'ಇಬ್ಬರೂ ಸರಿಯಾಗಿರಲು ಸಾಧ್ಯವೇ?': ಯುವ ಆಟಗಾರರು ಪರಿಸ್ಥಿತಿ ನಿಭಾಯಿಸುವ ರೀತಿ ಬದಲಾಗಿದೆ ಎಂದ ಆಕಾಶ್ ಚೋಪ್ರಾ
'ಹರ್ಷ ಭೋಗ್ಲೆ ಕ್ರಿಕೆಟ್‌ನ ಸಾಂಪ್ರದಾಯಿಕ ದೃಷ್ಟಿಕೋನವನ್ನು ಹೊಂದಿರುವವರು. ಅಂತಹ ಉದ್ವಿಗ್ನ ಕ್ಷಣದಲ್ಲಿ ಅಲ್ಲಿಂದ ಸುಮ್ಮನೆ ಹೊರನಡೆಯುವುದೇ ಸರಿಯಾದ ಕ್ರಮ ಎಂದು ಅವರು ಭಾವಿಸಿದ್ದರು. ಆದರೆ ಜೈಸ್ವಾಲ್ ಪ್ರತಿಕ್ರಿಯಿಸುವ ನಿರ್ಧಾರವನ್ನು ತೆಗೆದುಕೊಂಡರು' ಎಂದರು.

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಯಶಸ್ವಿ ಜೈಸ್ವಾಲ್-ಅಸಿತಾ ಫರ್ನಾಂಡೊ ಮೈದಾನದಲ್ಲಿಯೇ ಮಾತಿನ ಚಕಮಕಿಯಲ್ಲಿ ತೊಡಗಿಕೊಂಡ ಘಟನೆ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ಜೈಸ್ವಾಲ್ ಸುಮ್ಮನೆ ಹೊರನಡೆಯಬೇಕಿತ್ತು ಎಂಬ ಹರ್ಷ ಭೋಗ್ಲೆ ಅವರ ಹಳೆಯ ನಂಬಿಕೆಯನ್ನು ಒಪ್ಪಿಕೊಂಡರೂ, ಪದೇ ಪದೆ ಉಂಟಾದ ಪ್ರಚೋದನೆಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಭಾರತೀಯ ಬ್ಯಾಟ್ಸ್‌ಮನ್ ಅನ್ನು ದೂಷಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ತಿರಸ್ಕಾರ ಮತ್ತು ಸೆಂಡ್-ಆಫ್‌ಗಳನ್ನು ಎದುರಿಸಿದ್ದಾರೆ. ಅವುಗಳಲ್ಲಿ ಕೆಲವು ಗಡಿಯನ್ನು ದಾಟಿವೆ ಮತ್ತು ಎರಡೂ ದೃಷ್ಟಿಕೋನಗಳು ಯೋಗ್ಯವಾಗಿವೆ ಎಂದು ಚೋಪ್ರಾ ಸೂಚಿಸಿದರು.
ಫೆರ್ನಾಂಡೋ ಅವರು ಜೈಸ್ವಾಲ್ ಅವರನ್ನು ಔಟ್ ಮಾಡಿದ ನಂತರ, ಭಾರತದ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಭಾರತೀಯ ಬ್ಯಾಟರ್ ಶ್ರೀಲಂಕಾದ ವೇಗದ ಬೌಲರ್ ಬಳಿ ತೆರಳಿದರು ಮತ್ತು ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು; ಈ ವೇಳೆ ಫೆರ್ನಾಂಡೋ ತಮ್ಮ ತಲೆಯನ್ನು ಜೈಸ್ವಾಲ್ ಅವರತ್ತ ತಂದರು. ಆಗ ಜೈಸ್ವಾಲ್ ಮುಂದಕ್ಕೆ ಬಾಗಿದ ಪರಿಣಾಮವಾಗಿ, ಇಬ್ಬರ ಹೆಲ್ಮೆಟ್ ಡಿಕ್ಕಿಯಾಯಿತು.
