ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ
ನಿವೇಶನ ಹಂಚಿಕೆ ವಿಷಯದಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ತಮ್ಮನೇ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಾಚರಕನಹಳ್ಳಿಯಲ್ಲಿ ಬುಧವಾರ ಹಾಡಹಗಲೇ ನಡೆದಿದೆ...

ಬೆಂಗಳೂರು: ನಿವೇಶನ ಹಂಚಿಕೆ ವಿಷಯದಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ತಮ್ಮನೇ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಾಚರಕನಹಳ್ಳಿಯಲ್ಲಿ ಬುಧವಾರ ಹಾಡಹಗಲೇ ನಡೆದಿದೆ.
ಘಟನೆ ನಡೆದ ಕೇವಲ ಒಂದು ಗಂಟೆ ಅವಧಿಯಲ್ಲಿ ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಕಾಚರಕನಹಳ್ಳಿಯ 9ನೇ ಕ್ರಾಸ್ ನಿವಾಸಿ, ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಮಂಜ ಅಲಿಯಾಸ್ ಕೋಳಿ ಮಂಜ(35) ಕೊಲೆಯಾದವ. ಆರೋಪಿ ಮರಳು ಲಾರಿ ಮಾಲೀಕ ಮಧು (27) ಬಂಧಿತ. ಮತ್ತಿಬ್ಬರು ಆರೋಪಿಗಳಾದ ಕಿರಣ್ ಹಾಗೂ ನವೀನ್ ಪರಾರಿಯಾಗಿದ್ದು, ಶೋಧ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಥಿಕಾರಿಗಳು, ಮಂಜ ಮತ್ತು ಮಧು ಸಹೋದರರು. ಸುಮಾರು 5 ಸಾವಿರ ಚದರ ಅಡಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಮಾಡಲಾಗಿತ್ತು. ಆದರೆ, ಇದರಿಂದ ಸಮಾಧಾನವಾಗದ ಮಧು ಹೆಚ್ಚು ನೀಡುವಂತೆ ಒತ್ತಾಯಿಸುತ್ತಿದ. ಆದರೆ, ಪೋಷಕರು ಅದಕ್ಕೆ ನಿರಾಕರಿಸಿದ್ದರಿಂದ ಆಸ್ತಿ ಹಂಚಿಕೆ ಕುರಿತು ನ್ಯಾಯಾಲಯದಲ್ಲೆ ಸ್ಟೇ ತಂದಿದ್ದ. ಈ ವಿಚಾರವಾಗಿ ಅವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸಾಕಷ್ಟು ಬಾರಿ ಕುಟುಂಬದ ಹಿರಿಯ ಸದಸ್ಯರು ಇಬ್ಬರ ನಡುವೆ ಹಲವು ಬಾರಿ ಸಂಧಾನ ನಡೆಸಿದ್ದರೂ ಪ್ರಯೋಜನ ವಾಗಿರಲಿಲ್ಲ. ಹೀಗಿರುವಾಗ ಬುಧವಾರ ಬೆಳಗ್ಗೆ ಮಧು ತನ್ನ ಅಣ್ಣ ಮಂಜನಿಗೆ ಕರೆ ಮಾಡಿ ಆಸ್ತಿ ವಿಷಯ ಮಾತನಾಡಲು ಭೇಟಿ ಮಾಡುವಂತೆ ತಿಳಿಸಿದ್ದ.
ಆರೋಪಿ ಮನೆಯಿಂದ ಸುಮಾರು 100 ಮೀ. ದೂರದಲ್ಲಿರುವ ಗಣೇಶನ ಬಳಿ ಇರುವ ಟೀ ಅಂಗಡಿ ಬಳಿ ಬರುವಂತೆ ತನ್ನ ಅಣ್ಣನಿಗೆ ಹೇಳಿದ್ದ. ತಮ್ಮನ ಸೂಚನೆಯಂತೆ ಮಂಜ ಅಂಗಡಿ ಬಳಿ ಹೋದಾಗ ಏಕಾಏಕಿ ಜಗಳ ತೆಗೆದ ಮಧು ಮಾರಕಾಸ್ತ್ರಗಳಿಂದ ಅಣ್ಣ ಮಂಜನ ತಲೆ, ಹೊಟ್ಟೆ, ಕೈ-ಕಾಲಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಕುಸಿದುಬಿದ್ದ ಗಾಯಾಳನ್ನು(ಮಂಜ) ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ಆದರೆ, ಮಾರ್ಗಮಧ್ಯದಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.
.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಸಹೋದರರ ಕಲಹದಿಂದ ಬೇಸತ್ತ ಪೋಷಕರು ಅನಾರೋಗ್ಯದಿಂದ ಬಳಲುತಿತದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


