IPL 2026: ರನ್ ಮೆಷಿನ್ Virat Kohli ರೆಕಾರ್ಡ್ ಮುರಿದು ಐತಿಹಾಸಿಕ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ!
ಇಂದು ಸೂರ್ಯವಂಶಿ ಸಿಡಿಸಿದ 3 ಸಿಕ್ಸರ್ ಗಳೊಂದಿಗೆ ಹಾಲಿ ಐಪಿಎಲ್ 2026 ಟೂರ್ನಿಯಲ್ಲಿ ಅ ಸಿಕ್ಸರ್ ಗಳಿಕೆ 43ಕ್ಕೆ ಏರಿಕೆಯಾಗಿದೆ.

ನವದೆಹಲಿ: ಭಾರತದ ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಅಭಿಷೇಕ್ ಶರ್ಮಾ ಅವರ ದಾಖಲೆಯನ್ನೇ ಪುಡಿಗಟ್ಟಿದ್ದಾರೆ.
ಇಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ದೆಹಲಿ ವಿರುದ್ಧ ತಮ್ಮ ಎಂದಿನ ಸ್ಫೋಟಕ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ ಕೇವಲ 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 46 ರನ್ ಚಚ್ಚಿದರು.
ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರೂ ವೈಭವ್ ಸೂರ್ಯವಂಶಿ ಅಪರೂಪದ ದಾಖಲೆಗೆ ಪಾತ್ರರಾದರು.
ಇಂದು ಸೂರ್ಯವಂಶಿ ಸಿಡಿಸಿದ 3 ಸಿಕ್ಸರ್ ಗಳೊಂದಿಗೆ ಹಾಲಿ ಐಪಿಎಲ್ 2026 ಟೂರ್ನಿಯಲ್ಲಿ ಅ ಸಿಕ್ಸರ್ ಗಳಿಕೆ 43ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಒಂದೇ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತದ ಬ್ಯಾಟರ್ ಎಂಬ ಕೀರ್ತಿಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು ಈ ದಾಖಲೆ ಅಭಿಷೇಕ್ ಶರ್ಮಾ ಹೆಸರಲ್ಲಿತ್ತು. ಅಭಿಷೇಕ್ ಶರ್ಮಾ 2024ರ ಟೂರ್ನಿಯಲ್ಲಿ 42 ಸಿಕ್ಸರ್ ಗಳನ್ನು ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಆದರೆ ವೈಭವ್ ಸೂರ್ಯವಂಶಿ ಇಂದು ಈ ದಾಖಲೆ ಮುರಿದಿದ್ದಾರೆ. ಕೇವಲ ಅಭಿಷೇಕ್ ಶರ್ಮಾ ಮಾತ್ರವಲ್ಲದೇ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನೂ ಸೂರ್ಯವಂಶಿ ಹಿಂದಿಕ್ಕಿದ್ದಾರೆ.
ಕೊಹ್ಲಿ 2016 ಮತ್ತು 2024ರ ಐಪಿಎಲ್ ಟೂರ್ನಿಗಳಲ್ಲಿ ತಲಾ 38 ಸಿಕ್ಸರ್ ಸಿಡಿಸಿದ್ದರು. ಅಂತೆಯೇ 2025ರ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೂರ್ಯ ಕುಮಾರ್ ಯಾದವ್ ಕೂಡ 38 ಸಿಕ್ಸರ್ ಗಳನ್ನು ಸಿಡಿಸಿದ್ದರು. ಅದೇ ಟೂರ್ನಿಯಲ್ಲಿ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ 39 ಸಿಕ್ಸರ್ ಸಿಡಿಸಿದ್ದರು.
