IPL 2026 Final: ನರೇಂದ್ರ ಮೋದಿ ಮೈದಾನದಲ್ಲಿ ಹೈಡ್ರಾಮಾ; Virat Kohli-Shubman Gill ಜಟಾಪಟಿ; ಆಗಿದ್ದೇನು?
ಕೇವಲ 42 ಎಸೆತಗಳನ್ನು ಎದುರಿಸಿದ ಕೊಹ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಅಜೇಯ 75 ರನ್ ಕಲೆಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಜೊತೆಗೆ ಐಪಿಎಲ್ ನ ಅತಿ ವೇಗದ ಅರ್ಧಶತಕವನ್ನೂ ದಾಖಲಿಸಿದರು.

ಅಹ್ಮದಾಬಾದ್: ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿತು.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ನೀಡಿದ್ದ 156 ರನ್ ಗಳ ಸಾಧಾರಣ ಗುರಿಯನ್ನು ಆರ್ ಸಿಬಿ ತಂಡ 18 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ 5 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಆರ್ ಸಿಬಿಯ ಗೆಲುವಿನಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಮಹತ್ತರ ಪಾತ್ರ ವಹಿಸಿದರು. ಚೇಸಿಂಗ್ ಮಾಸ್ಟರ್ ಎಂದೇ ಖ್ಯಾತಿ ಗಳಿಸಿರುವ ಕೊಹ್ಲಿ ಅವರ ಖ್ಯಾತಿಗೆ ತಕ್ಕಂತೆ ಆಡಿದರು.
ಕೇವಲ 42 ಎಸೆತಗಳನ್ನು ಎದುರಿಸಿದ ಕೊಹ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಅಜೇಯ 75 ರನ್ ಕಲೆಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಜೊತೆಗೆ, 25 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕವನ್ನೂ ದಾಖಲಿಸಿದರು.
ಮೈದಾನದಲ್ಲೇ ಹೈಡ್ರಾಮಾ
ಇನ್ನು ಈ ಪಂದ್ಯದ ಅಂತಿಮ ಹಂತದಲ್ಲಿ ಮೈದಾನದಲ್ಲೇ ದೊಡ್ಡ ಹೈಡ್ರಾಮಾ ನಡೆಯಿತು. ಕೊಹ್ಲಿ ಭಾರಿಸಿದ ಚೆಂಡನ್ನು ಗಿಲ್ ಕ್ಯಾಚ್ ಪಡೆದಿದ್ದರು. ಈ ವೇಳೆ ಮೈದಾನದ ಅಂಪೈರ್ ನೀಡಿದ ಔಟ್ ತೀರ್ಪಿನಿಂದ ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಅಸಮಾಧಾನಗೊಂಡರು. ಕುಲಂಕುಷವಾಗಿ ಪರಿಶೀಲಿಸದೇ ಔಟ್ ನೀಡಿದ್ದು ಕೊಹ್ಲಿ ಕೋಪಕ್ಕೆ ಕಾರಣವಾಗಿತ್ತು.
ಆಗಿದ್ದೇನು?
ಆರ್‌ಸಿಬಿಯ ರನ್ ಚೇಸ್‌ನ 16ನೇ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆಯಿತು. ಗುಜರಾತ್ ಟೈಟನ್ಸ್‌ನ ಬೌಲರ್ ಅರ್ಷದ್ ಖಾನ್ ಎಸೆದ ಚೆಂಡನ್ನು ಕೊಹ್ಲಿ ಮಿಡ್‌ಆಫ್ ಕಡೆಗೆ ಬಲವಾಗಿ ಹೊಡೆದರು. ಚೆಂಡನ್ನು ಹಿಡಿಯಲು ಗುಜರಾತ್ ನಾಯಕ ಶುಭ್‌ಮನ್ ಗಿಲ್ ಮುಂಭಾಗಕ್ಕೆ ಡೈವ್ ಮಾಡಿ ಕ್ಯಾಚ್ ಪಡೆದರು.
