ಕ್ರಿಕೆಟ್

PSL 2026: ಭದ್ರತಾ ಶಿಷ್ಟಾಚಾರ ಉಲ್ಲಂಘನೆ, ಆಕ್ಷೇಪಾರ್ಹ ಟ್ವೀಟ್‌; ಶಾಹೀನ್ ಅಫ್ರಿದಿ, ನಸೀಮ್ ಶಾಗೆ ದಂಡ ವಿಧಿಸಿದ PCB!

ಶಾಹೀನ್ ಶಾ ಮತ್ತು ಸಿಕಂದರ್ ರಾಝಾ ನಾಲ್ವರು ವ್ಯಕ್ತಿಗಳನ್ನು ಹೋಟೆಲ್ ಕೋಣೆಗೆ ಆಹ್ವಾನಿಸುವ ಮೂಲಕ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ.

PSL 2026: ಭದ್ರತಾ ಶಿಷ್ಟಾಚಾರ ಉಲ್ಲಂಘನೆ, ಆಕ್ಷೇಪಾರ್ಹ ಟ್ವೀಟ್‌; ಶಾಹೀನ್ ಅಫ್ರಿದಿ, ನಸೀಮ್ ಶಾಗೆ ದಂಡ ವಿಧಿಸಿದ PCB!
ಶಾಹೀನ್ ಅಫ್ರಿದಿ
Published On :

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಸಮಯದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವೇಗದ ಬೌಲರ್‌ಗಳಾದ ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ಅವರಿಗೆ ದಂಡ ವಿಧಿಸಿದೆ. ಲಾಹೋರ್ ಖಲಂದರ್ ತಂಡದ ನಾಯಕರಾಗಿರುವ ಶಾಹೀನ್‌ಗೆ 10 ಲಕ್ಷ ಪಿಕೆಆರ್ (ಸುಮಾರು ₹3.39 ಲಕ್ಷ) ದಂಡ ವಿಧಿಸಲಾಗಿದೆ.

ಶಾಹೀನ್ ಮತ್ತು ಸಿಕಂದರ್ ರಾಝಾ ನಾಲ್ವರು ವ್ಯಕ್ತಿಗಳನ್ನು ಹೋಟೆಲ್ ಕೋಣೆಗೆ ಆಹ್ವಾನಿಸುವ ಮೂಲಕ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ. ಅವರ ಹೋಟೆಲ್ ಕೋಣೆಗಳಿಗೆ ಯಾರಿಗೂ ಪ್ರವೇಶವಿರಲಿಲ್ಲ ಮತ್ತು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಇದನ್ನು ಕಟ್ಟುನಿಟ್ಟಾಗಿ ವಿರೋಧಿಸಿದ್ದರು. ಆದರೆ, ಶಾಹೀನ್ ಕೇಳಲಿಲ್ಲ.

ಬಂದವರು ತನ್ನ ಸ್ನೇಹಿತರು ಮತ್ತು ಕುಟುಂಬಸ್ಥರು ಆಗಿದ್ದರಿಂದ ಅವರನ್ನು ಸ್ವಾಗತಿಸುವಂತೆ ಶಾಹೀನ್ ಅವರಿಗೆ ನಾನೇ ಹೇಳಿದ್ದೆ ಎಂದು ಸಿಕಂದರ್ ರಾಝಾ ಅವರು ಸಂಪೂರ್ಣ ಆಪಾದನೆಯನ್ನು ತನ್ನ ಮೇಲೆಯೇ ಹೊತ್ತುಕೊಂಡರು. ಆದರೂ, ಖಲಂದರ್ ತಂಡದ ನಾಯಕನನ್ನು ಇದರಿಂದ ಪಾರುಮಾಡಲು ಸಾಧ್ಯವಾಗಲಿಲ್ಲ. ಈ ಮಧ್ಯೆ, ಶಾಹೀನ್ ಮೇಲೆ ಚೆಂಡು ವಿರೂಪಗೊಳಿಸುವಿಕೆಯ ಆರೋಪ ಕೂಡ ಕೇಳಿಬಂದಿದೆ.

'ಶಿಸ್ತು ಕಾಯ್ದುಕೊಳ್ಳುವ ಮತ್ತು ಹೊಣೆಗಾರಿಕೆ ಪ್ರದರ್ಶಿಸುವ ದೃಷ್ಟಿಯಿಂದ, ಫ್ರಾಂಚೈಸಿ ಶಾಹೀನ್ ಶಾ ಅಫ್ರಿದಿ ಅವರಿಗೆ 1 ಮಿಲಿಯನ್ PKR ದಂಡವನ್ನು ವಿಧಿಸುವ ಮೂಲಕ ಸ್ವಯಂಪ್ರೇರಿತ ಮತ್ತು ಪೂರ್ವಭಾವಿ ಹೆಜ್ಜೆಯನ್ನು ಇಟ್ಟಿದೆ. ಲಾಹೋರ್ ಖಲಂದರ್ಸ್‌ ಈ ವಿಷಯದ ಬಗ್ಗೆ ತನ್ನ ಅವಲೋಕನಗಳೊಂದಿಗೆ ವಿವರವಾದ ಪ್ರತಿಕ್ರಿಯೆಯನ್ನು ಪಿಸಿಬಿಗೆ ಔಪಚಾರಿಕವಾಗಿ ತಿಳಿಸಿದೆ' ಎಂದು ಖಲಂದರ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ನಸೀಮ್ ಶಾ ಆಕ್ಷೇಪಾರ್ಹ ಟ್ವೀಟ್

