ಜಿಲ್ಲಾ ಸುದ್ದಿ

ಒವೈಸಿಗೆ ಹೈಕೋರ್ಟ್‍ನಲ್ಲೂ ನಿರಾಶೆ

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷದ ಬಹಿರಂಗ ಸಭೆಗೆ ಅನುಮತಿ ನಿರಾಕರಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಹೈ ಕೋರ್ಟ್ ಎತ್ತಿ ಹಿಡಿದಿದೆ...

ಒವೈಸಿಗೆ ಹೈಕೋರ್ಟ್‍ನಲ್ಲೂ ನಿರಾಶೆ
ಹೈಕೋರ್ಟ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷದ ಬಹಿರಂಗ ಸಭೆಗೆ ಅನುಮತಿ ನಿರಾಕರಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಹೈ ಕೋರ್ಟ್ ಎತ್ತಿ ಹಿಡಿದಿದೆ.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆ.11 ರಂದು (ಮಂಗಳವಾರ) ಶಿವಾಜಿನಗರದ ಚೋಟಾ ಮೈದಾನದಲ್ಲಿ ಬಹಿರಂಗ ಭಾಷಣಕ್ಕೆ ಅನುಮತಿ ಕೋರಿ ಎಐಎಂಐಎಂ ಪಕ್ಷ ಸಲ್ಲಿಸಿದ್ದ ಮನವಿಯನ್ನು ನಗರ ಪೊಲೀಸ್ ಆಯುಕ್ತರು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಎಐಎಂಐಎಂ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಅನುಮತಿ ನೀಡುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿ ಮಧ್ಯಂತರ ಆದೇಶ ಹೊರಡಿಸಿದೆ.

ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯೆ ಪ್ರವೇಶಿಸುವುದು ಸರಿಯಲ್ಲ. ಬಹಿರಂಗ ಸಭೆಗೆ ಅನುಮತಿ ನೀಡಲು ಒವೈಸಿ ಸಲ್ಲಿಸಿದ್ದ ಮನವಿಯನ್ನು ಆ.10 ರಂದು ಚುನಾವಣಾಧಿಕಾರಿಗಳು ನಿರಾಕರಿಸಿದ್ದಾರೆ. ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲದೇ ಚುನಾವಣಾಧಿಕಾರಿಗಳು ಸಹ ಬಹಿರಂಗ ಸಭೆಗೆ ಅನುಮತಿ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಮಧ್ಯಂತರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಅಭಿಪ್ರಾಯ ಪಟ್ಟು ಬಹಿರಂಗ ಸಭೆಗೆ ಅನುಮತಿ ನೀಡಲು ಹೈ ಕೋರ್ಟ್ ನಿರಾಕರಿಸಿದೆ.

ಆದ್ಯಾಗೂ, ಪಾಲಿಕೆ ಚುನಾವಣೆ ದಿನಾಂಕ ಈಗಾಗಲೇ ಪ್ರಕಟವಾಗಿದ್ದು, ರ್ಯಾಲಿ, ಚರ್ಚೆ ಹಾಗೂ ಇನ್ನಿತರೆ ರಾಜಕೀಯ ಚಟುವಟಿಕೆಗೆ ಅನುಮತಿ ನೀಡುವಂತೆ ಕೋರಿ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಿ, ಆ ಮನವಿಗೆ ಆಧರಿಸಿ ಚುನಾವಣಾಧಿಕಾರಿಗಳು ಅನುಮತಿ ನೀಡಬೇಕೇ ಬೇಡವೇ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಲಿ ಎಂದು ಆದೇಶದಲ್ಲಿ ತಿಳಿಸಿದೆ. ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿ, ಒವೈಸಿ ವಿರುದ್ಧ  37 ಪ್ರಕರಣಗಳು ದಾಖಲಾಗಿವೆ. ಆತ ಪ್ರಚೋದನಕಾರಿ ಭಾಷಣ ಮಾಡುವುದರಿಂದ ಶಾಂತಿ ಕದಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಚೋಟಾ ಮೈದಾನ ಸೂಕ್ಷ್ಮ ಪ್ರದೇಶವಾಗಿದ್ದು, ಈ  ಮೈದಾನವನ್ನು ಯಾವ ರಾಜಕೀಯ ಪಕ್ಷಗಳಿಗೂ ಬಹಿರಂಗ ಸಭೆ ನಡೆಸಲು ಅನುಮತಿ ನೀಡದಂತೆ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದಾಗಿ ಪೀಠದ ಗಮನಕ್ಕೆ ತಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.