ಕ್ರಿಕೆಟ್

Cricket: IPL 2026 ಮುಕ್ತಾಯದ ಬೆನ್ನಲ್ಲೇ ಹೊಸ ವಿವಾದ; ಅರ್ಧ ಹಣ ಮಾತ್ರ ಕೊಟ್ರು- Mitchell Santner ಹೊಸ ಬಾಂಬ್!

ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಮಿಚೆಲ್ ಸ್ಯಾಂಟ್ನರ್ ಭುಜದ ಗಾಯದ ಸಮಸ್ಯೆಯಿಂದಾಗಿ ಟೂರ್ನಿ ಮಧ್ಯಭಾಗದಲ್ಲೇ ತವರಿಗೆ ವಾಪಸ್ ಆಗಿದ್ದರು.

Cricket: IPL 2026 ಮುಕ್ತಾಯದ ಬೆನ್ನಲ್ಲೇ ಹೊಸ ವಿವಾದ; ಅರ್ಧ ಹಣ ಮಾತ್ರ ಕೊಟ್ರು- Mitchell Santner ಹೊಸ ಬಾಂಬ್!
ಮಿಚೆಲ್ ಸ್ಯಾಂಟ್ನರ್
Published On :

ಮುಂಬೈ: ಐಪಿಎಲ್ 2026 ಟೂರ್ನಿ ಮುಕ್ತಾಯದ ಬೆನ್ನಲ್ಲೇ ನ್ಯೂಜಿಲೆಂಡ್ ಸ್ಟಾರ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಹೊಸ ಬಾಂಬ್ ಸಿಡಿಸಿದ್ದು, ಟೂರ್ನಿಯಲ್ಲಿ ತಮಗೆ ಅರ್ಧದಷ್ಟು ಹಣ ಮಾತ್ರ ನೀಡಲಾಗಿದೆ ಎಂದು ಹೇಳಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಮಿಚೆಲ್ ಸ್ಯಾಂಟ್ನರ್ ಭುಜದ ಗಾಯದ ಸಮಸ್ಯೆಯಿಂದಾಗಿ ಟೂರ್ನಿ ಮಧ್ಯಭಾಗದಲ್ಲೇ ತವರಿಗೆ ವಾಪಸ್ ಆಗಿದ್ದರು.

ಹಾಲಿ ಐಪಿಎಲ್‌ ಋತುವಿನಲ್ಲಿ ಅವರು ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಅವರು ಕಣಕ್ಕಿಳಿಯಲು ಸಾಧ್ಯವಾಯಿತು. ಈ ಅವಧಿಯಲ್ಲಿ ಸ್ಯಾಂಟ್ನರ್ ಐದು ವಿಕೆಟ್‌ಗಳನ್ನು ಪಡೆದು 26 ರನ್ ಗಳಿಸಿದ್ದರು.

ನ್ಯೂಜಿಲೆಂಡ್ ಪರ 138 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 34 ವರ್ಷದ ಸ್ಯಾಂಟ್ನರ್ ಅವರನ್ನು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 2 ಕೋಟಿ ರೂ (INR 20 ಮಿಲಿಯನ್) ಮೊತ್ತಕ್ಕೆ ಖರೀದಿಸಿತ್ತು. ಬಳಿಕ 2026ರ ಆವೃತ್ತಿಗೂ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿತ್ತು.

ಶೇ.50ರಷ್ಟು ಮಾತ್ರ ಪಾವತಿ

ಇನ್ನು ಟೂರ್ನಿ ಮುಕ್ತಾಯದ ಬಳಿಕ ತಮಗೆ ಕೇವಲ ಶೇ.50ರಷ್ಟು ಸಂಭಾವನೆ ಮಾತ್ರ ನೀಡಲಾಯಿತು ಎಂದು ಸ್ಯಾಂಟ್ನರ್ ಬಹಿರಂಗಪಡಿಸಿದ್ದಾರೆ. ಈ ಕುರಿತು 'ಗ್ರೇಡ್ ಕ್ರಿಕೆಟರ್ ಪಾಡ್‌ಕಾಸ್ಟ್'ನಲ್ಲಿ ಮಾತನಾಡಿರುವ ಸ್ಯಾಂಟ್ನರ್, ತಮಗೆ ಕೇವಲ ಅರ್ಧ ಸಂಭಾವನೆ ಮಾತ್ರ ನೀಡಲಾಗಿದೆ ಎಂದು ಹೇಳಿದರು.

