'ಪಂದ್ಯಾವಳಿಯೊಂದಕ್ಕೆ ಹೇಗೆ ಅಡ್ಡಿಪಡಿಸಲು ಸಾಧ್ಯ?': BCCI ನಿರ್ಧಾರಕ್ಕೆ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಕಿಡಿ
'ತಜ್ಞರಲ್ಲದವರು' ಇರುವುದರಿಂದ ಬಿಸಿಸಿಐನ ಸದ್ಯದ ವ್ಯವಸ್ಥೆಯು ಸ್ವಲ್ಪ ಓರೆಯಾಗಿದೆ. ಇದು ವೇಳಾಪಟ್ಟಿಯಲ್ಲಿ ಈ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ರಣಜಿ ಟ್ರೋಫಿ ವೇಳಾಪಟ್ಟಿಯನ್ನು 'ಇಲ್ಲಿ ಮತ್ತು ಅಲ್ಲಿ' ತಳ್ಳಿದ್ದಕ್ಕಾಗಿ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎರಡು ದೇಶೀಯ ವೈಟ್-ಬಾಲ್ ಪಂದ್ಯಾವಳಿಗಳ ನಡುವೆ ಸಿಲುಕಿರುವ ಹೊಸ ರಣಜಿ ಟ್ರೋಫಿ ವೇಳಾಪಟ್ಟಿಯನ್ನು ಗವಾಸ್ಕರ್ ಟೀಕಿಸಿದ್ದಾರೆ ಮತ್ತು ಬಿಸಿಸಿಐ ಇನ್ನು ಮುಂದೆ ತನ್ನ ಪ್ರಮುಖ ರೆಡ್-ಬಾಲ್ ಪಂದ್ಯಾವಳಿಯನ್ನು ಪ್ರಮುಖ ಎಂದು ಪರಿಗಣಿಸುವುದಿಲ್ಲ ಎಂದು ಆರೋಪಿಸಿದ್ದಾರೆ. ಸದ್ಯ ಬಿಸಿಸಿಐ ವೇಳಾಪಟ್ಟಿ ಪ್ರಕಾರ, ಈ ಆವೃತ್ತಿಯಲ್ಲಿ ರಣಜಿ ಟ್ರೋಫಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಗಿಂತ ಮೊದಲು ಮತ್ತು ವಿಜಯ್ ಹಜಾರೆ ಟ್ರೋಫಿ ಬಳಿಕ ಎರಡನೇ ಹಂತದಲ್ಲಿ ರಣಜಿ ಟ್ರೋಫಿಯನ್ನು ಆಡಲಾಗುತ್ತದೆ.
'ವೈಟ್ ಬಾಲ್ ಪಂದ್ಯಾವಳಿಗಾಗಿ ಮತ್ತೊಂದು ಪಂದ್ಯಾವಳಿಯನ್ನು ಹೇಗೆ ತಡೆಹಿಡಿಯಲು ಸಾಧ್ಯ?' ಎಂದು ಗವಾಸ್ಕರ್ 'ಸ್ಪೋರ್ಟ್‌ಸ್ಟಾರ್'ಗಾಗಿ ಬರೆದ ತಮ್ಮ ಅಂಕಣದಲ್ಲಿ ಪ್ರಶ್ನಿಸಿದ್ದಾರೆ.
ಟಿ20 ಮಾದರಿಯಲ್ಲಿ ನಡೆಯುವ ಎಸ್‌ಎಂಎಟಿ (SMAT) ಅನ್ನು ದೇಶೀಯ ಕ್ರಿಕೆಟ್ ಆವೃತ್ತಿಯ ಆರಂಭದಲ್ಲಿ, ಅಂದರೆ ಸೆಪ್ಟೆಂಬರ್‌ನಲ್ಲಿ ಆಡಿಸಬಹುದು. ಆದರೆ, ಐಪಿಎಲ್‌ಗೆ ಸಾಧ್ಯವಾದಷ್ಟು ಹತ್ತಿರದ ಅವಧಿಯಲ್ಲಿಯೇ ಇದನ್ನು ನಡೆಸಲು ಬಿಸಿಸಿಐ ಆದ್ಯತೆ ನೀಡುತ್ತದೆ ಎಂದು ಅವರು ಪ್ರತಿಪಾದಿಸಿದರು.
'...ಇದರಿಂದ ಆಟದ ಲಯ ಮತ್ತು ವೇಗಕ್ಕೆ ಭಂಗ ಬರುತ್ತದೆ. ರಣಜಿ ಟ್ರೋಫಿಯ ಮಾದರಿಯಲ್ಲೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನೂ ಏಕೆ ನಡೆಸಬಾರದು? ಅಂದರೆ, ಕ್ವಾರ್ಟರ್-ಫೈನಲ್ ಹಂತದವರೆಗೆ ಪಂದ್ಯಗಳನ್ನು ಆಡಿ, ನಂತರ ಕೆಲವು ವಾರಗಳ ವಿರಾಮ ಪಡೆದು, ಆ ಬಳಿಕ ಸೆಮಿ-ಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಆಡಿಸಬಹುದಲ್ಲವೇ? ಆದರೆ ಹಾಗೆ ಮಾಡುವುದಿಲ್ಲ, ಏಕೆಂದರೆ ಈ ಟೂರ್ನಿ ಮುಗಿದ ತಕ್ಷಣವೇ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತದೆ' ಎಂದು ಗವಾಸ್ಕರ್ ಬರೆದಿದ್ದಾರೆ.
'ಒಂದು ವೇಳೆ ಹರಾಜು ಪ್ರಕ್ರಿಯೆ ಒಂದೆರಡು ತಿಂಗಳು ತಡವಾಗಿ ನಡೆದರೂ ಸಹ, ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಯಾರೂ ಮರೆಯುವುದಿಲ್ಲ' ಎಂದು ಅವರು ಇದೇ ವೇಳೆ ಹೇಳಿದರು.
'ತಜ್ಞರಲ್ಲದವರು' ಇರುವುದರಿಂದ ಬಿಸಿಸಿಐನ ಸದ್ಯದ ವ್ಯವಸ್ಥೆಯು ಸ್ವಲ್ಪ ಓರೆಯಾಗಿದೆ. ಇದು ವೇಳಾಪಟ್ಟಿಯಲ್ಲಿ ಈ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
'ಹಳೆಯ ಬಿಸಿಸಿಐನಲ್ಲಿ, ತಾಂತ್ರಿಕ ಸಮಿತಿ ಮತ್ತು ಫಿಕ್ಸ್ಚರ್ ಸಮಿತಿಯೂ ಇತ್ತು. ಅನುಭವಿ ಮಾಜಿ ಆಟಗಾರರು, ಅಂಪೈರ್‌ಗಳು ಮತ್ತು ಆಡಳಿತಾಧಿಕಾರಿಗಳು ಈ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ಕ್ರಿಕೆಟ್ ಸುಗಮವಾಗಿ ನಡೆಯುವಂತೆ ನೋಡಿಕೊಂಡರು. ಅಂತಹ ಅನುಭವ ಮತ್ತು ಪರಿಣತಿಯನ್ನು ಬಳಸಿಕೊಂಡು ಇದೇ ರೀತಿಯದ್ದನ್ನು ಮಾಡಬೇಕಾಗಿದೆ. ಭಾರತೀಯ ಕ್ರಿಕೆಟ್ ಪರಿಸರ ವ್ಯವಸ್ಥೆಯು ಸದ್ಯ ಸ್ವಲ್ಪ ಓರೆಯಾಗಿದೆ ಮತ್ತು ಇದು ಅದನ್ನು ಮರು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


