ಬೆಳಗ್ಗೆಯೇ ಸಚಿವರಿಗೆ ಗುಂಡಿ ದರ್ಶನ
ನಗರದೆಲ್ಲೆಡೆ ಗುಂಡಿ ಬಿದ್ದ ರಸ್ತೆಗಳು, ಇದರ ನಡುವೆಯೇ ವಾಹನ ಸವಾರರ ಪರದಾಟ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ನಗರದ ಜನತೆ ಬಿಬಿಎಂಪಿ, ಜನಪ್ರತಿನಿಧಿಗಳ ನ್ನು ವ್ಯಾಪಕವಾಗಿ ಟೀಕಿಸುತ್ತಲೇ ಇದ್ದಾರೆ ಇಂತಹ ಸಮಸ್ಯೆಗಳನ್ನು ಗಂಭೀರವಾಗಿ...

ಬೆಂಗಳೂರು: ನಗರದೆಲ್ಲೆಡೆ ಗುಂಡಿ ಬಿದ್ದ ರಸ್ತೆಗಳು, ಇದರ ನಡುವೆಯೇ ವಾಹನ ಸವಾರರ ಪರದಾಟ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ನಗರದ ಜನತೆ ಬಿಬಿಎಂಪಿ, ಜನಪ್ರತಿನಿಧಿಗಳ ನ್ನು ವ್ಯಾಪಕವಾಗಿ ಟೀಕಿಸುತ್ತಲೇ ಇದ್ದಾರೆ ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮಂಗಳವಾರ ಬೆಳಗ್ಗೆಯೇ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಹಾಕಿದರು.
ಯಲಹಂಕ ಉಪ ನಗರ, ವಿದ್ಯಾರಣ್ಯಪುರಂ, ಚಲ್ಲಘಟ್ಟ, ಅಲ್ಲಾಳಸಂದ್ರ ರೈಲ್ವೆ ಮೇಲು ಸೇತುವೆ, ಎಚ್‍ಪಿಆರ್ ಬಡಾವಣೆ ಸೇರಿದಂತೆ ಹಲವೆಡೆ ರಸ್ತೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು. ಬಹುತೇಕ ಕಡೆ ಕಳಪೆ ಕಾಮಗಾರಿಯಿಂದ ಮೃತ್ಯು ಕೂಪದಂತೆ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಕಂಡ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರದಕ್ಷಿಣೆ ವೇಳೆ ರಸ್ತೆ ದುಸ್ಥಿತಿ ಹಾಗೂ ಗುಣಮಟ್ಟ ಪರಿಶೀಲಿಸಿದ ಸಚಿವರು, ಕಳಪೆ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ``ಭವಿಷ್ಯದಲ್ಲಿ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಗುತ್ತಿಗೆದಾರರ ಆಯ್ಕೆ ಬಹಳ ಮುಖ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಅನುಭವಿ ಹಾಗೂ ವೈಜ್ಞಾನಿಕತೆಗೆ ಆದ್ಯತೆ ನೀಡುವ ಗುತ್ತಿಗೆದಾರರಿಗೆ ಮಾತ್ರ ಬಿಬಿಎಂಪಿ ಕಾಮಗಾರಿಗಳನ್ನು
ನೀಡಬೇಕು'' ಎಂದು ಪಾಲಿಕೆ ಆಯುಕ್ತ ಜಿ.ಕುಮಾರ್ ನಾಯಕ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಮೊದಲು ಅಲ್ಲಾಳಸಂದ್ರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದರು. ಇಲ್ಲಿನ ರಸ್ತೆ ಕಾಮಗಾರಿಯನ್ನು ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಸೇರಿ ಒಟ್ಟು ರು.39 ಕೋಟಿ ವೆಚ್ಚದಲ್ಲಿ ನಡೆಸಿದೆ. ಈ ಭಾಗದ ವಾಹನ ಸವಾರರಿಗೆ ಅನುಕೂಲವಾಗುವಂತೆ ನಿರ್ಮಿಸಿರುವ ಈ ಕಾಮಗಾರಿ ಕಳಪೆಯಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆಯನ್ನು ವಿಚಾರಿಸುವಂತೆ ಆಯುಕ್ತರಿಗೆ ಹೇಳಿದರು.
