22 ದಿನಗಳು, 3371 ಪ್ರಕರಣ
ಕರ್ಕಶ ಶಬ್ದ, ವಾಯು ಮಾಲಿನ್ಯ ಉಂಟುಮಾಡುವ ವಾಹನಗಳ ವಿರುದ್ಧ ತಪಾಸಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದ 22 ದಿನದಲ್ಲಿ ನಗರದ ವಿವಿಧ 3,371 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ...

ಬೆಂಗಳೂರು: ಕರ್ಕಶ ಶಬ್ದ, ವಾಯು ಮಾಲಿನ್ಯ ಉಂಟುಮಾಡುವ ವಾಹನಗಳ ವಿರುದ್ಧ ತಪಾಸಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದ 22 ದಿನದಲ್ಲಿ ನಗರದ ವಿವಿಧ 3,371 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಬ್ದಮಾಲಿನ್ಯ, ಕರ್ಕಶ ಶಬ್ದ ಸಂಬಂಧ ಏ.1 ರಿಂದ 22ರವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 28,912 ವಾಹನ ತಪಾಸಣೆ ಮಾಡಿ ಅವುಗಳಲ್ಲಿ 1,517 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ರು.5.87 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಅದೇ ರೀತಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ 29,810 ವಾಹನಗಳ ವಿರುದ್ಧ ತಪಾಸಣೆ ನಡೆಸಿ, 1854 ವಾಹನಗಳ ವಿರುದ್ಧ ದೂರು ದಾಖಸಿಲಿ, ರು.6.56 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಸಾರಿಗೆ ಇಲಾಖೆ ವಾಹನ, ಬಸ್, ಆಟೋ, ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ತಪಾಸಣೆ ನಡೆಸಿದ್ದು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಶಬ್ಧ ಹಾಗೂ ಹೊಗೆ ಸೂಸುತ್ತಿದ್ದ ವಾಹನಗಳ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.
ಬುಧವಾರ ತಪಾಸಣೆ: ಬುಧವಾರ ಬೆಳಗ್ಗೆ ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿ, ಅಂತಹ ವಾಹನ ಮಾಲೀಕರ ವಿರುದ್ಧ ದೂರು ದಾಖಲಿಸಿ ದಂಡ ವಿಧಿಸಲಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ವಾಹನ ಮಾಲೀಕರು ಇದಕ್ಕೆ ಸಹಕರಿಸಬೇಕು. ವಾಹನಗಳಲ್ಲಿ ಕರ್ಕಶ ಶಬ್ಧ ಮಾಡುವ ಹಾರ್ನ್, ಸೈಲೆನ್ಸರ್ ಹಾಕಿಸಬಾರದು. ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಮೂಲಕ ಹೆಚ್ಚು ಹಾಗೂ ಕಲುಷಿತ ಹೊಗೆ ಉಗುಳದಂತೆ ಎಚ್ಚರವಹಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ತಿಳಿಸಿದ್ದಾರೆ.
ಸಿಬ್ಬಂದಿ ನೇಮಕಕ್ಕೆ ಅಸ್ತು
ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವ ಕಾರಣ ನಿರಂತರವಾಗಿ ವಾಹನಗಳ ತಪಾಸಣೆ ಸಾಧ್ಯವಾಗುತ್ತಿಲ್ಲ. ಸದ್ಯ 150 ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. 2820 ಇನ್ಸ್ ಪೆಕ್ಟರ್ ಹುದ್ದೆ ಮಂಜೂರಾಗಿದ್ದು, 930 ಹುದ್ದೆ ಖಾಲಿ ಇವೆ. ಇದರಿಂದ ಇತರೆ ಕೆಲಸಗಳಿಗೆ ತೊಡಕುಂಟಾಗುತ್ತಿದೆ. ಇನ್ನು ರಾಜ್ಯದಲ್ಲಿ 607 ಎಮಿಷನ್ ಟೆಸ್ಟ್ ಕೇಂದ್ರಗಳಿದ್ದು, ಬೆಂಗಳೂರಿನಲ್ಲೇ 301 ಕೇಂದ್ರಗಳಿವೆ. ಸಾರಿಗೆ ಇಲಾಖೆ ಅಧಿಕಾರಿಗಳು ಆಗಾಗ ಎಲ್ಲಾ ಕೇಂದ್ರಗಳ ಮೇಲೆ ದಾಳಿ ನಡೆಸಿ, ಅವುಗಳ ಗುಣಮಟ್ಟ ಪರಿಶೀಲಿಸಲಾಗುತ್ತದೆ. ನ್ಯೂನ್ಯತೆ ಇರುವ ಕೇಂದ್ರಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಿಂಗಳಾದರೆ ಹೊರ ರಾಜ್ಯ ವಾಹನಕ್ಕೆ ತೆರಿಗೆ ಕಡ್ಡಾಯ ಒಂದು ತಿಂಗಳಿಗಿಂತ ಹೆಚ್ಚು ಸಮಯ ರಾಜ್ಯದಲ್ಲಿ ಸಂಚರಿಸಿ ಇಲ್ಲಿಯೇ ಠಿಕಾಣಿ ಹೂಡಿರುವ ಹೊರ ರಾಜ್ಯದ ವಾಹನ ಸವಾರರು ಕಡ್ಡಾಯವಾಗಿ ತೆರಿಗೆ ಪಾವತಿಸಬೇಕು. ಸದ್ಯ ಅವರಿಗೆ ಗಡುವು ನೀಡಿದ್ದು, ಪಾವತಿಸದಿದ್ದಲ್ಲಿ ಅಂಥ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರರಾಜ್ಯಗಳಿಂದ ರಾಜ್ಯಕ್ಕೆ ಬಂದು ಇಲ್ಲಿಯೇ ಸಂಚರಿಸುತ್ತಿರುವ ವಾಹನ ಸವಾರರು 30 ದಿನಗಳಿಗೂ ಹೆಚ್ಚಿದ್ದಲ್ಲಿ, ತಾವಾಗಿಯೇ ಮುಂದೆ ಬಂದು ತೆರಿಗೆ ಪಾವತಿಸಿದರೆ ಒಳಿತು. ಇಲ್ಲವಾದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ವಾಹನ ಮಾಲೀಕರನ್ನು ಎಚ್ಚರಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ವಾಹನ ತಪಾಸಣೆ ಮಾಡುವ ವೇಳೆ ಇಂಥ ವಾಹನ ಸಿಕ್ಕಿಬಿದ್ದಲ್ಲಿ ಹಾಗೂ ಅವರು ಜೀವಾವಧಿ ತೆರಿಗೆ ಪಾವತಿಸಬೇಕು ಎಂದು ಕಂಡುಬಂದಲ್ಲಿ ತೆರಿಗೆ ಜೊತೆಗೆ ದಂಡ ವಸೂಲಿ ಮಾಡಲಾಗುವುದು. ಆದರೆ, ಈ ಸಮಯದಲ್ಲಿ ಬೇರೆ ವಾಹನ ಸವಾರರಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ.
ಅರ್ಜಿ ರದ್ದು: ರಾಜ್ಯ ಸರ್ಕಾರ ಹೊರ ರಾಜ್ಯಗಳ ವಾಹನಗಳಿಂದ ತೆರಿಗೆ ವಸೂಲಿ ಮಾಡುವುದನ್ನು ವಿರೋಧಿಸಿ, ಹೊರರಾಜ್ಯದ ಕೆಲವು ವಾಹನ ಸವಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು ತೆರಿಗೆ ವಸೂಲಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಈಗ ಆ ತಡೆ ರದ್ದಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


