'ಭಾರತೀಯ ಮಾಧ್ಯಮಗಳು ನನ್ನ ಹೇಳಿಕೆ ತಿರುಚಿವೆ': ಮೊಹ್ಸಿನ್ ನಖ್ವಿಯನ್ನು 'ಅಸಮರ್ಥ' ಎಂದು ಕರೆದಿದ್ದ ಶೋಯೆಬ್ ಅಖ್ತರ್ ಯೂ-ಟರ್ನ್!
ತಾನು ಎಂದಿಗೂ ನಖ್ವಿ ಅವರನ್ನು ಗುರಿಯಾಗಿಸಿಕೊಳ್ಳಲು ಬಯಸಿರಲಿಲ್ಲ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ನಡೆಸುವ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.

ಕೊಲಂಬೊದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ 2026ರ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 61 ರನ್ ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಪಂದ್ಯಾವಳಿಯ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿರುವ 9 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಪ್ರಾಬಲ್ಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೋಹ್ಸಿನ್ ನಖ್ವಿ ಅವರನ್ನು ಟೀಕಿಸಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಇದೀಗ ಯೂ-ಟರ್ನ್ ಹೊಡೆದಿದ್ದಾರೆ. ಈ ಸೋಲಿನ ನಂತರ, ಕೋಪಗೊಂಡಿದ್ದ ಅಖ್ತರ್ ನಖ್ವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು ಮತ್ತು ಪಿಸಿಬಿ ಅಧ್ಯಕ್ಷರಾಗಲು ಅಸಮರ್ಥ ವ್ಯಕ್ತಿ ಎಂದು ಕರೆದಿದ್ದರು.
ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಅಖ್ತರ್, ತಾನು ಎಂದಿಗೂ ನಖ್ವಿ ಅವರನ್ನು ಗುರಿಯಾಗಿಸಿಕೊಳ್ಳಲು ಬಯಸಿರಲಿಲ್ಲ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ನಡೆಸುವ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ. ಪಿಸಿಬಿ ಅಧ್ಯಕ್ಷರು ಒಳ್ಳೆಯ ವ್ಯಕ್ತಿಯಾಗಿದ್ದು, ಅವರು ಯಾವಾಗಲೂ ಪಾಕಿಸ್ತಾನ ಕ್ರಿಕೆಟ್‌ಗೆ ಸಹಾಯ ಮಾಡಲು ನಿಜವಾಗಿಯೂ ಬಯಸುತ್ತಾರೆ. ಭಾರತೀಯ ಮಾಧ್ಯಮಗಳು ತಮ್ಮ ಮಾತುಗಳನ್ನು ತಿರುಚಿದ್ದು, ಅದು ನಖ್ವಿಯನ್ನು ಗುರಿಯಾಗಿಸಿಕೊಂಡಂತೆ ಕಾಣುತ್ತಿದೆ' ಎಂದು ಅಖ್ತರ್ ಆರೋಪಿಸಿದ್ದಾರೆ.
'ನನ್ನ ಹೇಳಿಕೆಗಳು ಎಂದಿಗೂ ಮೊಹ್ಸಿನ್ ನಖ್ವಿ ಅವರನ್ನು ಗುರಿಯಾಗಿರಿಸಿಕೊಂಡಿರಲಿಲ್ಲ. ಅಸಮರ್ಥತೆಯ ಬಗ್ಗೆ ಹೇಳಿಕೆ ಅವರ ವಿರುದ್ಧ ನೀಡಿದ್ದಾಗಿರಲಿಲ್ಲ - ಅದು ಅಂತರರಾಷ್ಟ್ರೀಯ ಕ್ರಿಕೆಟ್ ನಡೆಸುವ ಉನ್ನತ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡಿತ್ತು. ಕೆಲವು ಭಾರತೀಯ ಟಿವಿ ಚಾನೆಲ್‌ಗಳು ನನ್ನ ಮಾತುಗಳನ್ನು ತಿರುಚಿವೆ. ಅದೇ ಕಾರ್ಯಕ್ರಮದಲ್ಲಿ, ಮೊಹ್ಸಿನ್ ಭಾಯ್ ಬಗ್ಗೆ ನಕಾರಾತ್ಮಕವಾಗಿ ಏನನ್ನೂ ಹೇಳಬೇಡಿ ಎಂದು ನಾನು ಜನರನ್ನು ಕೇಳಿಕೊಂಡೆ, ಏಕೆಂದರೆ ನಾನು ಅದನ್ನು ಸಹಿಸುವುದಿಲ್ಲ. ಅವರು ಪಾಕಿಸ್ತಾನ ಕ್ರಿಕೆಟ್‌ಗೆ ನಿಜವಾಗಿಯೂ ಸಹಾಯ ಮಾಡಲು ಬಯಸುವ ಒಳ್ಳೆಯ ವ್ಯಕ್ತಿ ಎಂದು ನಾನು ಯಾವಾಗಲೂ ಹೇಳಿದ್ದೇನೆ. ಆದರೆ ಅದೇ ಸಮಯದಲ್ಲಿ, ಅವರಿಗೆ ಯಾವಾಗಲೂ ಸರಿಯಾದ ಸಲಹೆಯನ್ನು ನೀಡಲಾಗುವುದಿಲ್ಲ' ಎಂದು ಅಖ್ತರ್ ಹೇಳಿದರು.
