ಸ್ವಚ್ಛತೆಗೆ ಪೊರಕೆ ಹಿಡಿದ ರೌಡಿಗಳು
ಅವರೆಲ್ಲ ಕೆಲವೇ ವರ್ಷಗಳ ಹಿಂದೆ ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಬೀದಿ ಬೀದಿಗಳಲ್ಲಿ ಹೊಡೆದಾಡಿದವರು. ರಾತ್ರಿ...

ಬೆಂಗಳೂರು: ಅವರೆಲ್ಲ ಕೆಲವೇ ವರ್ಷಗಳ ಹಿಂದೆ ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಬೀದಿ ಬೀದಿಗಳಲ್ಲಿ ಹೊಡೆದಾಡಿದವರು. ರಾತ್ರಿ ವೇಳೆ ರಸ್ತೆ ಬದಿ, ಪೊದೆಗಳಲ್ಲಿ, ಮರಗಳ ಮರೆಯಲ್ಲಿ ಅವಿತು ಕುಳಿತು ಅಮಾಯಕರ ಅಡ್ಡಗಟ್ಟಿ ದರೋಡೆ ಮಾಡಿದವರು. ಭಾನುವಾರ ಬೆಳಗ್ಗೆ ಪೊಲೀಸರ ಎದುರೇ ಆ ವ್ಯಕ್ತಿಗಳ ಕೈಯಲ್ಲಿ ಮತ್ತೊಮ್ಮೆ ಮಚ್ಚುಗಳು ಬಂದಿದ್ದವು. ಆದರೆ, ರಕ್ತ ಹರಿಸಲು ಅಲ್ಲ. ಬದಲಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಬೆಳೆದಿದ್ದ ಪೊದೆಗಳು, ಗಿಡ ಗಂಟಿಗಳನ್ನು ಕತ್ತರಿಸಿ ಅಂತಹ ಪ್ರದೇಶಗಳನ್ನು ಸ್ವಚ್ಛಗೊಳಿಸಲು!
ಹೌದು. ಪ್ರತಿ ವರ್ಷ ಡಿಸೆಂಬರ್‍ನಲ್ಲಿ ರಾಜ್ಯ ಪೊಲೀಸರು ಆಚರಿಸುವ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ರೌಡಿಗಳ ಮನಪರಿವರ್ತನೆ ಮಾಡುವುದರ ಜತೆಗೆ ಸಮಾಜಕ್ಕೆ ಏನಾದರೂ ಉಪಯೋಗವಾಗಲಿ ಎನ್ನುವ ಕಾರಣದಿಂದ ರೌಡಿಗಳನ್ನು ಠಾಣೆಗೆ ಕರೆಸಿಕೊಂಡು ಎಚ್ಚರಿಕೆ ನೀಡುವುದು ಮಾತ್ರವಲ್ಲದೇ ಅವರಿಂದ ಸ್ವಚ್ಛತಾ ಕಾರ್ಯವನ್ನು ಮಾಡಿಸಲಾಯಿತು.
ಕಮಲಾ ನಗರ ನೀರಿನ ಪೈಪ್‍ಲೈನ್‍ಗಳ ಸೇತುವೆ ಹಾಗೂ ಮಾಗಡಿ ರಸ್ತೆ ಪೊಲೀಸ್ ವಸತಿಗೃಹದಲ್ಲಿ ರೌಡಿಗಳಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಬಸವೇಶ್ವರ ನಗರ ಹಾಗೂ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ 40ಕ್ಕೂ ಅಧಿಕ ರೌಡಿಗಳ ಬಳಸಿಕೊಂಡು ಕಮಲಾ ನಗರದ 40 ಕಣ್ಣು ಸೇತುವೆ ಸಮೀಪದ ನೀರಿನ ಪೈಪ್‍ಗಳ ಬಳಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಸೇತುವೆಯು ಅತ್ಯಂತ ಪ್ರಮುಖವಾಗಿದ್ದು ಕಮಲಾ ನಗರ, ಕುರುಬರಹಳ್ಳಿ, ಸವೇಶ್ವರದ ಕಡೆಯಿಂದ ಕೆಲಸಕ್ಕಾಗಿ ಪೀಣ್ಯ ಹಾಗೂ ರಾಜಗೋಪಾಲ ನಗರದ ಕಡೆ ಕೆಲಸಕ್ಕಾಗಿ ನಿತ್ಯ ಓಡಾಡುವವರಿಗೆ ಅನುಕೂಲ ಕಲ್ಪಿಸಿದೆ.