ಮಾರ್ಚ್ 26 ರಂದು, ನಸೀಮ್ ಶಾ ಅವರು X ನಲ್ಲಿ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರನ್ನು ಟೀಕಿಸಿ ಪೋಸ್ಟ್ ಮಾಡಿದ್ದರು. 'ಲಾರ್ಡ್ಸ್‌ನಲ್ಲಿ ಅವರನ್ನು ರಾಣಿಯಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ?' ಎಂದು ಪಿಎಸ್‌ಎಲ್ 2026ರ ಆರಂಭಿಕ ಪಂದ್ಯಕ್ಕಾಗಿ ಮರ್ಯಮ್ ಗಡಾಫಿ ಕ್ರೀಡಾಂಗಣಕ್ಕೆ ಆಗಮಿಸಿದಾಗ ನಸೀಮ್ ಬರೆದಿದ್ದರು.

ಬಳಿಕ ನಸೀಮ್ ಆ ಟ್ವೀಟ್ ಅನ್ನು ಅಳಿಸಿಹಾಕಿ ಮತ್ತೊಂದು ಪೋಸ್ಟ್ ಮಾಡಿ, ತನ್ನ ಖಾತೆಯನ್ನು ಕ್ಷಣಮಾತ್ರದಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಷ್ಟೊತ್ತಿಗಾಗಲೇ ವಿವಾದ ಸೃಷ್ಟಿಯಾಗಿತ್ತು. ಅದಾದ ಎರಡು ದಿನಗಳ ನಂತರ, ಪಿಸಿಬಿ ಅವರಿಗೆ ಶೋಕಾಸ್ ನೋಟಿಸ್ ನೀಡಿತು.

ಪಿಸಿಬಿ ಯಾವುದೇ ರಾಜಕೀಯ ನಿಲುವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಕಳೆದ ವರ್ಷ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬೆಂಬಲಿಸುವ ಟೋಪಿ ಧರಿಸಿದ್ದಕ್ಕಾಗಿ ಆಲ್‌ರೌಂಡರ್ ಆಮೀರ್ ಜಮಾಲ್ ಅವರಿಗೆ 10 ಲಕ್ಷ ಪಿಕೆಆರ್ ದಂಡ ವಿಧಿಸಿತು. ಜಮಾಲ್‌ಗಿಂತ ಭಿನ್ನವಾಗಿ, ನಸೀಮ್ ಅವರನ್ನು ಇನ್ನೂ ಶಿಕ್ಷೆಯಿಂದ ಮುಕ್ತಗೊಳಿಸಲಾಗಿಲ್ಲ. ಪಿಸಿಬಿ ಅವರಿಗೆ ಪಿಕೆಆರ್ 2 ಕೋಟಿ (ಸುಮಾರು ₹68 ಲಕ್ಷ) ದಂಡ ವಿಧಿಸಿದೆ. ಇದು ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ದಂಡವಾಗಿದೆ.

ನಸೀಮ್ ವಾರ್ಷಿಕವಾಗಿ PKR 3 ಕೋಟಿ ಗಳಿಸುತ್ತಾರೆ. ಅಂದರೆ, PCB ಅವರ ಕೇಂದ್ರ ಒಪ್ಪಂದದ ಸುಮಾರು 8 ತಿಂಗಳ ಸಂಬಳವನ್ನು ವಿಧಿಸಿದೆ. ವೇಗದ ಬೌಲರ್ ಈ ದಂಡವನ್ನು ಒಪ್ಪಿಕೊಂಡರು. ಈ ತಪ್ಪಿಗೆ ತನ್ನ ನಿರ್ವಹಣಾ ತಂಡವು ಕಾರಣವೇ ಹೊರತು, ನಾನು ಜವಾಬ್ದಾರನಲ್ಲ ಎಂದು ಹೇಳಿದರು.

'ನನ್ನ ಖಾತೆಯಿಂದ ಪೋಸ್ಟ್ ಅನ್ನು ನನ್ನ ನಿರ್ವಹಣಾ ತಂಡವು ಮಾಡಿದೆ ಮತ್ತು ಅದು ನನ್ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ನನ್ನ ವೇದಿಕೆಯ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಮತ್ತು ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಅಗತ್ಯ ಬದಲಾವಣೆಗಳನ್ನು ಜಾರಿಗೆ ತಂದಿದ್ದೇನೆ. ನನ್ನ ಖಾತೆಯ ದುರುಪಯೋಗದಿಂದ ಪ್ರಭಾವಿತರಾದ ಎಲ್ಲರಿಗೂ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ' ಎಂದು ನಸೀಮ್ X ನಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.