ರು.10 ಸಾವಿರ ಕೋಟಿ ಮೌಲ್ಯದ ಒತ್ತುವರಿ ತೆರವಿಗೆ ಸಿದ್ಧತೆ
ಸಾರಕ್ಕಿ ಕೆರೆ ಒತ್ತುವರಿ ತೆರವು ಪೂರ್ಣಗೊಳಿಸಿರುವ ಜಿಲ್ಲಾಡಳಿತ ಸುಮಾರು ರು.10 ಸಾವಿರ ಕೋಟಿ ಮೌಲ್ಯದ 4 ಕೆರೆ ಜಾಗಗಳಲ್ಲಿನ ಒತ್ತುವರಿ ತೆರವುಗೊಳಿಸಲು ಸಿದ್ಧತೆ ನಡೆಸಿದೆ...

ಬೆಂಗಳೂರು: ಸಾರಕ್ಕಿ ಕೆರೆ ಒತ್ತುವರಿ ತೆರವು ಪೂರ್ಣಗೊಳಿಸಿರುವ ಜಿಲ್ಲಾಡಳಿತ ಸುಮಾರು ರು.10 ಸಾವಿರ ಕೋಟಿ ಮೌಲ್ಯದ 4 ಕೆರೆ ಜಾಗಗಳಲ್ಲಿನ ಒತ್ತುವರಿ ತೆರವುಗೊಳಿಸಲು ಸಿದ್ಧತೆ ನಡೆಸಿದೆ.
ಸಾರಕ್ಕಿ ಕೆರೆ ಜಾಗದ ಮೌಲ್ಯವೇ ರು.2000 ಕೋಟಿಯಷ್ಟಿದ್ದು, ಇದುವರೆಗಿನ ತೆರವು ಕಾರ್ಯಾಚರಣೆಯಲ್ಲಿ ಇದು ಅತಿ ದೊಡ್ಡ ಮೌಲ್ಯದ ತೆರವು. ಮುಂದಿನ ತಿಂಗಳು ಅಂದಾಜು ರು.10 ಸಾವಿರ ಕೋಟಿ ಮೌಲ್ಯದ ಒತ್ತುವರಿಯಲ್ಲಿ ತೆರವುಗೊಳಿಸಲಿದೆ. ಆದರೆ ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಿರು ವುದರಿಂದ ಒಂದು ತಿಂಗಳಲ್ಲಿ ಸಿದ್ಧತೆ ನಡೆಸುವುದಾಗಿ ಜಿಲ್ಲಾಡಳಿತ ಹೇಳಿದೆ. ಗೌಡನಪಾಳ್ಯ, ಚಿಕ್ಕಲ್ಲಸಂದ್ರ, ಇಟ್ಟಮಡು ಹಾಗೂ ಬಿಳೇಕಹಳ್ಳಿ ಕೆರೆಗಳಲ್ಲಿ ಒತ್ತುವರಿ ತೆರವಿಗೆ ಸಿದ್ಧತೆ ನಡೆಸಲಾಗಿದೆ.
ಗೌಡನಪಾಳ್ಯ ಹಾಗೂ ಕದಿರೇನಹಳ್ಳಿಯ ಸರ್ವೆ ನಂ.33ರಲ್ಲಿ 9.33 ಎಕರೆ, ಚಿಕ್ಕಲ್ಲಸಂದ್ರದ ಸ.ನಂ.10ರಲ್ಲಿ 6.33 ಎಕರೆ, ಇಟ್ಟಮಡು ಕೆರೆಯ ಮತ್ತೊಂದು ಭಾಗದ ಸ.ನಂ.7 ರಲ್ಲಿ 4 ಎಕರೆ, ಬಿಳೇಕಹಳ್ಳಿ ಕೆರೆಯ ಡಾಲರ್ಸ್ ಕಾಲೋನಿ ಬಳಿ 56 ಎಕರೆಯಲ್ಲಿ ಒತ್ತುವರಿಯಾಗಿದ್ದು, ಒಂದು ತಿಂಗಳ ನಂತರ ಕಾರ್ಯಾಚರಣೆ ಆರಂಭವಾಗಲಿದೆ. ಮತ್ತೊಂದು ಮೂಲಗಳ ಪ್ರಕಾರ ಇಲ್ಲಿ ಸುಮಾರು 100 ಎಕರೆ ಒತ್ತುವರಿಯಾಗಿದ್ದು, ಎಲ್ಲ ಸೇರಿದರೆ ಒಟ್ಟು ರು.10ಸಾವಿರ ಕೋಟಿ ಮೌಲ್ಯದ ಕೆರೆ ಜಾಗ ಒತ್ತುವರಿಯಾಗಿದೆ. ಇಲ್ಲಿ ಬೃಹತ್ ಕಟ್ಟಡಗಳಿದ್ದು, ಕಾರ್ಯಾಚರಣೆಯೂ ದೊಡ್ಡ ಪ್ರಮಾಣದಲ್ಲೇ ನಡೆಯಲಿದೆ.
ಕೆರೆ ಜಾಗದ ಒತ್ತುವರಿ ತೆರವು ಜೊತೆಗೆ ಭೂ ಒತ್ತುವರಿ ತೆರವು ತೆರವು ಕಾರ್ಯಾಚರಣೆಯೂ ನಡೆಯಲಿದೆ. ಆನೇಕಲ್ ತಾಲೂಕಿನಲ್ಲಿ ಬೃಹತ್ ಪ್ರಮಾಣದ ಒತ್ತುವರಿಯಾಗಿದ್ದು, ಗುರುವಾರ ಜಿಲ್ಲಾಡಳಿತದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಸಾರಕ್ಕಿಯಲ್ಲಿ ತೆರವು ಕಾರ್ಯಾಚರಣೆ ಅಂತಿಮಗೊಂಡಿದ್ದು, ಗುರುವಾರ ಬಿಡಿಎಂಗೆ ಜಾಗವನ್ನು ಹಸ್ತಾಂತರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


