ಪಾಕ್ ಆಟಗಾರರಿಗೆ ಮತ್ತೊಂದು ಸಂಕಷ್ಟ; 'ದಿ ಹಂಡ್ರೆಡ್' ಹರಾಜಿನಲ್ಲಿ ಖರೀದಿಸಲು ಕೆಲ ಫ್ರಾಂಚೈಸಿಗಳ ಹಿಂದೇಟು!
ಇಸಿಬಿಯ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ತಾನ ಆಟಗಾರರ ಮೇಲಿನ ಆಸಕ್ತಿಯು ಐಪಿಎಲ್ ಮಾಲೀಕರೊಂದಿಗೆ ಸಂಬಂಧ ಹೊಂದಿರದ ತಂಡಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸೂಚಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾಗವಹಿಸುವುದನ್ನು ನಿಷೇಧಿಸಿದ ನಂತರ, ಪಾಕಿಸ್ತಾನಿ ಆಟಗಾರರು ಇಂಗ್ಲೆಂಡ್ನ ದಿ ಹಂಡ್ರೆಡ್ನಲ್ಲಿಯೂ 'ಭಾಗಶಃ ಬಹಿಷ್ಕಾರ'ವನ್ನು ಎದುರಿಸಲಿದ್ದಾರೆ. ಪಾಕಿಸ್ತಾನಿ ಆಟಗಾರರು ದಿ ಹಂಡ್ರೆಡ್ ಹರಾಜಿಗೆ ನೋಂದಾಯಿಸಿಕೊಂಡಿದ್ದರೂ, ಅವರ ಆಯ್ಕೆಗೆ ಸಂಕಷ್ಟ ಎದುರಾಗಬಹುದು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಯಾವುದೇ ಔಪಚಾರಿಕ ನಿಷೇಧ (ಇಂಡಿಯನ್ ಪ್ರೀಮಿಯರ್ ಲೀಗ್ಗಿಂತ ಭಿನ್ನವಾಗಿ) ಹೊಂದಿಲ್ಲದಿದ್ದರೂ, ಐಪಿಎಲ್ ಫ್ರಾಂಚೈಸಿ ಮಾಲೀಕರ ಒಡೆತನದ ತಂಡಗಳು ಪಾಕಿಸ್ತಾನಿ ಆಟಗಾರರನ್ನು ಖರೀದಿಸುವುದರಿಂದ ಹಿಂದೆ ಸರಿಯಬೇಕು ಎಂಬ 'ಅಲಿಖಿತ ನಿಯಮ' ಇದೆ ಎಂದು ವರದಿಯಾಗಿದೆ.
ಬಿಬಿಸಿ ವರದಿ ಪ್ರಕಾರ, ಇಸಿಬಿಯ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ತಾನ ಆಟಗಾರರ ಮೇಲಿನ ಆಸಕ್ತಿಯು ಐಪಿಎಲ್ ಮಾಲೀಕರೊಂದಿಗೆ ಸಂಬಂಧ ಹೊಂದಿರದ ತಂಡಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸೂಚಿಸಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ತಿಳಿದಿರುವ ಮತ್ತೊಬ್ಬ ಏಜೆಂಟ್, ದಿ ಹಂಡ್ರೆಡ್ ಹರಾಜು ಪ್ರಕ್ರಿಯೆಯಲ್ಲಿ ಇದು 'ಅಲಿಖಿತ ನಿಯಮ'ವಾಗಿದೆ. ಅಷ್ಟೇ ಅಲ್ಲದೆ, ಭಾರತೀಯ ಹೂಡಿಕೆ ಇರುವ ವಿವಿಧ ಲೀಗ್ಗಳಲ್ಲಿಯೂ ಈ 'ನಿಯಮ' ಜಾರಿಯಲ್ಲಿದೆ ಎಂದು ಬಣ್ಣಿಸಿದ್ದಾರೆ.