ಅವರು ನನಗೆ ಕೇವಲ ಅರ್ಧ ಹಣವನ್ನೇ ಕೊಟ್ಟರು. ಅದು ನಿಜಕ್ಕೂ ನನಗೆ ಬೇಸರ ತಂದಿತು ಎಂದರು.

ಮೊದಲ ಪಂದ್ಯವನ್ನು ನಾನು ತಪ್ಪಿಸಿಕೊಂಡೆ, ಏಕೆಂದರೆ ನನ್ನ ಎರಡನೇ ಮಗುವಿನ ಜನನವಾಗಿತ್ತು. ಅಲ್ಲಿಂದ ನೇರವಾಗಿ ವಿಮಾನದಿಂದ ಇಳಿದು ಡೆಲ್ಲಿ ವಿರುದ್ಧದ ಪಂದ್ಯ ಆಡಿದೆ. ಆಗ ನನ್ನ ಬಲ ಭುಜಕ್ಕೆ ಗಾಯವಾಯಿತು ಮತ್ತು ಸುಮಾರು ಒಂದು ವಾರ ಹೊರಗುಳಿಯಬೇಕಾಯಿತು.

ಕೆಲವು ಪಂದ್ಯಗಳ ಬಳಿಕ ಮತ್ತೆ ತಂಡಕ್ಕೆ ಮರಳಿದೆ. ಆದರೆ ಈ ಬಾರಿ ಎಡ ಭುಜಕ್ಕೆ ಗಾಯವಾಯಿತು ಮತ್ತು ಮನೆಗೆ ಹಿಂದಿರುಗಬೇಕಾಯಿತು. ಹೀಗೆ ಎರಡು ವಾರಗಳ ಅಂತರದಲ್ಲಿ ಎರಡೂ ಭುಜಗಳಿಗೆ ಗಾಯ ಮಾಡಿಕೊಂಡೆ. ತಂಡಕ್ಕಾಗಿ ನಾನು ನನ್ನ ದೇಹವನ್ನೇ ಪಣಕ್ಕಿಟ್ಟಿದ್ದೇನೆ ಎಂದು ಭಾವಿಸಿದ್ದೆ, ಆದರೆ ಬಹುಶಃ ಅವರು ಹಾಗೆ ಭಾವಿಸಿರಲಿಲ್ಲ" ಎಂದು ಸ್ಯಾಂಟ್ನರ್ ಹೇಳಿದ್ದಾರೆ.

ಆರೋಪ ಅಲ್ಲಗಳೆದ ನ್ಯೂಜಿಲೆಂಡ್ ಸ್ಪಿನ್ನರ್

ಮೊದಲಿಗೆ ಎಡ ಭುಜಕ್ಕೆ ಗಾಯವಾದ ಹಿನ್ನೆಲೆಯಲ್ಲಿ ಅವರು ಸುಮಾರು ಎಂಟು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ನಿರೀಕ್ಷೆಗಿಂತ ಬೇಗ ಚೇತರಿಸಿಕೊಂಡ ಅವರು, ಗುರುವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದರು. ಇದಾದ ಬಳಿಕ, ಐಪಿಎಲ್ 2026ರಿಂದ ಹೊರಬರಲು ಸ್ಯಾಂಟ್ನರ್ ಉದ್ದೇಶಪೂರ್ವಕವಾಗಿ ಗಾಯದ ನೆಪ ಹೇಳಿದ್ದರು ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು.

ಆದರೆ ಈ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದು, ತಮ್ಮ ದೇಹವನ್ನು ತಂಡಕ್ಕಾಗಿ ಪಣಕ್ಕಿಟ್ಟಿದ್ದೆ ಎಂದು ಹೇಳಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಐಪಿಎಲ್ ನಿಯಮಗಳ ಪ್ರಕಾರ ಟೂರ್ನಿಯ ವೇಳೆ ಆಟಗಾರ ಗಾಯಗೊಂಡರೆ, ಹರಾಜಿನಲ್ಲಿ ನಿಗದಿಪಡಿಸಿದ ಪೂರ್ಣ ಮೊತ್ತವನ್ನು ಫ್ರಾಂಚೈಸಿ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಯಾಂಟ್ನರ್ ಅವರ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.