ಆದರೆ ಗಿಲ್ ಈ ಕ್ಯಾಚ್ ಪಡೆಯುವಾಗ ಚೆಂಡನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿರಲಿಲ್ಲ. ಈ ವೇಳೆ ಅದು ನೆಲಕ್ಕೆ ತಗುಲಿದೆ ಎಂದು ಕೊಹ್ಲಿ ಭಾವಿಸಿದರು. ಹೀಗಾಗಿ ಅವರು ಮೈದಾನದ ಅಂಪೈರ್ ನಿತಿನ್ ಮೆನನ್ ಅವರೊಂದಿಗೆ ತೀವ್ರ ಚರ್ಚೆ ನಡೆಸಿದರು. ಆರಂಭದಲ್ಲಿ ಅಂಪೈರ್ ಕೊಹ್ಲಿಗೆ ಮೈದಾನ ತೊರೆಯುವಂತೆ ಸೂಚಿಸಿದ್ದರು.
ಆದರೆ ಕೊಹ್ಲಿ ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಅಂತಿಮವಾಗಿ ತೀರ್ಪನ್ನು ಮೂರನೇ ಅಂಪೈರ್ ಪರಿಶೀಲನೆಗೆ ಕಳುಹಿಸಲಾಯಿತು. ರಿಪ್ಲೇ ದೃಶ್ಯಗಳಲ್ಲಿ ಸ್ಪಷ್ಟ ಸಾಕ್ಷ್ಯ ದೊರಕದಿದ್ದರೂ, ಚೆಂಡಿನ ಒಂದು ಭಾಗ ನೆಲಕ್ಕೆ ತಾಗಿರುವ ಸಾಧ್ಯತೆ ಇದೆ ಎಂದು ಮೂರನೇ ಅಂಪೈರ್ ಅಭಿಪ್ರಾಯಪಟ್ಟರು. ಪರಿಣಾಮವಾಗಿ ಮೈದಾನದ ಅಂಪೈರ್ ನೀಡಿದ್ದ ಔಟ್ ತೀರ್ಪನ್ನು ಹಿಂಪಡೆದು, ಕೊಹ್ಲಿಯನ್ನು "ನಾಟ್ ಔಟ್" ಎಂದು ಘೋಷಿಸಲಾಯಿತು.
ಕೊಹ್ಲಿ-ಗಿಲ್ ಜಟಾಪಟಿ
ಇದೇ ಸಂದರ್ಭದಲ್ಲಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಗುಜರಾತ್ ನಾಯಕ ಶುಭ್ ಮನ್ ಗಿಲ್ ನಡುವಿನ ವಾಕ್ಸಮರಕ್ಕೂ ಕಾರಣವಾಯಿತು. ಗಿಲ್ ಔಟ್ ಎಂದು ವಾದ ಮಾಡಿದರೆ, ಕೊಹ್ಲಿ ಇಲ್ಲ ಒಮ್ಮೆ ಪರಿಶೀಲಿಸದರೆ ಏನಾಗುತ್ತದೆ ಎಂಬರ್ಥದಲ್ಲಿ ಸನ್ಹೆ ಮಾಡಿದರು. ಒಂದು ಹಂತದಲ್ಲಿ ಕೊಹ್ಲಿ ಗಿಲ್ ಜೊತೆ ಮಾತಿನ ಚಕಮಕಿಯನ್ನೇ ನಡೆಸಿದರು. ಬಳಿಕ ಮೂರನೇ ಅಂಪೈರ್ ತೀರ್ಪು ನಾಟ್ ಔಟ್ ಎಂದು ಬರುತ್ತಲೇ ಕೊಹ್ಲಿ ಭಾವನಾತ್ಮಕವಾಗಿ ಸಂಭ್ರಮಿಸಿದರು.
ಆ ಸಂದರ್ಭದಲ್ಲಿ 63 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದ ಕೊಹ್ಲಿ, ನಂತರ ಪಂದ್ಯದ ಅಂತ್ಯವನ್ನು ಭರ್ಜರಿ ಸಿಕ್ಸರ್ ಮೂಲಕ ಮುಕ್ತಾಯಗೊಳಿಸಿದರು. ಅವರು ಅಜೇಯ 75 ರನ್‌ಗಳೊಂದಿಗೆ ಉಳಿದಿದ್ದು, ಆರ್‌ಸಿಬಿ ಐದು ವಿಕೆಟ್‌ಗಳ ಗೆಲುವು ಸಾಧಿಸಿ ಸತತ ಎರಡನೇ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

IPL 2026 Final: 2ನೇ ಬಾರಿಗೆ ಪ್ರಶಸ್ತಿ ಗೆದ್ದ RCB; ಬೆಂಗಳೂರು ಅಷ್ಟೇ ಅಲ್ಲ.. ದೇಶಾದ್ಯಂತ ಅಭಿಮಾನಿಗಳ ವಿಜಯೋತ್ಸವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