ಇದೀಗ ರಾಜಸ್ತಾನ ರಾಯಲ್ಸ್ ತಂಡದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಈ ಎಲ್ಲ ದೈತ್ಯ ಆಟಗಾರರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
Most sixes in an IPL season among Indians
43* - Vaibhav Sooryavanshi (2026)
42 - Abhishek Sharma (2024)
39 - Shreyas Iyer (2025)
38 - Virat Kohli (2016)
38 - Virat Kohli (2024)
38 - Suryakumar Yadav (2025)
ಐಪಿಎಲ್ 2026 ಟೂರ್ನಿಯ ಗರಿಷ್ಟ ರನ್ ಸ್ಕೋರರ್ ಗಳ ಪಟ್ಟಿ
ಅಂತೆಯೇ ವೈಭವ್ ಸೂರ್ಯವಂಶಿ ತಾವಾಡಿದ 12 ಪಂದ್ಯಗಳಿಂದ 40.50 ಸರಾಸರಿಯಲ್ಲಿ ಬರೊಬ್ಬರಿ 234.78 ಸ್ಟ್ರೈಕ್ ರೇಟ್ ನಲ್ಲಿ 486 ರನ್ ಕಲೆಹಾಕಿದ್ದಾರೆ. ಈ ಪೈಕಿ 43 ಸಿಕ್ಸರ್ ಮತ್ತು 43 ಬೌಂಡರಿಗಳೂ ಸೇರಿವೆ.
ಈ ಪಟ್ಟಿಯಲ್ಲಿ ಗುಜರಾತ್ ಟೈಟನ್ ತಂಡದ ಸ್ಫೋಟಕ ಬ್ಯಾಟರ್ ಸಾಯಿ ಸುದರ್ಶನ್ ಅಗ್ರಸ್ಥಾನದಲ್ಲಿದ್ದು, ಸಾಯಿ ಒಟ್ಟು 13 ಪಂದ್ಯಗಳಿಂದ 554 ರನ್ ಕಲೆಹಾಕಿದ್ದಾರೆ. ಅಂತೆಯೇ 2ನೇ ಸ್ಥಾನದಲ್ಲಿರುವ ಅದೇ ಗುಜರಾತ್ ತಂಡದ ನಾಯಕ ಶುಭ್ ಮನ್ ಗಿಲ್ 12 ಪಂದ್ಯಗಳಿಂದ 552 ರನ್ ಕಲೆಹಾಕಿ 2ನೇ ಸ್ಥಾನಿಯಾಗಿದ್ದಾರೆ. ಆರ್ ಸಿಬಿ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ 542 ರನ್ ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
100 ಸಿಕ್ಸರ್
ಇದರ ಜೊತೆಗೆ, ಮೊಹಮ್ಮದ್ ಸಿರಾಜ್ ವಿರುದ್ಧ ಮೊದಲ ಬಾಲ್‌ನಲ್ಲೇ ಸಿಕ್ಸರ್ ಸಿಡಿಸಿ, ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದಾಖಲೆಯನ್ನೂ ಸೂರ್ಯವಂಶಿ ನಿರ್ಮಿಸಿದರು. ಅವರು ಈ ಸಾಧನೆಯನ್ನು ಕೇವಲ 514 ಎಸೆತಗಳಲ್ಲಿ ಮಾಡಿದ್ದಾರೆ.
ಇದಕ್ಕೂ ಮೊದಲು ಅವರು ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1,000 ರನ್ ಪೂರೈಸಿದ ಆಟಗಾರಎಂಬ ಕೀರ್ತಿಗೂ ವೈಭವ್ ಪಾತ್ರರಾಗಿದ್ದರು. ಸೂರ್ಯವಂಶಿ ಕೇವಲ 473 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, ಮಿಚೆಲ್ ಓವನ್ ಅವರ 533 ಎಸೆತಗಳ ಹಿಂದಿನ ದಾಖಲೆಯನ್ನು ಮುರಿದರು.
ಈ ಸೀಸನ್‌ನಲ್ಲಿ ಸೂರ್ಯವಂಶಿ ಎರಡು ಬಾರಿ 40 ಬಾಲ್‌ಗಿಂತ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ. ಗುಜರಾತ್ ವಿರುದ್ಧ 35 ಎಸೆತಗಳಲ್ಲಿ ಮತ್ತು ಹೈದರಾಬಾದ್ ವಿರುದ್ಧ 36 ಎಸೆತಗಳಲ್ಲಿ ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




