ಪರೋಲ್ ಮೇಲೆ ಹೊರಬಂದಿದ್ದ ಕೈದಿ ಕೊಲೆ
ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರೋಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಕೈದಿಯನ್ನು....

ಬೆಂಗಳೂರು: ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರೊಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಕೈದಿಯನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಹೋದರರಿಬ್ಬರು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಘಟನೆ ಯಶವಂತಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕ್ಯಾತೇನಹಳ್ಳಿಯ ಮಹಾದೇವಸ್ವಾಮಿ ಕೊಲೆಯಾದವ. ಆರೋಪಿ 2 ವರ್ಷದ ಬಾಲಕನ ಕೊಲೆ ಹಾಗೂ ಮಹಿಳೆ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ಎಸಗಿದ್ದ ಸಹೋದರರಾದ ಸಂಜಯ್ ಕುಮಾರ್ ಹಾಗೂ ವಿನೋದ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ವಿವರ: ಕೆಲಸ ಅರಸಿ ಮಹಾದೇವ ಸ್ವಾಮಿ 2005ರಲ್ಲಿ ಬೆಂಗಳೂರಿಗೆ ಬಂದಿದ್ದ. ಯಶವಂತಪುರದಲ್ಲಿ ಸಂಜಯ್ ಹಾಗೂ ವಿನೋದ್ ನಡೆಸುತ್ತಿದ್ದ ಪಾನಿಪುರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ 2006ರಲ್ಲಿ ಯಾವುದೋ ಪ್ರಕರಣವೊಂದರಲ್ಲಿ ಗುಬ್ಬಿ ಪೊಲೀಸರು ಯಶವಂತಪುರಕ್ಕೆ ಆಗಮಿಸಿ ಮಹಾದೇವ ಸ್ವಾಮಿಯನ್ನು ಬಂಧಿಸಿ ಕರೆದೊಯ್ದಿದ್ದರು. ಈ ವೇಳೆ ತಾನು ಬಂಧನಕ್ಕೆ ಒಳಗಾಗಲು ಸಹೋದರರೇ ಕಾರಣ. ಅವರೇ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಭಾವಿಸಿ ಮಹಾದೇವಸ್ವಾಮಿ ಜಗಳ ತೆಗೆದಿದ್ದ. ಗುಬ್ಬಿ ಪೊಲೀಸರಿಂದ ಬಿಡುಗಡೆಯಾಗಿ ವಾಪಸ್ ಯಶವಂತಪುರಕ್ಕೆ ಬಂದಿದ್ದ ವಮಹಾದೇವಸ್ವಾಮಿ ಸಹೋದರರಾದ ಸಂಜಯ್ ವಿನೋದ್, ಮನೆಗೆ ತೆರಳಿದ್ದ. ಆದರೆ ಮನೆಯಲ್ಲಿ ಸಹೋದರರ ಬದಲು ಅತ್ತಿಗೆ ಲಕ್ಷ್ಮಿ ಬಾಯಿ ಹಾಗೂ 2 ವರ್ಷದ ಮಗು ರಾಹುಲ್ ಇದ್ದರು. ನಿಮ್ಮಿಂದಲೇ ತಾನು ಪೊಲೀಸರ ಬಂಧನಕ್ಕೊಳಗಾಗಿದ್ದು ಎಂದು ಜಗಳ ತೆಗೆದ ಮಹಾದೇವಸ್ವಾಮಿ ಚಾಕುವಿನಿಂದ ಲಕ್ಷ್ಮಿಬಾಯಿ ಹಾಗೂ ರಾಹುಲ್ ಗೆ ಇರಿದಿದ್ದ. ರಾಹುಲ್ ಮೃತಪಟ್ಟಿದ್ದು, ಲಕ್ಷ್ಮಿ ಬಾಯಿ ಬದುಕುಳಿದಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಮಹಾದೇವಸ್ವಾಮಿಗೆ ಜೀವಾವಧಿ ಶಿಕ್ಷೆಯಾಗಿತ್ತು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮಹಾದೇವಸ್ವಾಮಿ ಬುಧವಾರ ಜೈಲಿನಿಂದ ಬಿಡುಗಡೆಯಾಗಿ ಬಂದು ಯಶವಂತಪುರ ರೈಲು ನಿಲ್ದಾಣದ ರಸ್ತೆಯಲ್ಲಿರುವ ಜನಪ್ರಿಯ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ. ಮಧ್ಯಪಾನ ಮಾಡಲು ಲಾಡ್ಜ್ ಪಕ್ಕದಲ್ಲೇ ಇರುವ ಮಾತ್ರೋಶ್ರೀ ಬಾರ್ ಗೆ ಹೋಗಿದ್ದ. ಅದೇ ವೇಳೆ ವಿನೋದ್ ಕುಮಾರ್ ಕೂಡಾ ಬಾರ್ ಗೆ ಹೋಗಿದ್ದ. ಈ ವೇಳೆ ಇಬ್ಬರು ಆಕಸ್ಮಿಕವಾಗಿ ಭೇಟಿಯಾದಾಗ ಹಳೇ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಆಗ ವಿನೋದ್ ತನ್ನ ಸಹೋದರ ಸಂಜಯ್ ಗೆ ಕರೆ ಮಾಡಿ ಬಾರ್ ಗೆ ಕರೆಸಿಕೊಂಡಿದ್ದಾನೆ.
ಕುಪಿತಗೊಂಡಿದ್ದ ಸಂಜಯ್ ಹಾಗೂ ವಿನೋದ್ ಬಾರ್ ನಲ್ಲಿದ್ದ ಮದ್ಯದ ಬಾಟಲಿಯಿಂದ ಮಹದೇವಸ್ವಾಮಿ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದಾರೆ. ಕೆಳಗೆ ಬಿದ್ದಾಗ ತಲೆ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಸಹೋದರರನ್ನ ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