ಕ್ರಿಕೆಟ್ ವೀಕ್ಷಕವಿವರಣೆಗಾರ ಹರ್ಷ ಭೋಗ್ಲೆ ಅವರನ್ನೊಳಗೊಂಡ 'ಜೈಸ್ವಾಲ್ ಮಿತಿ ಮೀರಿದರೇ?' (Did Jaiswal cross the line?) ಎಂಬ ಶೀರ್ಷಿಕೆಯ ಕ್ರಿಕ್‌ಬಜ್ (Cricbuzz) ವಿಡಿಯೋವೊಂದಕ್ಕೆ ಪ್ರತಿಕ್ರಿಯಿಸಿದ್ದ ಜೈಸ್ವಾಲ್, ಇಬ್ಬರು ಆಟಗಾರರ ನಡುವೆ ಏನು ಮಾತುಕತೆ ನಡೆಯಿತು ಎಂಬುದನ್ನು ತಿಳಿಯದೆ ಈ ಘಟನೆಯ ಬಗ್ಗೆ ತೀರ್ಪು ನೀಡದಂತೆ ಅವರು ಜನರನ್ನು ಕೋರಿದ್ದರು; ಈ ಹಿನ್ನೆಲೆಯಲ್ಲಿ ಚೋಪ್ರಾ ಅವರ ಈ ಹೇಳಿಕೆ ಬಂದಿದೆ.
'ಹರ್ಷ ಭೋಗ್ಲೆ ಕ್ರಿಕೆಟ್‌ನ ಸಾಂಪ್ರದಾಯಿಕ ದೃಷ್ಟಿಕೋನವನ್ನು ಹೊಂದಿರುವವರು ಮತ್ತು ಅಂತಹ ಉದ್ವಿಗ್ನ ಕ್ಷಣದಲ್ಲಿ ಅಲ್ಲಿಂದ ಸುಮ್ಮನೆ ಹೊರನಡೆಯುವುದೇ ಸರಿಯಾದ ಕ್ರಮ ಎಂದು ಅವರು ಭಾವಿಸಿದ್ದರು. ಆದರೆ ಜೈಸ್ವಾಲ್ ಪ್ರತಿಕ್ರಿಯಿಸುವ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಅವರು ಅಸಿತಾ ಫೆರ್ನಾಂಡೋ ಅವರ ತೀರಾ ಹತ್ತಿರಕ್ಕೆ ಹೋದರು ಈಗ ನನಗೆ ಅನ್ನಿಸುತ್ತಿದೆ: ಯಾರದು ಸರಿ? ಅವರಿಬ್ಬರೂ ಸರಿಯಾಗಿರಲು ಸಾಧ್ಯವೇ?' ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
'ಜೈಸ್ವಾಲ್ ಅವರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಲೇವಡಿ ಮಾಡುವುದು ಮತ್ತು ಆಕ್ರಮಣಕಾರಿ ಸನ್ನೆಗಳ ಮೂಲಕ ಕೆಣಕುವುದು ನಡೆಯುತ್ತಲೇ ಇರುತ್ತದೆ; ಕೆಲವೊಮ್ಮೆ ಇದು ಮಿತಿಮೀರಿ, ವೈಯಕ್ತಿಕ ನಿಂದನೆಯ ಮಟ್ಟಕ್ಕೂ ಹೋಗುತ್ತದೆ. ಆದರೆ, ಜೈಸ್ವಾಲ್ ಅಂತಹ ಸವಾಲುಗಳನ್ನು ಎದುರಿಸಲು ಮತ್ತು ತಕ್ಕ ಪ್ರತ್ಯುತ್ತರ ನೀಡಲು ಇಷ್ಟಪಡುವ ವ್ಯಕ್ತಿ' ಎಂದರು.