2021ರಲ್ಲಿ ತನ್ನ ಉದ್ಘಾಟನಾ ಆವೃತ್ತಿಯಿಂದಲೂ, ಇಂಗ್ಲೆಂಡ್ನ ದಿ ಹಂಡ್ರೆಡ್ ತನ್ನ ಎಂಟು ಫ್ರಾಂಚೈಸಿಗಳು ಐಪಿಎಲ್ ಮಾಲೀಕರಿಂದ ಒಂದಲ್ಲ ಒಂದು ರೂಪದಲ್ಲಿ ಹೂಡಿಕೆ ಪಡೆದಿವೆ. ಸದ್ಯ, ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್, ಎಂಐ ಲಂಡನ್, ಸದರ್ನ್ ಬ್ರೇವ್ ಮತ್ತು ಸನ್ರೈಸರ್ಸ್ ಲೀಡ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ನೊಂದಿಗೆ ಮಾಲೀಕತ್ವದ ಸಂಬಂಧ ಹೊಂದಿರುವ ನಾಲ್ಕು ಫ್ರಾಂಚೈಸಿಗಳಾಗಿವೆ.
ಈ ಬೆಳವಣಿಗೆ ಬಗ್ಗೆ ಕೇಳಿದಾಗ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ನ ಉಪ ಅಧ್ಯಕ್ಷ ಜೇಮ್ಸ್ ಶೆರಿಡನ್, 'ಎರಡು ಸ್ಪರ್ಧೆಗಳನ್ನು ಗೆಲ್ಲುವ ಅತ್ಯುತ್ತಮ ಅವಕಾಶವನ್ನು ನೀಡಲು ನಾವು ಎರಡು ಅತ್ಯುತ್ತಮ ತಂಡಗಳನ್ನು ಆಯ್ಕೆ ಮಾಡುವ ಬಗ್ಗೆ ಮಾತ್ರ ಮಾತನಾಡಿದ್ದೇವೆ' ಎಂದು ಬಿಬಿಸಿಗೆ ತಿಳಿಸಿದ್ದಾರೆ.
ಇಸಿಬಿ ವಕ್ತಾರರು, 'ದಿ ಹಂಡ್ರೆಡ್ ಪ್ರಪಂಚದಾದ್ಯಂತದ ಪುರುಷ ಮತ್ತು ಮಹಿಳಾ ಆಟಗಾರರನ್ನು ಸ್ವಾಗತಿಸುತ್ತದೆ ಮತ್ತು ಎಂಟು ತಂಡಗಳು ಅದನ್ನು ಪ್ರತಿಬಿಂಬಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. 18 ರಾಷ್ಟ್ರಗಳಿಂದ ಸುಮಾರು 1,000 ಕ್ರಿಕೆಟಿಗರು ದಿ ಹಂಡ್ರೆಂಡ್ ಹರಾಜು ಪ್ರಕ್ರಿಯೆಗೆ ನೋಂದಾಯಿಸಿಕೊಂಡಿದ್ದಾರೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ನಿಂದ ಕ್ರಮವಾಗಿ 50ಕ್ಕೂ ಹೆಚ್ಚು ಆಟಗಾರರ ಪ್ರಾತಿನಿಧ್ಯವಿದೆ' ಎಂದು ಹೇಳಿದರು.
ಶಾಹೀನ್ ಶಾ ಅಫ್ರಿದಿ, ಶಾದಾಬ್ ಖಾನ್ ಮತ್ತು ಹ್ಯಾರಿಸ್ ರೌಫ್ ಅವರು ದಿ ಹಂಡ್ರೆಡ್ನಲ್ಲಿ ಪುರುಷರ ಸ್ಪರ್ಧೆಯ ಹಿಂದಿನ ಆವೃತ್ತಿಗಳಲ್ಲಿ ಕಾಣಿಸಿಕೊಂಡ ಕೆಲವು ಪ್ರಮುಖ ಆಟಗಾರರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


