Team India ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ರೇಸ್ ನಿಂದ ಪಾರ್ಥಿವ್ ಪಟೇಲ್ ಔಟ್? 24 ಟೆಸ್ಟ್ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!
ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಬಿಸಿಸಿಐನ ಹಿರಿಯ ಪುರುಷರ ಆಯ್ಕೆ ಸಮಿತಿಯ ಪಶ್ಚಿಮ ವಲಯದ ಪ್ರತಿನಿಧಿ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ನವದೆಹಲಿ: ಅಜಿತ್ ಅಗರ್ಕರ್ ಬಳಿಕ ತೆರವಾಗಿರುವ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ ರೇಸ್ ನಲ್ಲಿ ಮೇಜರ್ ಟ್ವಿಸ್ಟ್ ಎದುರಾಗಿದ್ದು, ಇಷ್ಟು ದಿನ ಮುಂಚೂಣಿಯಲ್ಲಿದ್ದ ಮಾಜಿ ಕ್ರಿಕೆಟಿಗ ಪಾರ್ಥೀವ್ ಪಟೇಲ್ ಇದೀಗ ಸ್ಪರ್ಧೆಯಿಂದಲೇ ದೂರ ಸರಿದಿದ್ದಾರೆ ಎನ್ನಲಾಗಿದೆ.
ಇದಕ್ಕೆ ಇಂಬು ನೀಡುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಹಿರಿಯ ಪುರುಷರ ಆಯ್ಕೆ ಸಮಿತಿಯ ಪಶ್ಚಿಮ ವಲಯದ ಪ್ರತಿನಿಧಿ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ, ದಕ್ಷಿಣ ವಲಯದ ಪ್ರತಿನಿಧಿಯಾಗಿರುವ ಪ್ರಗ್ಯಾನ್ ಓಜಾ ಅವರು ತಮ್ಮ ಅಧಿಕಾರಾವಧಿಯ ಉಳಿದ ಅವಧಿಗೂ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂದು ವರದಿಗಳು ತಿಳಿಸಿವೆ.
ಅಜಿತ್ ಅಗರ್ಕರ್ ಅವರ ಉತ್ತರಾಧಿಕಾರಿಯಾಗಿ ಪಾರ್ಥಿವ್ ಪಟೇಲ್ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಪಶ್ಚಿಮ ವಲಯದ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವ ಗಡುವು ಬುಧವಾರ ಮುಕ್ತಾಯಗೊಂಡಿದ್ದು, ಪಾರ್ಥಿವ್ ಈ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ಬಿಸಿಸಿಐ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸುತ್ತದೆಯೇ ಎಂಬುದು ತಿಳಿದಿಲ್ಲ. ಆದರೆ, ಅಕ್ಟೋಬರ್ 14ರಂದು ಸಂಜೆ 5 ಗಂಟೆಯವರೆಗೆ ಪಾರ್ಥಿವ್ ಅರ್ಜಿ ಸಲ್ಲಿಸಿರಲಿಲ್ಲ. ಗಡುವು ವಿಸ್ತರಣೆಯಾದರೆ ಅಥವಾ ಅವರು ತಮ್ಮ ನಿರ್ಧಾರ ಬದಲಿಸಿದರೆ ಪರಿಸ್ಥಿತಿ ಬದಲಾಗಬಹುದು” ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಪ್ರಗ್ಯಾನ್ ಓಜಾ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ
ಪ್ರಸ್ತುತ ಆಯ್ಕೆ ಸಮಿತಿಯಲ್ಲಿರುವ ಸದಸ್ಯರ ಪೈಕಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಅನುಭವ ಪ್ರಗ್ಯಾನ್ ಓಜಾ ಅವರ ಪರವಾಗಿ ಕೆಲಸ ಮಾಡಬಹುದು ಎಂದು ವರದಿ ತಿಳಿಸಿದೆ. ಹೀಗಾಗಿ, ತಮ್ಮ ಅಧಿಕಾರಾವಧಿಯ ಉಳಿದ ಅವಧಿಗೂ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ರಮೇಶ್ ಪೊವಾರ್ ಹೆಸರು ಮುಂಚೂಣಿಗೆ?
