IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್; SRHಗೆ 244 ರನ್ ಬೃಹತ್ ಗುರಿ ನೀಡಿದ RR
IPL 2026 ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು.

ನ್ಯೂ ಚಂಡೀಗಢ: ಐಪಿಎಲ್ ಟೂರ್ನಿಯ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ಗೆ ಗೆಲ್ಲಲು 244 ರನ್ ಗಳ ಬೃಹತ್ ಗುರಿ ನೀಡಿದೆ.
ಬುಧವಾರ ಮುಲ್ಲನ್ ಪುರದ ನ್ಯೂ PCA ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ IPL 2026 ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು.
ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತು. ಆ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 244 ರನ್ ಗಳ ಬೃಹತ್ ಗುರಿ ನೀಡಿತು.
ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್
ಇನ್ನು ಟಾಸ್ ಸೋತರೂ ರಾಜಸ್ತಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸಿತು. ರಾಜಸ್ತಾನದ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರದ್ದೇ ಸಿಂಹಪಾಲು. ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳನ್ನು ಎದುರಿಸಿ ಬರೊಬ್ಬರಿ 12 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 97 ರನ್ ಸಿಡಿಸಿದರು. ಆದರೆ ಪ್ರಫುಲ್ ಹಿಂಗೆ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಮರಣ್ ರವಿಚಂದ್ರನ್ ಗೆ ಕ್ಯಾಚ್ ನೀಡಿ ಔಟಾದರು. ಆ ಮೂಲಕ ಕೇವಲ 3 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.
RR ಬ್ಯಾಟಿಂಗ್ ಗೆ ಬಲ ತುಂಬಿದ ಮಧ್ಯಮ ಕ್ರಮಾಂಕ
ವೈಭವ್ ಸೂರ್ಯವಂಶಿ ಔಟಾದ ಬೆನ್ನಲ್ಲೇ ಅವರ ಸಹ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ 29 ಎಸೆತಗಳಲ್ಲಿ 4 ಬೌಂಡರಿ ಸಹಿತ 29 ರನ್ ಸಿಡಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಧ್ರುವ್ ಜುರೆಲ್ ಮತ್ತು ನಾಯಕ ರಿಯಾನ್ ಪರಾಗ್ ರಾಜಸ್ತಾನ ಬ್ಯಾಟಿಂಗ್ ರನ್ ರೇಟ್ ಕುಸಿಯದಂತೆ ನೋಡಿಕೊಂಡರು.
ಧ್ರುವ್ ಜುರೆಲ್ 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 50 ರನ್ ಗಳಿಸಿ ಔಟಾದರೆ, ನಾಯಕ ಪರಾಗ್ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 26 ರನ್ ಗಳಿಸಿ ಪ್ರಫುಲ್ ಹಿಂಗೆ ಗೆ ವಿಕೆಟ್ ಒಪ್ಪಿಸಿದರು.
ಈ ಜೋಡಿ ವಿಕೆಟ್ ಪತನದ ಬಳಿಕ ರಾಜಸ್ತಾನ ರಾಯಲ್ಸ್ ತಂಡದ ಬ್ಯಾಟರ್ ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ಫೆರೇರಾ 12 ರನ್ ಗಳಿಸಿ ರನೌಟ್ ಆದರೆ, ಶನಕ 5 ರನ್ ಗಳಿಸಿ ಇಶಾನ್ ಮಲಿಂಗಾಗೆ ವಿಕೆಟ್ ಒಪ್ಪಿಸಿದರು.
ಅಂತೆಯೇ ಜೋಫ್ರಾ ಆರ್ಚರ್ 4, ಬರ್ಗರ್ 1 ರನ್ ಗಳಿಸಿದರೆ, ರವೀಂದ್ರ ಜಡೇಜಾ ಅಜೇಯ 12 ರನ್ ಗಳಿಸಿದರು. ಅಂತಿಮವಾಗಿ ರಾಜಸ್ತಾನ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿತು.
ಸನ್ ರೈಸರ್ಸ್ ಹೈದರಾಬಾದ್ ಪರ ಪ್ರಫುಲ್ ಹಿಂಗೆ 3 ವಿಕೆಟ್ ಪಡೆದರೆ, ಇಶಾನ್ ಮಲಿಂಗಾ, ಶಿವಾಂಗ್ ಕುಮಾರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



