IPL 2026: ಆರಂಭಕ್ಕೂ ಮೊದಲೇ KKRಗೆ ಆಘಾತ, ಪ್ರಮುಖ ವೇಗಿ ಟೂರ್ನಿಯಿಂದಲೇ ಔಟ್!
ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಈಗ ದೊಡ್ಡ ಆಘಾತವಾಗಿದ್ದು, ಈ ಹಿಂದೆ ಸ್ನಾಯುರಜ್ಜುವಿನ ಸಮಸ್ಯೆಗೆ ತುತ್ತಾಗಿದ್ದ ತಂಡದ ಸ್ಟಾರ್ ವೇಗಿ ಹರ್ಷಿತ್ ರಾಣಾ, ಇದೀಗ ಇಡೀ ಟೂರ್ನಿಗೆ ಲಭ್ಯರಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇರುವಂತೆಯೇ ಕೋಲ್ಕತಾ ನೈಟ್ ರೈಡರ್ಸ್ ತಂಡ ತನ್ನ ಪ್ರಮುಖ ವೇಗಿಯನ್ನು ಟೂರ್ನಿಯಿಂದಲೇ ಕಳೆದುಕೊಂಡಿದೆ.
ಹೌದು.. ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಈಗ ದೊಡ್ಡ ಆಘಾತವಾಗಿದ್ದು, ಈ ಹಿಂದೆ ಸ್ನಾಯುರಜ್ಜುವಿನ ಸಮಸ್ಯೆಗೆ ತುತ್ತಾಗಿದ್ದ ತಂಡದ ಸ್ಟಾರ್ ವೇಗಿ ಹರ್ಷಿತ್ ರಾಣಾ, ಇದೀಗ ಇಡೀ ಟೂರ್ನಿಗೆ ಲಭ್ಯರಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಕೆಕೆಆರ್ ಮೂಲಗಳು, ಹರ್ಷಿತ್ ನಮ್ಮ ತಂಡದ ಮುಖ್ಯ ಸದಸ್ಯ. ಅವರ ಅನುಪಸ್ಥಿತಿಯು ನಮಗೆ ದೊಡ್ಡ ಹೊಡೆತವಾಗಿದೆ. ಅವರು ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ’ ಎಂದು ಕೆಕೆಆರ್ ಮೂಲಗಳು ತಿಳಿಸಿವೆ.
ಕೆಕೆಆರ್ ಹೆಡ್ ಕೋಚ್ ಅಭಿಷೇಕ್ ನಾಯರ್ ಅವರು ಕೂಡ ಈ ಬಗ್ಗೆ ಖಚಿತಪಡಿಸಿದ್ದು, ಹರ್ಷಿತ್ ರಾಣಾ ಗಾಯದ ಕಾರಣದಿಂದ ಈ ಐಪಿಎಲ್ ಸೀಸನ್ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ನಾವು ಕೆಲವು ಬೌಲರ್ಗಳನ್ನು ಅಭ್ಯಾಸದ ಸಮಯದಲ್ಲಿ ಪರೀಕ್ಷಿಸಿದ್ದೇವೆ.
ಅವರಲ್ಲಿ ಯಾರನ್ನು ತಂಡದಲ್ಲಿ ಬದಲಿ ವೇಗಿಯಾಗಿ ಸೇರಿಸಬಹುದು ಎಂಬುದನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ಹರ್ಷಿತ್ ರಾಣಾ ಈ ಸೀಸನ್ನಿಂದ ಹೊರಗುಳಿದಿರುವುದು ನಮಗೆ ದೊಡ್ಡ ಹೊಡೆತ. ಕಳೆದ ಕೆಲವು ಸೀಸನ್ಗಳಲ್ಲಿ ವಿಶೇಷವಾಗಿ ಚಾಂಪಿಯನ್ ಆದ ಸೀಸನ್ನಲ್ಲಿ ಅವರು ತಂಡದ ಅವಿಭಾಜ್ಯ ಅಂಗವಾಗಿದ್ದರು.
ಕಳೆದ ಒಂದು ವರ್ಷದಿಂದ ಅವರು ಕ್ರಿಕೆಟಿಗನಾಗಿ ಪರಿಪಕ್ವತೆಯನ್ನು ಸಾಧಿಸಿದ್ದಾರೆ. ಆದ್ದರಿಂದ ಹರ್ಷಿತ್ ರಾಣಾ ಇಲ್ಲದಿರುವುದು ನಮಗೆ ಖಂಡಿತವಾಗಿ ಕಷ್ಟ. ಅವರನ್ನು ಬದಲಾಯಿಸುವುದು ಸುಲಭವಲ್ಲ ಎಂದು ಹೇಳಿದ್ದಾರೆ.
ಇದರೊಂದಿಗೆ ಕಳೆದ ಸೀಸನ್ನಲ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದ ಕೆಕೆಆರ್ ತಂಡಕ್ಕೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಭಾರಿ ಹಿನ್ನಡೆಯಾಗಿದೆ.
ಮಾರ್ಚ್ 18 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸುವ ಮೂಲಕ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಮಾತ್ರವಲ್ಲದೇ ಹರ್ಷಿತ್ ರಾಣಾ ಜೊತೆ ಪತಿರಾಣಾ ಮತ್ತು ಮುಸ್ತಫಿಜುರ್ ಕೂಡ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



