ಮರಣಕ್ಕೀಡಾಗಿ ಪ್ರತಿದಿನ ಕನಸಿನಲ್ಲಿ ಬಂದು ಮದುವೆ ಮಾಡುವಂತೆ ಕಾಡುತ್ತಿದ್ದ. ಮಗನ ಆಸೆ ಪೂರೈಸಲು ಮುಂದಾದ ಪೋಷಕರು, ಎತ್ತು ಹಾಗೂ ಹಸುವಿನ ಕರುವಿಗೆ ವಿವಾಹ ಮಾಡಿಸಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಹೊಸಹಳ್ಳಿ ಗ್ರಾಮದ ರಂಗೇಗೌಡ ಹಾಗೂ ಭಾಗ್ಯಮ್ಮ ದಂಪತಿ ಮಗ ಸಂತೋಷ್, 6 ವರ್ಷಗಳ ಹಿಂದೆ ಸಾವಿಗೀಡಾಗಿದ್ದ. ಆ ವೇಳೆ, ಆತನಿಗೆ ಮದುವೆಗಾಗಿ ಹೆಣ್ಣು ಹುಡುಕಲಾಗುತ್ತಿತ್ತು. ಸತ್ತ ಮಗ ಕನಸಿನಲ್ಲಿ ಬಂದು, ದಯಮಾಡಿ ನನ್ನ ಮದುವೆ ಮಾಡಿಸಿ. ನಾನು ಸತ್ತಿರುವುದರಿಂದ ನನ್ನ ಬದಲಿಗೆ ಒಂದು ಎತ್ತು ಹಾಗೂ ಒಂದು ಹಸು ಕರುವಿನ ಜೊತೆ ಮದುವೆ ಮಾಡಿಸಿ. ಅದರಲ್ಲಿ ನಾನಿರುತ್ತೇನೆ' ಎಂದು ಕಾಡುತ್ತಿದ್ದನಂತೆ. ಮೃತ ಮಗನ ಆಸೆ ಪೂರೈಸಿದ ಸಂತೋಷದಲ್ಲಿರುವ ಪೋಷಕರು ಶುಕ್ರವಾರ ಬೀಗರ ಊಟ ಇಟ್ಟುಕೊಂಡಿದ್ದಾರೆ.
ಕರುವನ್ನು ವರ ಮತ್ತು ವಧುವಿನ ರೀತಿ ಶೃಂಗರಿಸಿ ಗುರುವಾರ ಅದ್ಧೂರಿಯಾಗಿ ಮದುವೆ ಮಾಡಿದರು. ಪಶುಗಳ ಈ ಮಾಂಗಲ್ಯ ಧಾರಣೆ ಮುಹೂರ್ತಕ್ಕೆ ಸುಮಾರು 1 ಸಾವಿರ ಜನ ಬಂದು, ನೂತನ ವಧು-ವರರನ್ನು ಹಾರೈಸಿದರು. ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಈ ಮದುವೆಗಾಗಿ ಚಪ್ಪರ ಹಾಕಲಾಗಿತ್ತು.
ಎತ್ತಿಗೆ ಸಂತೋಷ್ ಎಂದು, ಹಸುವಿನ ಕರುವಿಗೆ ಸುಧಾರಾಣಿ ಎಂದು ಹೆಸರು ಇಡಲಾಗಿತ್ತು. ಎತ್ತಿಗೆ ವರನ ತರಹ ಶೃಂಗಾರ ಮಾಡಿ, ಹೊಸಹಳ್ಳಿಯಿಂದ ಗುಳ್ಳೇನಹಳ್ಳಿಗೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಇದೇ ವೇಳೆ, ಗುಳ್ಳೇನಹಳ್ಳಿ ಗ್ರಾಮದ ಹಸುವಿನ ಕರುವಿನ ಕಿವಿಗೆ ಚಿನ್ನದ ಓಲೆ, ಜುಮುಕಿ, ಕಾಲಿಗೆ ಬಳೆ, ಕಾಲುಂಗುರ, ಗೆಜ್ಜೆ ಕಟ್ಟಿ ಸಿಂಗರಿಸಲಾಗಿತ್ತು. ನಂತರ, ಗಂಡಿನ ಕಡೆಯವರು ತಂದಿದ್ದ ಹೊಸ ಸೀರೆಯನ್ನು ಉಡಿಸಿ ಮಂಟಪದಲ್ಲಿ ನಿಲ್ಲಿಸಿ, ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು. ನಂತರ ನವಜೋಡಿಗೆ ಆರತಿ ಬೆಳಗಿ, ಹಸುವನ್ನು ಮನೆತುಂಬಿಸಿಕೊಳ್ಳಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