ಏತನ್ಮಧ್ಯೆ ಕಿರಿಯರ ಆಯ್ಕೆ ಸಮಿತಿಯ ಅಧ್ಯಕ್ಷರಾಗಬಹುದು ಎಂದು ನಿರೀಕ್ಷಿಸಲಾಗಿದ್ದ ಮಾಜಿ ಕ್ರಿಕೆಟಿಗ ರಮೇಶ್ ಪೊವಾರ್ ಇದೀಗ ಹಿರಿಯರ ಆಯ್ಕೆ ಸಮಿತಿಯ ಪಶ್ಚಿಮ ವಲಯದ ಪ್ರತಿನಿಧಿ ಹುದ್ದೆಯ ರೇಸ್ಗೆ ಪ್ರವೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮಾಜಿ ಭಾರತೀಯ ವಿಕೆಟ್ ಕೀಪರ್ ಸಮೀರ್ ದಿಘೆ ಅವರ ಹೆಸರೂ ಚರ್ಚೆಯಲ್ಲಿದ್ದು, ಈ ಹಿಂದೆ ಆಯ್ಕೆ ಸಮಿತಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಪೊವಾರ್ ಮತ್ತು ದಿಘೆ ಇಬ್ಬರೂ ಅರ್ಜಿ ಸಲ್ಲಿಸಿದ್ದರು ಎಂದು ವರದಿ ತಿಳಿಸಿದೆ.
ಭಾರತದ ಪರ 24 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಇರುವ ರಮೇಶ್ ಪೊವಾರ್ ಹೆಸರು ಇದೀಗ ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿ ಬಲವಾಗಿ ಕೇಳಿಬರುತ್ತಿದೆ.
ಪಾರ್ಥೀವ್ ಪಟೇಲ್ ಗೆ ಮತ್ತೆ ಅವಕಾಶ?
ಆದರೆ, ಪಶ್ಚಿಮ ವಲಯದಿಂದ ಅರ್ಹತೆ ಹೊಂದಿರುವ ಪ್ರಮುಖ ಅಭ್ಯರ್ಥಿಗಳ ಸಂಖ್ಯೆ ಸೀಮಿತವಾಗಿದೆ ಎನ್ನಲಾಗಿದೆ. ಬಿಸಿಸಿಐ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಿ ಪಾರ್ಥಿವ್ ಪಟೇಲ್ಗೆ ಅವಕಾಶ ನೀಡಿದರೆ ಮಾತ್ರ ಸ್ಪರ್ಧೆಯ ಚಿತ್ರಣ ಬದಲಾಗಬಹುದು.
ಗುಜರಾತ್ ಟೈಟನ್ಸ್ ಜೊತೆ ಮುಂದುವರಿಯಲಿರುವ ಪಾರ್ಥಿವ್?
ಸದ್ಯದ ಪರಿಸ್ಥಿತಿಯಲ್ಲಿ ಪಾರ್ಥಿವ್ ಪಟೇಲ್ ಬಿಸಿಸಿಐ ಹಿರಿಯರ ಆಯ್ಕೆ ಸಮಿತಿಗೆ ಸೇರುವ ಬದಲು ಗುಜರಾತ್ ಟೈಟನ್ಸ್ ತಂಡದ ಕೋಚಿಂಗ್ ಸಿಬ್ಬಂದಿಯಲ್ಲೇ ಮುಂದುವರಿಯುವ ಸಾಧ್ಯತೆಯಿದೆ. ಇದರ ಜೊತೆಗೆ, ಅವರು ತಮ್ಮ ಪ್ರಸಾರಕ ವೃತ್ತಿಯ ಬದ್ಧತೆಗಳನ್ನೂ ಮುಂದುವರಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಆದಾಗ್ಯೂ, ಬಿಸಿಸಿಐ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸುತ್ತದೆಯೇ ಅಥವಾ ಆಯ್ಕೆ ಸಮಿತಿಯ ಹುದ್ದೆಗೆ ಬೇರೆ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