ವಿಜಯನಗರ ಉಪವಿಭಾಗ ಎಸಿಪಿ ಎಸ್. ಕೆ ಉಮೇಶ್ ಅವರ ನೇತೃತ್ವದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆವರೆಗೂ ವಿವಿಧ ಠಾಣೆಗಳ ಪೊಲೀಸರ ಮೇಲ್ವಿಚಾರಣೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ರೌಡಿಗಳು ಉತ್ಸಾಹದಿಂದ ಭಾಗಿಯಾದರು.
ಚಿತ್ರಣವೇ ಬದಲು: ರಾಜಗೋಪಾಲ ನಗರ ಹಾಗೂ ಪೀಣ್ಯದಲ್ಲಿರುವ ಗಾರ್ಮೆಂಟ್ಸ್ ಗಳಿಗೆ ಪ್ರತಿನಿತ್ಯ ಹೆಣ್ಣುಮಕ್ಕಳು ಸೇರಿ ಸಾವಿರಾರು ಮಂದಿ ಪೈಪ್‍ಲೇನ್ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಾರೆ. ಆದರೆ, ಈ ಜಾಗದಲ್ಲಿ ಹಲವಾರು ತಿಂಗಳಿಂದ ದಟ್ಟವಾಗಿ ಗಿಡಗಂಟಿಗಳು ಬೆಳೆದಿದ್ದವು. ಇದರಿಂದ ಮಹಿಳೆಯರು ಹಾಗೂ ಒಂಟಿಯಾಗಿ ಓಡಾಡುವವರಿಗೆ ಗಾಯ ಉಂಟಾಗುತ್ತಿತ್ತು. ಹೀಗಾಗಿ, ಈ ಜಾಗವನ್ನು ಆಯ್ಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ನಡೆಸಲಾಯಿತು.
ರೌಡಿಗಳ ಜತೆಗೆ ಸ್ಥಳೀಯರು ಕೂಡ ಸಾಥ್ ನೀಡಿದರು. ಪರಿಣಾಮ ಈ ಪ್ರದೇಶದ ಚಿತ್ರಣವೇ ಬದಲಾಗಿದೆ ಎಂದು ಎಸಿಪಿ ಎಸ್. ಕೆ ಉಮೇಶ್ ಹೇಳಿದರು. ಇದೇ ವೇಳೆ ಮಾಗಡಿ ರಸ್ತೆ ಠಾಣೆ ಹಾಗೂ ಕೆಪಿ ಅಗ್ರಹಾರ ಠಾಣೆ ವ್ಯಾಪ್ತಿಯ 100 ರೌಡಿಗಳನ್ನು ಬಳಸಿಕೊಂಡು ಮಾಗಡಿ ರಸ್ತೆ ಪೊಲೀಸ್ ವಸತಿಗೃಹಗಳಲ್ಲಿ ನೆಲದಡಿಯ ಟ್ಯಾಂಕ್‍ಗಳು ಹಾಗೂ ಬಯಲು ಪ್ರದೇಶದಲ್ಲಿ ದಟ್ಟವಾಗಿ ಬೆಳೆದಿದ್ದ ಪೊದೆ ಸ್ವಚ್ಛಗೊಳಿಸಲಾಯಿತು.
ಸೊಳ್ಳೆಗಳ ಬೀಡಾಗಿದ್ದ ಪೊದೆಗಳು, ರೌಡಿಗಳ ಕೈಚಳಕದಿಂದ ಬಯಲು ಮೈದಾನದಂತೆ ಕಂಗೊಳಿಸಿದವು. ರೌಡಿಗಳಿಂದ ಸ್ವಚ್ಛತಾ ಕಾರ್ಯ ಮಾಡಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸುಮನಹಳ್ಳಿ ಜಂಕ್ಷನ್ ಸೇರಿದಂತೆ ಬೇರೆ ಬೇರೆ ಕಡೆ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಹೀಗಾಗಿಯೇ ನಮ್ಮ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ ಬಹುತೇಕ ನಿಯಂತ್ರಣ ದಲ್ಲಿದೆ.ಯಾರಾದರೂ ಆ ರೀತಿ ತೊಡಗಿದರೆ ಅಂತಹವರನ್ನು ಕಾನೂನು ವ್ಯಾಪ್ತಿಯಲ್ಲೇ ಎಚ್ಚರಿಕೆ ನೀಡಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


