ಕೇರಳ ಸಿಎಂಗೆ ಬಂದ ದಾರಿಗೆ ಸುಂಕವಿಲ್ಲ
ಬೆಂಗಳೂರು - ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ಭಾರಿ ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಕೇರಳದ ನಿಯೋಗ...

ಬೆಂಗಳೂರು: ಬೆಂಗಳೂರು - ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ಭಾರಿ ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಕೇರಳದ ನಿಯೋಗ ಬರಿಗೈಲಿ ವಾಪಸಾಗಿದೆ.
ನಿಷೇಧ ತೆರವು ನಿರ್ಧಾರವನ್ನ ಕರ್ನಾಟಕ ಸರ್ಕಾರ ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಬರುವುದಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿರುವುದರಿಂದ ಏನೂ ಮಾಡಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರೊಂದಿಗೆ ಸಂಚಾರ ನಿಷೇಧ ತೆರವಿಗೆ ಭಾರಿ ನಿರೀಕ್ಷೆಯೊಂದಿಗೆ 6ನೇ ಬಾರಿಗೆ ಬಂದಿದ್ದ ಕೇರಳ ನಿಯೋಗ ಹತಾಶೆಯೊಂದಿಗೆ ಹಿಂತಿರುಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ರಾತ್ರಿ ಸಂಚಾರ ನಿಷೇಧದಿಂದ ಕೇರಳದ 4 ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಹೊಡೆತ ಬಿದ್ದಿದೆ. ಆದ್ದರಿಂದ ನಿಷೇಧ ತೆರವಿಗೆ ಸಹಕಾರ ಕೊಡಿ ಎಂದು ಕೇರಳ ನಿಯೋಗ ಮನವಿ ಮಾಡಿತು. ತೆರವು ಸಾಧ್ಯವಾಗದಿದ್ದಲ್ಲಿ, ಕಡೆ ಪಕ್ಷ ರಾತ್ರಿ ಸಂಚಾರ ನಿಷೇಧ ಮಾಡಿ ನಿಗದಿಪಡಿಸಿರುವ ವೇಳೆಯನ್ನಾದರೂ ಬದಲಾಯಿಸಬೇಕು. ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ನಿಷೇಧ ಜಾರಿಯಲ್ಲಿದೆ. ಅದರ ಬದಲು, ರಾತ್ರಿ 10 ರಿಂದ 5ಕ್ಕೆ ಬದಲಾಯಿಸಬೇಕೆಂದು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮನವಿ ಮಾಡಿದರು.
ಅಲ್ಲದೇ, ಈಗಾಗಲೇ ಸಂಚರಿಸುತ್ತಿರುವ ಸರ್ಕಾರಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅರಣ್ಯ ಇಲಾಖೆಯ ವಾಹನಗಳ ಬೆಂಗಾವಲಿನಲ್ಲಿ ಗುಂಪಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಡಿ ಎಂದು ಉಮ್ಮನ್ ಚಾಂಡಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕೇರಳದ ಪ್ರಸ್ತಾವನೆಯನ್ನ ಕಾನೂನು ಮತ್ತು ಅರಣ್ಯ ಇಲಾಖೆ ಜತೆ ಚರ್ಚಿಸಿ ಪರಿಶೀಲಿಸಲಾಗುವುದು.
2 ತಿಂಗಳ ನಂತರ ಎಲ್ಲ ಸಾಧಕ ಬಾಧಕಗಳನ್ನ ಪರಿಶೀಲಿಸಿ ಕರ್ನಾಟಕ ಸರ್ಕಾರದ ನಿರ್ಧಾರವನ್ನ ಕೇರಳಕ್ಕೆ ತಿಳಿಸಲಾಗುವುದು. ನಂತರ ಎರಡೂ ಸರ್ಕಾರಗಳು ಸೇರಿ ಜಂಟಿ ಅಭಿಪ್ರಾಯವನ್ನ ಸುಪ್ರೀಂಕೋರ್ಟಿಗೆ ತಿಳಿಸಲಾಗುವುದು ಎಂದು ಸಿಎಂ ಹೇಳಿದರು. ಕೇರಳ ನಿಯೋಗದಲ್ಲಿ ಅರಣ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರು, ಸಂಸದರು ಹಾಗೂ ಶಾಸಕರು ಮತ್ತು ಉನ್ನತಾಧಿಕಾರಿಗಳು ಇದ್ದರು.
ಮುಖ್ಯಮಂತ್ರಿಗಳ ಮಾತುಕತೆ ನಡೆಯುವ ಸಂದರ್ಭದಲ್ಲೇ ಇದೇ ಹೆದ್ದಾರಿಯಲ್ಲಿ ಕೂರಂದಿ ಜಿಂಕೆಗೆ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದೆ. ರಾತ್ರಿ ಸಂಚಾರ ನಿಷೇಧ ತೆರವು ಮಾಡಿದಲ್ಲಿ ಇನ್ನಷ್ಟು ಪ್ರಾಣಿಗಳ ಬಲಿ ಗ್ಯಾರಂಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


