ಮೇಲ್ಮನೆಯಲ್ಲಿ ಗಣಿ ಗದ್ದಲ
ಗಣಿಗಾರಿಕೆ ವಿಚಾರದಲ್ಲಿ ರಾಜ್ಯಕ್ಕೆ ಅಪಮಾನವಾಗಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ಪಟ್ಟು ಹಿಡಿದು ಭಾರೀ ಗದ್ದಲ, ಕೋಲಾಹಲ ಎಬ್ಬಿಸಿತು. ಇದಕ್ಕೆ ಅವಕಾಶ ಸಿಗದಿದ್ದಾಗ ಸಭಾತ್ಯಾಗ ಮಾಡಿ ಪ್ರತಿಭಟಿಸಿತು...

ವಿಧಾನಪರಿಷತ್: ಗಣಿಗಾರಿಕೆ ವಿಚಾರದಲ್ಲಿ ರಾಜ್ಯಕ್ಕೆ ಅಪಮಾನವಾಗಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ಪಟ್ಟು ಹಿಡಿದು ಭಾರೀ ಗದ್ದಲ, ಕೋಲಾಹಲ ಎಬ್ಬಿಸಿತು. ಇದಕ್ಕೆ ಅವಕಾಶ ಸಿಗದಿದ್ದಾಗ ಸಭಾತ್ಯಾಗ ಮಾಡಿ ಪ್ರತಿಭಟಿಸಿತು.
ಪ್ರತಿಪಕ್ಷ ನಾಯಕ ಈಶ್ವರಪ್ಪ, ಸರ್ಕಾರಕ್ಕೆ ಮರ್ಯಾದೆ ಇಲ್ಲ. ಜವಾಬ್ದಾರಿ ಇಲ್ಲ ಎಂದೆಲ್ಲಾ ನಿಂದಿಸಿದರು. ಇದಾಗ ಕೆಲಹೊತ್ತಿನ ನಂತರ ಬಿಜೆಪಿ ಪ್ರತಿಭಟನೆಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸದನದಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿ ತಿರುಗೇಟು ನೀಡಿದರು. ಈಶ್ವರಪ್ಪ ನಿಂದಿಸಿದ್ದ ರೀತಿಯಲ್ಲೇ ಬಿಜೆಪಿಗೆ ಮರ್ಯಾದೆ ಇಲ್ಲ. ಜವಾಬ್ದಾರಿ ಇಲ್ಲ ಎಂದು ಕೂಗಾಡಿದರು.
ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಈಶ್ವರಪ್ಪ ಗಣಿ ಗುತ್ತಿಗೆಗಳ ಎಲೆಕ್ಟ್ರಾನಿಕ್ ಹರಾಜಿನಲ್ಲಿ `ಸಿ' ವರ್ಗದ ಗಣಿ ಮಾಲೀಕರಿಗೆ ಅವಕಾಶ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿದೆ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಸಿ ವರ್ಗದ ಗಣಿಗಳನ್ನು ಹರಾಜು ಮಾಡಿಲ್ಲ. ಗಣಿ ನಿಕ್ಷೇಪ ಅಂದಾಜು ಮಾಡಿಲ್ಲ ಎಂದು ಛೀಮಾರಿ ಹಾಕಿದೆ. ಇದು ರಾಜ್ಯಕ್ಕೆ ಅಪಮಾನವಾಗಿದೆ. ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು. ನಿಲುವಳಿ ಸೂಚನೆ ಮಂಡಿಸಲು ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.
ಇದನ್ನು ಒಪ್ಪದ ಸಭಾನಾಯಕ ಎಸ್.ಆರ್.ಪಾಟೀಲ್, ನಿಲುವಳಿ ಸೂಚನೆ ಮಂಡಿಸಬೇಕಿದ್ದರೆ ಅದು ಮಹತ್ವದ ವಿಚಾರ ಆಗಿರಬೇಕು. ಆದರೆ ಈಶ್ವರಪ್ಪ ಪ್ರಸ್ತಾಪಿಸುತ್ತಿರುವುದು ಸುಪ್ರೀಂ ಕೋರ್ಟ್‍ನಲ್ಲಿರುವ ವಿಚಾರ. ಆದ್ದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದರು.