ಪಾಕಿಸ್ತಾನದ ಸೋಲಿನ ಬಳಿಕ ಅಖ್ತರ್ ಹೇಳಿದ್ದೇನು?
ತಂಡದ ಹಿರಿಯ ಆಟಗಾರರು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಕಟು ವಾಗ್ದಾಳಿ ನಡೆಸಿದ್ ಅಖ್ತರ್, ''ಏನೂ ಗೊತ್ತಿಲ್ಲದ ಒಬ್ಬ ವ್ಯಕ್ತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ (ಮೊಹ್ಸಿನ್ ನಖ್ವಿ) ಆಗಿದ್ದಾನೆ. ನೀವು ಏನು ಮಾಡುತ್ತೀರಿ? ತಂಡವು ಹೇಗೆ ಬೆಳವಣಿಗೆ ಕಾಣುತ್ತದೆ? ನಿರ್ಣಾಯಕ ಪಂದ್ಯಗಳಲ್ಲಿ ಪಂದ್ಯ ಗೆಲ್ಲುವ ಪ್ರದರ್ಶನವನ್ನೇ ನೀಡದ ಆಟಗಾರನನ್ನು (ಬಾಬರ್ ಆಜಮ್) ಸೂಪರ್‌ಸ್ಟಾರ್ ಮಾಡಿದ್ದೀರಿ. ಅಸಮರ್ಥರಿಗೆ ನಿರ್ದಿಷ್ಟ ಕೆಲಸವನ್ನು ನೀಡುವುದು ವಿಶ್ವದ ದೊಡ್ಡ ಅಪರಾಧ' ಎಂದು ಅವರು ಹೇಳಿದರು.
'ನಾವು ಪಂದ್ಯದಲ್ಲಿ ಎಲ್ಲಿಯೂ ಇರಲಿಲ್ಲ. ಶಾಹೀನ್ ಗಂಟೆಗೆ 125 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದರು. ಆಧುನಿಕ ಕ್ರಿಕೆಟ್‌ಗೆ ಇದು ಅಗತ್ಯವಲ್ಲ. ಇಂದಿನ ಆಟವು ಹೆಚ್ಚಿನ ವೇಗ ಮತ್ತು ತೀವ್ರತೆಯನ್ನು ಬಯಸುತ್ತದೆ. ಇವರಿಗೆ ಒತ್ತಡವನ್ನು ನಿಭಾಯಿಸುವುದು ಗೊತ್ತಿಲ್ಲ. ಕಳೆದ 15-20 ವರ್ಷಗಳಿಂದ, ಯಾವುದೇ ಹೂಡಿಕೆ ಇಲ್ಲ. ಪಾಕಿಸ್ತಾನ ಕ್ರಿಕೆಟ್ ಹಲವು ವರ್ಷಗಳಿಂದ ಯುವ ಆಟಗಾರರು, ಮೂಲಸೌಕರ್ಯ ಅಥವಾ ವ್ಯವಸ್ಥೆಗಳನ್ನು ಸರಿಯಾಗಿ ಅಭಿವೃದ್ಧಿಪಡಿಸಿಲ್ಲ. ಅತ್ಯಂತ ದುಃಖದ ವಾಸ್ತವವೆಂದರೆ ಈಗಿರುವ ತಂಡವನ್ನು ಭಾರತದೊಂದಿಗೆ ಹೋಲಿಕೆ ಮಾಡಲು ಸಹ ಆಗುವುದಿಲ್ಲ' ಎಂದು ಶೋಯೆಬ್ ಎಬಿಪಿ ನ್ಯೂಸ್‌ಗೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



