145 ಕಿಮೀ ವೇಗ... 6.5 ಅಡಿ ಎತ್ತರ! 'ODI ವಿಶ್ವಕಪ್ ಹತ್ತಿರ ಬರುತ್ತಿದೆ, ಅವನಿಗೆ ಅವಕಾಶ ನೀಡಿ': ವೇಗಿ ಪರ ಆಕಾಶ್ ಚೋಪ್ರಾ ಬ್ಯಾಟಿಂಗ್
2027ರ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಕೆಲವೇ ತಿಂಗಳ ಹಿಂದೆ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಗುರ್ನೂರ್, ಪಂಜಾಬ್‌ನಿಂದ ಹೊರಹೊಮ್ಮಿರುವ ಭರವಸೆಯ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ವೇಗಿ ಗುರ್ನೂರ್ ಬ್ರಾರ್‌ಗೆ ಎಲ್ಲಾ ಮಾದರಿ ಹಾಗೂ ವಿಭಿನ್ನ ಪರಿಸ್ಥಿತಿಗಳಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಬೇಕು ಎಂದು ಭಾರತ ತಂಡದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.
2027ರ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಕೆಲವೇ ತಿಂಗಳ ಹಿಂದೆ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಗುರ್ನೂರ್, ಪಂಜಾಬ್‌ನಿಂದ ಹೊರಹೊಮ್ಮಿರುವ ಭರವಸೆಯ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.
6 ಅಡಿ 5 ಇಂಚು ಎತ್ತರ ಹೊಂದಿರುವ ಗುರ್ನೂರ್ ಬ್ರಾರ್, ಸುಲಭವಾಗಿ ಗಂಟೆಗೆ ಸುಮಾರು 145 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಜತೆಗೆ ಪಿಚ್‌ನಿಂದ ಉತ್ತಮ ಬೌನ್ಸ್ ಕೂಡ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
2022ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಗುರ್ನೂರ್, 2024-25ರ ಋತುವಿನಲ್ಲಿ ತಮ್ಮ ಸಾಮರ್ಥ್ಯವನ್ನು ದೊಡ್ಡ ಮಟ್ಟದಲ್ಲಿ ತೋರಿಸಿದ್ದರು. ಏಳು ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. ಬಿಹಾರ ವಿರುದ್ಧದ ಪಂದ್ಯದಲ್ಲಿ 14 ರನ್ ನೀಡಿ 5 ವಿಕೆಟ್ ಪಡೆದದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.
ಭಾರತ ಪರ ಈವರೆಗೆ ಆರು ಏಕದಿನ ಪಂದ್ಯಗಳನ್ನು ಆಡಿರುವ ಗುರ್ನೂರ್ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಳ ಭಾರತ ತಂಡದಲ್ಲೂ ಅವರು ಸ್ಥಾನ ಪಡೆದಿದ್ದರು. ಆದರೆ ಆ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
‘ಎಲ್ಲಾ ಫಾರ್ಮೆಟ್‌ಗಳಲ್ಲೂ ಪರೀಕ್ಷಿಸಿ’
ಗುರ್ನೂರ್ ಅವರನ್ನು ರೆಡ್‌ಬಾಲ್ ಕ್ರಿಕೆಟ್‌ಗೆ ಮಾತ್ರ ಸೀಮಿತಗೊಳಿಸಬೇಕೇ ಅಥವಾ ಎಲ್ಲಾ ಮಾದರಿಗಳಲ್ಲೂ ವೇಗವಾಗಿ ಅವಕಾಶ ನೀಡಬೇಕೇ ಎಂದು ಅಭಿಮಾನಿಯೊಬ್ಬರು ಆಕಾಶ್ ಚೋಪ್ರಾ ಅವರಿಗೆ ಪ್ರಶ್ನಿಸಿದ್ದರು.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ, ಗುರ್ನೂರ್‌ಗೆ ವಿವಿಧ ಪರಿಸ್ಥಿತಿಗಳಲ್ಲಿ ನಿರಂತರವಾಗಿ ಅವಕಾಶ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
‘ಇದು ಒಳ್ಳೆಯ ಆಲೋಚನೆ. ಆದರೆ ಇದು ಸರಿಯಾದ ಆಲೋಚನೆಯೇ ಎಂಬ ಪ್ರಶ್ನೆಯೂ ಇದೆ. ಟೆಸ್ಟ್ ಕ್ರಿಕೆಟ್ ಆಗಾಗ ನಡೆಯುವುದಿಲ್ಲ. ಆಗಸ್ಟ್‌ನಲ್ಲಿ ಒಂದು ಸರಣಿ ಮುಗಿದಿದೆ. ಬಳಿಕ ನವೆಂಬರ್‌ನಲ್ಲಿ ಟೆಸ್ಟ್ ಸರಣಿ ನಡೆಯಲಿದೆ. ಅದಾದ ನಂತರ ಮುಂದಿನ ಟೆಸ್ಟ್ ಸರಣಿ ಜನವರಿ ಅಂತ್ಯದಲ್ಲಿ ನಡೆಯಲಿದೆ’ ಎಂದು ಚೋಪ್ರಾ ಹೇಳಿದ್ದಾರೆ.
‘ಟೆಸ್ಟ್ ಪಂದ್ಯಗಳು ಹೀಗೆ ವಿರಳವಾಗಿ ನಡೆಯುತ್ತಿರುವಾಗ, ಅವರನ್ನು ಕೇವಲ ಈ ಒಂದು ಮಾದರಿಯಲ್ಲಿ ಮಾತ್ರ ಆಡಿಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗುತ್ತದೆ. ಇದೇ ವೇಳೆ ಏಕದಿನ ವಿಶ್ವಕಪ್ ಕೂಡ ಹತ್ತಿರ ಬರುತ್ತಿದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು’ ಎಂದಿದ್ದಾರೆ.
‘ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ನಮಗೆ ವೇಗ ಮತ್ತು ಬೌನ್ಸ್ ಅಗತ್ಯವಾಗಬಹುದು. ಗುರ್ನೂರ್ ಬ್ರಾರ್ ಈಗಷ್ಟೇ ತಮ್ಮ ವೃತ್ತಿಜೀವನ ಆರಂಭಿಸಿರುವ ಬೌಲರ್’ ಎಂದು ಚೋಪ್ರಾ ಹೇಳಿದ್ದಾರೆ.
‘ವಿಶ್ವಕಪ್ ವೇಳೆಗೆ ಸಿದ್ಧನಾಗಿರಬೇಕು’
‘ಯಾರಾದರೂ ಈಗಷ್ಟೇ ಆರಂಭಿಸಿದ್ದರೆ, ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಲು ನೀವು ಬಯಸುತ್ತೀರಿ. ವಿವಿಧ ಪರಿಸ್ಥಿತಿಗಳು ಮತ್ತು ಸಂದರ್ಭಗಳಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ, ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಏಕದಿನ ಹಾಗೂ ಟಿ20 ಪಂದ್ಯಗಳಲ್ಲೂ ಅವರನ್ನು ಆಡಿಸಬೇಕು’ ಎಂದು ಚೋಪ್ರಾ ಸಲಹೆ ನೀಡಿದ್ದಾರೆ.
‘ವಿಶ್ವಕಪ್ ಬರುವ ವೇಳೆಗೆ ನಮ್ಮ ಆಟಗಾರ ಸಂಪೂರ್ಣವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಂತಹ ಸಣ್ಣ-ಸಣ್ಣ ಪರೀಕ್ಷೆಗಳನ್ನು ನಿರಂತರವಾಗಿ ನಡೆಸುತ್ತಿರಬೇಕು’ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



