ವಿಟಿಯುನಲ್ಲಿ ನೇಮಕಾತಿ ಹಗರಣ ಸರ್ಕಾರಕ್ಕೆ ದೂರು
ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಉನ್ನತ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾಗಿದೆ...

ಬೆಂಗಳೂರು: ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಉನ್ನತ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.
ಜೊತೆಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಮೂಹಿಕ ಸಾಲ ಮಂಜೂರಾತಿಯಾಗಿರುವುದು ಆ ಹಣ ನೇಮಕಾತಿ ಸಂದರ್ಭದಲ್ಲಿ ಹಂಚಿಕೆಯಾಗಿರುವ ಬಗ್ಗೆ ಗಂಭೀರ ಶಂಕೆಯೂ ವ್ಯಕ್ತವಾಗಿದೆ. ವಿಟಿಯುನಿಂದ ಇದೇ ಅಕ್ಟೋಬರ್ 30ರಂದು 319 ಮಂದಿಯನ್ನು ನೇಮಕ ಮಾಡಿದ್ದು, ಅವ್ಯವಹಾರವಾಗಿದೆ ಎಂಬುದು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸದಸ್ಯ ಕರಣ್ ಅವರ ಆರೋಪ. ಈ ಸಂಬಂಧ ಸರ್ಕಾರಕ್ಕೆ ದೂರು ಸಲ್ಲಿಸಿರುವ ಅವರು ಬುಧವಾರ ರಾಜ್ಯಪಾಲರಿಗೂ ದೂರು ಸಲ್ಲಿಸಲು ತೀರ್ಮಾನಿಸಿದ್ದಾರೆ.
ಅನೇಕ ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೋದಕೇತರ ಸಿಬ್ಬಂದಿಯನ್ನು ಖಾಯಂಗೊಳಿಸಿರುವುದು ಒಳ್ಳೆಯ ಸಂಗತಿ. ಆದರೆ, ನ್ಯಾಯಾಲಯದ ನಿರ್ದೇಶನದ ಪ್ರಕಾರ ಗರಿಷ್ಠ 100 ಮಂದಿಯನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಬಹುದು. ಇಲ್ಲಿ ನ್ಯಾಯಾಲಯದ ನಿರ್ದೇಶನಕ್ಕೂ ಮೀರಿ ನೇಮಕಾತಿ ಮಾಡಿಕೊಳ್ಳಲಾಗಿದೆ. ನೇಮಕಾತಿ ವಿಚಾರದಲ್ಲಿ ರೋಸ್ಟರ್ ನಿಯಮ ಪಾಲಿಸಿಲ್ಲ. ಜೊತೆಗೆ ವಿವಿ ಕಾರ್ಯಕಾರಿ ಮಂಡಳಿಯನ್ನೂ ಕತ್ತಲಲ್ಲಿ ಇಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನಿಯಮ ಮೀರಿ ಇಷ್ಟೊಂದು ಜನರನ್ನು ನೇಮಕ ಮಾಡಿಕೊಳ್ಳಲು ಅನುಮತಿ ಕೊಟ್ಟವರು ಯಾರು. ಮೀಸಲಾತಿ ನಿಯಮ ಪಾಲನೆಯಾಗದೇ ಹೇಗೆ ನೇಮಕ ಮಾಡಿಕೊಂಡರು, ಸರ್ಕಾರದ ಅನುಮತಿ ಇತ್ತೇ ಎಂಬುದು ಕರಣ್ ಅವರು ಸರ್ಕಾರದ ಮುಂದಿಟ್ಟಿರುವ ಪ್ರಶ್ನೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಹಣದ ಅವ್ಯವಹಾರವಾಗಿದೆ ಎಂದು ಕಾರ್ಯಕಾರಿ ಮಂಡಳಿ ಸದಸ್ಯ ಶಂಕೆ ವ್ಯಕ್ತ ಪಡಿಸಿದ್ದಾರೆ. ವಿಸ್ತರಣಾ ಶಾಖೆಯ ಬಳಿ ಇರುವ ರಾಷ್ಟ್ರೀಕೃತ ಬ್ಯಾಂಕಿನಿಂದ 170 ಸಿಬ್ಬಂದಿಗೆ ವೈಯಕ್ತಿಕ ಸಾಲ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಸಾಲ ನೀಡಲಾಗಿದ್ದು, ಈ ಹಣ ನಗದು ರೂಪದಲ್ಲಿ ವಿವಿಯ ಕೆಲವು ವ್ಯಕ್ತಿಗಳಿಗೆ ಸಂದಾಯವಾದ ನಂತರವೇ ನೇಮಕಾತಿ ಆದೇಶಗಳನ್ನು ನೀಡಲಾಗಿದೆ. ಈ ಬಗ್ಗೆ ಕೆಲವು ಸಿಬ್ಬಂದಿ ತಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ಕರಣ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