ನಂತರ ಯಲಹಂಕ ಉಪ ನಗರದ 16ನೇ ಬಿ ಮುಖ್ಯ ರಸ್ತೆ ಪರಿಶೀಲಿಸಿದರು. 1.83 ಕಿ.ಮೀ. ಉದ್ದದ ಈ ರಸ್ತೆಯನ್ನು 2013-14ರಲ್ಲಿ ನಿರ್ಮಿಸಲಾಗಿದೆ. ಆದರೆ, ಮಳೆ ನೀರು ರಸ್ತೆಯಲ್ಲೇ ನಿಂತಿರುವುದರಿಂದ ರಸ್ತೆಯಲ್ಲಿ ಗುಂಡಿಗಳಾಗಿವೆ. ಐದಾರು ಕಡೆ ಇದೇ ಸ್ಥಿತಿಯನ್ನು ಕಂಡ ಸಚಿವರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
`ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು, ರಸ್ತೆಯಲ್ಲೇ ನಿಂತಿದೆ. ಇದೆಲ್ಲ ಅಧಿಕಾರಿಗಳ ಬೇಜಾಬ್ದಾರಿತನ. ಕೂಡಲೇ ಈ ರಸ್ತೆ ಬಗ್ಗೆ ಸಮಗ್ರ ವರದಿ ನೀಡುವಂತೆ' ಮುಖ್ಯ ಎಂಜಿನಿಯರ್‍ಗೆ ಆದೇಶಿಸಿದರು.
ರಸ್ತೆಯ ಸಮಗ್ರ ಮಾಹಿತಿ ತಿಳಿದುಕೊಳ್ಳಿ: ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಸಂಬಂಧಪಟ್ಟ ರಸ್ತೆಯ ಮಾಹಿತಿಯನ್ನು ಅಧಿಕಾರಿಗಳು ಕಡ್ಡಾಯವಾಗಿ ಹೊಂದಿರಬೇಕು. ಇದರಿಂದ ರಸ್ತೆಯ ಹಿಂದಿನ ಮತ್ತು ಈಗಿನ ಸ್ಥಿತಿ, ಕಾಮಗಾರಿ, ಗುಣಮಟ್ಟ, ವೆಚ್ಚ ಎಲ್ಲವೂ ತಿಳಿಯಲಿದೆ. ಇದರಿಂದ ಗುಣಮಟ್ಟಕ್ಕೆ ಆದ್ಯತೆ ನೀಡಲು ಸಾಧ್ಯವಾಗಲಿದೆ. ಅದೇ ರೀತಿ ಪ್ರತಿ ವರ್ಷ ಹೊಸ ರಸ್ತೆ ಮತ್ತು ಗುಂಡಿ ಮುಚ್ಚುವುದು ಸೇರಿದಂತೆ ರಸ್ತೆಗೆ ಸಂಬಂಧಿಸಿದ ಯಾವುದೇ ಕಾಮಗಾರಿ ನಡೆಸುವ ಮುನ್ನ ಮುಂದಾಲೋಚನೆ ಮಾಡಬೇಕು. ಇಲ್ಲವಾದಲ್ಲಿ ಮಳೆಗಾಲದಲ್ಲಿ ಗುಂಡಿ ಮುಚ್ಚಿದರೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.ಯಾವಾಗ ಟೆಂಡರ್ ಕರೆಯಬೇಕು, ಗುಂಡಿ ಮುಚ್ಚಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕು. ಜೊತೆಗೆ, ಹೊಸ ರಸ್ತೆಗಳ ನಿರ್ಮಾಣ ಮುನ್ನ ಚರಂಡಿ ಮತ್ತು ನೀರಿನ ಸಂಪರ್ಕ ಪೂರ್ಣಗೊಳಿಸುವುದು ಉತ್ತಮ ಎಂದರು.
ಚಲ್ಲಘಟ್ಟಕ್ಕೆ ಸೌಲಭ್ಯ ಒದಗಿಸಿ: ಕಾವೇರಿ ನೀರು, ಉತ್ತಮ ರಸ್ತೆ ಸೌಲಭ್ಯದಿಂದ ವಂಚಿತವಾಗಿರುವ ವಾರ್ಡ್ ನಂ.150ರ ಚಲ್ಲಘಟ್ಟ ನಿವಾಸಿಗಳ ಬೇಡಿಕೆ ಈಡೇರಿಸುವಂತೆ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಚಲ್ಲಘಟ್ಟದಿಂದ ಮುರುಗೇಶರಪಾಳ್ಯದವರೆಗೆ ಹದಗೆಟ್ಟ ರಸ್ತೆಯಿಂದ ತೀವ್ರ ತೊಂದರೆಯಾಗಿದೆ. ನಿವಾಸಿಗಳ ಅನುಕೂಲಕ್ಕೆ ಕಾವೇರಿ ನೀರು ಹಾಗೂ ಗುಣಮಟ್ಟದ ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಕೂಡಲೇ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


