ಟ್ವಿಟರ್ ಮೂಲಕ ನೇರವಾಗಿ ಆಯುಕ್ತರಿಗೆ ದೂರು

ಬೆಂಗಳೂರು: ದೂರುಗಳನ್ನು ಸ್ವೀಕರಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಅವರು ತೆರೆದಿದ್ದ ಟ್ವಿಟರ್ ಖಾತೆಗೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಸದ್ಯ 12 ಸಾವಿರ ಮಂದಿ ಖಾತೆಯ ಹಿಂಬಾಲಕರಾಗಿದ್ದಾರೆ.
ನಗರದ ಸಮಸ್ಯೆಗಳ ಕುರಿತು ಸಾಕಷ್ಟು ಮಂದಿ ಟ್ವೀಟ್ ಮಾಡುತ್ತಿದ್ದು, ಇದರಿಂದ ಉತ್ತೇಜಿತರಾಗಿರುವ ಎಂ.ಎನ್ ರೆಡ್ಡಿ ಅವರು ತಮ್ಮ ಟ್ವಿಟರ್ ಖಾತೆಯನ್ನು ಅಧಿಕೃತಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದಾರೆ. ಟ್ವಿಟರ್ ಮೂಲಕ ಬರುತ್ತಿರುವ ದೂರುಗಳನ್ನು ಸಂಗ್ರಹಿಸಿಡಲು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತರ ಟ್ವಿಟರ್ ನಿರ್ವಹಣೆ ಹೆಸರಿನಲ್ಲಿ ಸ್ಪ್ರೆಡ್ ಶೀಟ್ ಆರಂಭಿಸಿದ್ದಾರೆ.
ಈ ಸ್ಪ್ರೆಡ್ ಶೀಟ್‌ನಲ್ಲಿ ದಿನಾಂಕ, ದೂರುದಾರರ ಹೆಸರು, ಘಟನೆ ಬಗೆಗಿನ ಚಿಕ್ಕ ಸಾರಾಂಶ, ದೂರು ಪರಿಶೀಲಿಸಲು ಕಳುಹಿಸಿದ ಅಧಿಕಾರಿ ಹಾಗೂ ಈ ಕುರಿತು ಕೈಗೊಂಡ ಕ್ರಮಗಳ ವಿವರ ಸಿಗಲಿದೆ.
ಈ ಟ್ವಿಟರ್‌ನಲ್ಲಿ ಬಂದ ದೂರನ್ನು ಆಧರಿಸಿ ತನಿಖೆಗಿಳಿದ ಸಿಸಿಬಿ ಪೊಲೀಸರು ಏಳು ದಿನಗಳಲ್ಲಿ ಆರು ಪ್ರಕರಣಗಳನ್ನು ಬಗೆಹರಿಸಿದ್ದಾರೆ. ಸುಳ್ಳು ಪ್ರಮಾಣಪತ್ರ ನೀಡುವ ಏಳು ಕ್ರಿಮಿನಲ್ ಎಂಪ್ಲಾಯ್‌ಮೆಂಟ್ ಏಜೆನ್ಸಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಮೂಲಕ 169 ಸುಳ್ಳು ಸಂಸ್ಥೆಗಳ ಬಣ್ಣ ಬಯಲಾಗಿದೆ. ಇದೇ ಅಲ್ಲದೆ ಟ್ವಿಟರ್ ದೂರನ್ನು ಆಧರಿಸಿ ಎರಡು ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಲಾಗಿದೆ.
ಎಂ.ಎನ್ ರೆಡ್ಡಿ ಅವರು ತಮ್ಮ ಖಾತೆ ತೆರದ ನಂತರ ಆ ಖಾತೆಯೊಂದಿಗೆ ಸಂವಹಿಸುವ ಬಹುತೇಕ ಮಂದಿಯ ಅಹವಾಲುಗಳನ್ನು ಸಂಬಂಧಪಟ್ಟ ಅಧಿಕಾರಿ ಮತ್ತು ಠಾಣೆಗಳಿಗೆ ಪ್ರತಿನಿತ್ಯ ವರ್ಗಾಯಿಸುತ್ತಿದ್ದರು.
ನಗರದ ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲಾ ಹೈಟೆಕ್ ಆಗಿದ್ದಾರೆ. ಸಾರ್ವಜನಿಕರ ಜೊತೆ ನೇರ ಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದ್ದು, ನಗರ ಪೊಲೀಸ್ ಕಮಿಷನರೇಟ್‌ನ ಡಿಸಿಪಿ ಹಾಗೂ ಈ ಮಟ್ಟದಿಂದ ಮೇಲ್ಪಟ್ಟ ಹದಿನಾರು ಮಂದಿ ಅಧಿಕಾರಿಗಳು ಒಂದೇ ದಿನ ತಮ್ಮ ಟ್ವಿಟರ್ ಖಾತೆ ತೆರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


