ಆಶೀರ್ವಾದಕ್ಕೆ ಬಂದವಳನ್ನೇ ಎಗರಿಸಿದ ಕಿಲಾಡಿ ಸ್ವಾಮಿ!
ಹೊಸದಾಗಿ ಮದುವೆಯಾಗಿ ಆಶೀರ್ವಾದಕ್ಕೆಂದು ಬಂದಿದ್ದ ದಂಪತಿಯನ್ನೇ ಯಾಮಾರಿಸಿ ಪತ್ನಿಯನ್ನು ಹಾರಿಸಿಕೊಂಡು ಹೋಗಿದ್ದಲ್ಲದೇ...

ಕೊಪ್ಪಳ: ಹೊಸದಾಗಿ ಮದುವೆಯಾಗಿ ಆಶೀರ್ವಾದಕ್ಕೆಂದು ಬಂದಿದ್ದ ದಂಪತಿಯನ್ನೇ ಯಾಮಾರಿಸಿ ಪತ್ನಿಯನ್ನು ಹಾರಿಸಿಕೊಂಡು ಹೋಗಿದ್ದಲ್ಲದೇ, ಗುಡ್ಡದಲ್ಲಿ ಅಡಗಿಸಿಟ್ಟು ಕೊನೆಗೆ ತಾನೇ ಮಂತ್ರದ ಶಕ್ತಿಯಿಂದ ಪತ್ತೆ ಮಾಡಿದ್ದೇನೆಂದಿದ್ದಾನೆ ಇಲ್ಲೊಬ್ಬ ಕಿಲಾಡಿ ಸ್ವಾಮಿ!
ಘಟನೆಯಿಂದ ಪತಿಯೂ ಕೈಬಿಟ್ಟು, ತವರ ಮನೆಯವರು ಹೊರಗಟ್ಟಿರುವುದರಿಂದ ದಿಕ್ಕು ಕಾಣದಾಗಿರುವ ಮಹಿಳೆ. `ನನಗೆ ಸ್ವಾಮಿಯನ್ನು ಹುಡುಕಿ ಕೊಟ್ಟು, ಆತನೊಂದಿಗೆ ಮದುವೆ ಮಾಡಿ' ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾಳೆ. ಮೋಸಕ್ಕೊಳಗಾದ ಮಹಿಳೆ ನನಗೆ ರಕ್ಷಣೆ ಮತ್ತು ನನಗಾಗಿರುವ ಅನ್ಯಾಯ ಸರಿ ಮಾಡಿ ಎಂದು ಅಂಗಲಾಚುತ್ತಿದ್ದಾಳೆ.
ಆಗಿದ್ದಾದರೂ ಏನು?
ಚಾಮಲಾಪುರ ಗ್ರಾಮದ ನಿರ್ಮಲಾ ಮದುವೆ ಹಿರೇಬೊಮ್ಮನಾಳದ ಯುವಕನೊಂದಿಗೆ ನೆರವೇರಿತ್ತು. ಮದುವೆಯಾದ ಮೇಲೆ ಮನೆ ದೇವರು ರ್ಯಾವಣಕಿ ಕರಿಬಸಪ್ಪ ದೇವರ ಆಶೀರ್ವಾದ ಪಡೆಯಲು ಹೋಗಿದ್ದರು. ಅಲ್ಲಿನ ಸ್ವಾಮಿ ಹನುಮಂತಪ್ಪ ಬಾಗಲಿ ನಿರ್ಮಲಾಳಿಗೆ ಆಶೀರ್ವಾದ ಮಾಡುವ ರೂಪದಲ್ಲಿ ಮೋಹಿಸಿ, ಮನವೊಲಿಸಿದ್ದಾನೆ. ಪಕ್ಕದಲ್ಲಿಯೇ ಇದ್ದ ಪತಿಗೆ ಇಲ್ಲದ ಸಬೂಬು ಹೇಳಿದ ನಿರ್ಮಲಾಳ ಜತೆ ಸ್ವಾಮಿ ಪರಾರಿಯಾಗಿದ್ದಾನೆ. ವಿವಿಧೆಡೆ ಸುತ್ತಾಡಿ, ವಸತಿಗೃಹದಲ್ಲಿದ್ದು, ಕೊಪ್ಪಳದ ಮಳೆಮಲ್ಲೇಶ್ವರದಲ್ಲಿ ನಿರ್ಮಲಾಳನ್ನು ಬಿಟ್ಟು ಸ್ವಾಮೀಜಿ ಮತ್ತೆ ತಮ್ಮ ರ್ಯಾವಣಕಿ ಮಠಕ್ಕೆ ಮರಳಿದ್ದಾನೆ. ಅಲ್ಲಿ ನಿರ್ಮಾಲಾಳ ಪತಿ ತಮ್ಮೂರವರನ್ನು ಕರೆದುಕೊಂಡು ಸ್ವಾಮೀಜಿ ಬಳಿ ಬಂದಿದ್ದಾರೆ.
ಆಗ ನಿಮ್ಮ ನಿರ್ಮಲಾ ಕೊಪ್ಪಳ ಬಳಿ ಮಳೆಮಲ್ಲೇಶ್ವರ ದೇವಸ್ಥಾನದ ಗುಡ್ಡದಲ್ಲಿದ್ದಾಳೆ ಎನ್ನುವುದು ನನ್ನ ದಿವ್ಯದೃಷ್ಟಿಗೆ ಕಾಣುತ್ತದೆ ಎಂದು ಹೇಳಿದ್ದಾನೆ. ಸಂಬಂಧಿಕರು ಹುಡುಕಲು ಬಂದಾಗ ನಿರ್ಮಲಾ ಇರುವುದು ಗೊತ್ತಾಗಿದೆ. ಆದರೆ, ಆಕೆಯನ್ನು ನಾಲ್ಕು ತದಕಿ ವಿಚಾರಣೆ ಮಾಡಿದಾಗ ಎಲ್ಲ ಬಾಯಿ ಬಿಟ್ಟಿದ್ದಾಳೆ. ಇದರಿಂದ ಬೇಸತ್ತ ಪತಿ ದೂರವಾಗಿದ್ದಾನೆ. ಇಂಥ ಹೆಂಡತಿ ನನಗೆ ಬೇಡವೇ ಬೇಡ ಎಂದಿದ್ದಾನೆ. ಇನ್ನು ನಿರ್ಮಲಾಳ ತವರು ಮನೆ ಕಡೆಯವರು ಇಂಥವಳು ನಮ್ಮ ಮನೆಗೂ ಬರುವುದು ಬೇಡ ಎಂದು ಹೇಳಿದ್ದಾರೆ. ಮಾಡಿದ ತಪ್ಪಿಗೆ ಆಗಿರುವ ಅನ್ಯಾಯದಿಂದ ದಿಕ್ಕು ಕಾಣದಾಗಿರುವ ನಿರ್ಮಲಾ ಈಗ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾಳೆ. ನನಗೆ ನ್ಯಾಯ ಕೊಡಿಸಿ, ನನಗೆ ಮೋಸ ಮಾಡಿದ ಸ್ವಾಮೀಜಿ ಜೊತೆಗೆ ಮದುವೆ ಮಾಡಿಸಿ ಎಂದು ಆಗ್ರಹಿಸಿದ್ದಾಳೆ. ಆದರೆ, ಸ್ವಾಮೀಜಿ ತಲೆಮರೆಸಿಕೊಂಡಿದ್ದಾನೆ. ಮನವಿ ಸ್ವೀಕರಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