ಯುವ ಆಟಗಾರರು ಸಂಘರ್ಷದ ಸನ್ನಿವೇಶಗಳನ್ನು ನಿಭಾಯಿಸುವ ರೀತಿಯಲ್ಲಿ ಆಗಿರುವ ಬದಲಾವಣೆಯನ್ನೂ ಎತ್ತಿ ತೋರಿಸಿದ ಚೋಪ್ರಾ, ಜೈಸ್ವಾಲ್ ಅವರಂತಹ ಆಟಗಾರರು ವಿಷಯವನ್ನು ಹಾಗೆಯೇ ತಣ್ಣಗಾಗಲು ಬಿಡುವ ಬದಲು ತಕ್ಷಣವೇ ಪ್ರತಿಕ್ರಿಯಿಸಲು ಬಯಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
'ಇದು ವಿಷಯಗಳನ್ನು ನಿರ್ವಹಿಸುವ ಹೊಸ ವಿಧಾನ. ಇಲ್ಲದಿದ್ದರೆ, 'ಯಶಸ್ವಿ ಹೋಗಲಿ ಬಿಡಿ, ಆತನನ್ನು ಬಿಟ್ಟುಬಿಡಿ, ಕೆಲ ದಿನಗಳ ನಂತರ ಆ ವಿಷಯ ಮುಗಿಯುತ್ತದೆ' ಎಂದು ನಾನು ಹೇಳುತ್ತಿದ್ದೆ. ಆದರೆ ನಮ್ಮ ಯುವಜನತೆ, ಅಂದರೆ ಈ ಹೊಸ ಪೀಳಿಗೆಯು, 'ನಾನೇಕೆ ಕಾಯಬೇಕು? ನನ್ನ ಬಗ್ಗೆ ನೀವು ಏನಾದರೂ ಹೇಳಿದ್ದರೆ, ಅದು ಸರಿಯೋ ತಪ್ಪೋ ಎಂಬುದನ್ನು ನಾನು ಇದೀಗ, ಇಂದೇ ಸಾಬೀತುಪಡಿಸುತ್ತೇನೆ. ಅದನ್ನು ನಿಮಗೆ ತೋರಿಸಿಕೊಡುತ್ತೇನೆ' ಎಂದು ಹೇಳುತ್ತದೆ. ವಾಸ್ತವವಾಗಿ ಜಗತ್ತು ಮತ್ತು ವಿಷಯಗಳನ್ನು ನೋಡುವ ಹೊಸ ದೃಷ್ಟಿಕೋನ ಇದಾಗಿದೆ' ಎಂದು ತಿಳಿಸಿದ್ದಾರೆ.
ಆಟಗಾರರಿಬ್ಬರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಸಮಂಜಸವಾಗಿಯೇ ಇತ್ತು ಮತ್ತು ಆ ವಾಕ್ಸಮರದ ಕುರಿತು ಅವರಿಬ್ಬರಿಗೂ ಸಮರ್ಥನೀಯ ದೃಷ್ಟಿಕೋನವಿತ್ತು ಎಂದು ಚೋಪ್ರಾ ಒತ್ತಿ ಹೇಳಿದರು. 'ಈ ವಾಕ್ಸಮರದ ವೇಳೆ ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ತಮ್ಮ ನಿಲುವುಗಳ ಪ್ರಕಾರ, ಇಬ್ಬರೂ ಸರಿಯಾಗಿದ್ದಾರೆ' ಎಂದು ಅವರು ಹೇಳಿದರು.
ಇದರ ಪರಿಣಾಮವಾಗಿ, ಜೈಸ್ವಾಲ್ ಮತ್ತು ಫೆರ್ನಾಂಡೋ ಇಬ್ಬರಿಗೂ ಅವರ ಪಂದ್ಯದ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಯಿತು ಮತ್ತು ತಲಾ ಒಂದು 'ಡಿಮೆರಿಟ್ ಪಾಯಿಂಟ್' ನೀಡಲಾಯಿತು. ಈ ಘಟನೆಗೆ ಮುಂಚಿನ 24 ತಿಂಗಳುಗಳಲ್ಲಿ ಈ ಆಟಗಾರರಿಬ್ಬರೂ ಯಾವುದೇ ರೀತಿಯ ಉಲ್ಲಂಘನೆಯನ್ನು ಮಾಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