ಬಿಜೆಪಿ ಸಭಾತ್ಯಾಗ: ನಂತರ ಈಶ್ವರಪ್ಪ ಮಾತನಾಡಿ, ರಾಜ್ಯದ 15 ಗಣಿಗಳನ್ನು ಹರಾಜು ಮಾಡಬೇಕಿದ್ದರೂ ಮಾಡಿಲ್ಲ. ಆ ನಿಕ್ಷೇಪಗಳಲ್ಲಿ ಎಷ್ಟೆಲ್ಲಾ ಅದಿರು ಇದೆ ಎಂದು ಅಂದಾಜಿಸಿಲ್ಲ ಎಂದು ತರಾಟೆ ತೆಗೆದುಕೊಂಡಿದೆ. ಇದಕ್ಕಿಂತಲೂ ಮಹತ್ವದ ವಿಚಾರ ಬೇಕೆ. ಇದಕ್ಕೆ ಅವಕಾಶ ನೀಡಲಿಲ್ಲ ಎಂದರೆ ಈ ಸರ್ಕಾರಕ್ಕೆ ಜವಾಬ್ದಾರಿ ಇಲ್ಲ ನಿಂದಿಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಎಸ್.ಆರ್.ಪಾಟೀಲ್, ನಿಮಗೆ ಗಣಿಗಾರಿಕೆ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಅಷ್ಟು ಅಕ್ರಮಗಳು ನಿಮ್ಮ ಅವಧಿಯಲ್ಲಿ ಆಗಿವೆ ಎಂದು ಕೂಗಾಡಿದರು.
ಹಾಗೆಯೇ ಸಚಿವ ರಮಾನಾಥ ರೈ, ಸದಸ್ಯರಾದ ಉಗ್ರಪ್ಪ, ವೀರಣ್ಣ ಮತ್ತಿಕಟ್ಟೆ, ರೇವಣ್ಣ, ಬೋಸರಾಜು, ವೆಂಕಟೇಶ್ ಆಡಳಿತ ಪಕ್ಷದ ವಿರುದ್ಧ ಎರಗಿದರು. ಈ ಬಗ್ಗೆ ಈಶ್ವರಪ್ಪ ಈಗಾಗಲೇ ಚರ್ಚೆಸಿದ್ದಾರೆ. ಆದ್ದರಿಂದ ಮತ್ತೆ ನಿಲುವಳಿ ಸೂಚನೆ ಮಂಡಿಸುವುದಕ್ಕೆ ಅವಕಾಶವಿಲ್ಲ ಎಂದು ರೇಗಿದರು. ಇದನ್ನೇ ಆರ್.ವಿ.ವೆಂಕಟೇಶ್ ವಾದಿಸಿದರು.
ಆಗ ಸಿಟ್ಟಿಗೆದ್ದ ಈಶ್ವರಪ್ಪ, `ನಿಮ್ಮಿಂದ ಹೇಳಿಸಿಕೊಳ್ಳಬೇಕಿಲ್ಲ. ಪ್ರತಿಪಕ್ಷ ನಾಯಕನಾದ ನನಗೆ ಜವಾಬ್ದಾರಿ ಇವೆ. ಕೇಳುತ್ತಿದ್ದೇನೆ' ಎಂದು ತಿರುಗಿಸಿದರು. ಅಷ್ಟೇ ಅಲ್ಲ, ಗಣಿ ಕಂಪನಿಗಳ ನವೀಕರಣ ಮಾಡುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಸರ್ಕಾರ ಕೆಲವು ಗಣಿ ಕಂಪನಿಗಳನ್ನು ನವೀಕರಿಸಿ ಕ್ರಮ ಎಸಗಿದೆ. ಈ ಬಗ್ಗೆ ಚರ್ಚೆ ಆಗಲೇಬೇಕು ಎಂದು ಚೀರಾಡಿದರು. ಅದೇರೀತಿ ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ದ ಕೂಗಾಡಲಾರಂಭಿಸಿದರು. ಇದರಿಂದ ಗದ್ದಲ, ಕೋಲಾಹಲ ಹೆಚ್ಚಾಗಿ ಸಭಾಪತಿ ನಿಯಂತ್ರಿಸುವುದು ಕಷ್ಟವಾಯಿತು. ಆಗ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


