T20 ವಿಶ್ವಕಪ್ 2026: ಇಶಾನ್, ಪಾಂಡ್ಯ ಅರ್ಧಶತಕ; ನಮೀಬಿಯಾಗೆ 210 ರನ್ ಗುರಿ ನೀಡಿದ ಭಾರತ! ಮಿಂಚಿದ ನಮೀಬಿಯಾ ನಾಯಕ Erasmus
ಭಾರತ ನಿಗದಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳ ಬೃಹತ್ ಮೊತ್ತ ಪೇರಿಸಿ 210 ರನ್ ಗುರಿ ನೀಡಿದೆ.

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ 210ರನ್ ಗಳ ಬೃಹತ್ ಗುರಿ ನೀಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಇಶಾನ್ ಕಿಶನ್ (61) ಮತ್ತು ಹಾರ್ದಿಕ್ ಪಾಂಡ್ಯಾ (52) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಭಾರತ ನಿಗದಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳ ಬೃಹತ್ ಮೊತ್ತ ಪೇರಿಸಿ 210 ರನ್ ಗುರಿ ನೀಡಿದೆ.
ಭರ್ಜರಿ ಆರಂಭದ ನಡುವೆಯೇ ಆರಂಭಿಕ ಆಘಾತ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕರಾದ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಭರ್ಜರಿ ಆರಂಭ ನೀಡಿದ್ದರು. ಕೇವಲ 2 ಓವರ್ ನಲ್ಲಿ ಈ ಜೋಡಿ 25ರನ್ ಪೇರಿಸಿತ್ತು. ಪ್ರಮುಖವಾಗಿ ಭರ್ಜರಿ ಲಯಕಂಡುಕೊಂಡಿದ್ದ ಸಂಜು ಸ್ಯಾಮ್ಸನ್ 3 ಸಿಕ್ಸರ್ ಮತ್ತು 1 ಬೌಂಡರಿ ಸಹಿತ 22 ರನ್ ಪೇರಿಸಿ ಅಪಾಯಕಾರಿಯಾಗಿ ಪರಿಣಮಿಸಿದ್ದರು.
ಆದರೆ 2ನೇ ಓವರ್ ನ ಅಂತಿಮ ಎಸೆತದಲ್ಲಿ ಬೆನ್ ಶಿಕಾಂಗೋ ಅವರ ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡ ಸಂಜು ಭರ್ಜರಿ ಹೊಡೆತಕ್ಕೆ ಮುಂದಾಗಿ ಸ್ಟೀನ್ ಕಾಂಪ್ ಗೆ ಕ್ಯಾಚ್ ನೀಡಿ ಹೊರನಡೆದರು. ಆ ಮೂಲಕ ದೊಡ್ಡ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ಮತ್ತೆ ನಿರಾಶೆ ಮೂಡಿಸಿದರು.
ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್
ಅತ್ತ ಸಂಜು ಸ್ಯಾಮ್ಸನ್ ಔಟಾಗುತ್ತಿದ್ದಂತೆಯೇ ತಿಲಕ್ ವರ್ಮಾ ಕ್ರೀಸ್ ಗೆ ಬಂದರು. ಈ ವೇಳೆ ಮತ್ತೊಂದು ಬದಿಯಲ್ಲಿದ್ದ ಇಶಾನ್ ಕಿಶನ್ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಬೌಂಡರಿ ಸಿಕ್ಸರ್ ಗಳ ಮಳೆಗರೆದ ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿಯೇ ಅರ್ಧಶತಕ ಸಿಡಿಸಿದರು.
ಮತ್ತೊಂದು ಬದಿಯಲ್ಲಿ ತಿಲಕ್ ವರ್ಮಾ ಕೂಡ 21 ಎಸೆತಗಳಲ್ಲಿ 3 ಬೌಂಡರಿ ಸಹಿತ 25 ರನ್ ಗಳಿಸಿ ಉತ್ತಮ ಸಾಥ್ ನೀಡುತ್ತಿದ್ದರು. ಆದರೆ ಅರ್ಧಶತಕ ಸಿಡಿಸಿದ್ದ ಇಶಾನ್ ಕಿಶನ್ 61 ರನ್ ಗಳಿಸಿದ್ದ ವೇಳೆ ನಮೀಬಿಯಾ ನಾಯಕ ಎರಾಸ್ಮಸ್ ಬೌಲಿಂಗ್ ನಲ್ಲಿ ಔಟಾದರು.
ಬಳಿಕ ಕ್ರೀಸ್ ಗೆ ಸೂರ್ಯ ಕುಮಾರ್ ಯಾದವ್ 12 ರನ್ ಗಳಿಸಿ ಔಟಾದರು. ಅವರ ಬೆನ್ನಲ್ಲೇ 25 ರನ್ ಗಳಿಸಿದ್ದ ತಿಲಕ್ ವರ್ಮಾ ಕೂಡ ಅದೇ ಎರಾಸ್ಮಸ್ ಬೌಲಿಂಗ್ ನಲ್ಲಿ ಔಟಾದರು.
ದುಬೆ-ಪಾಂಡ್ಯಾ ಜುಗಲ್ ಬಂದಿ
ಇನ್ನು ಈ ಹಂತದಲ್ಲಿ ಜೊತೆಗೂಡಿದ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯಾ ಭಾರತ ರನ್ ಗಳಿಕೆಯನ್ನು 200ರ ಗಡಿ ದಾಟಿಸಿದರು. 28 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯಾ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 52 ರನ್ ಚಚ್ಚಿದರು. ಮತ್ತೊಂದು ಬದಿಯಲ್ಲಿ ದುಬೆ 16 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ಸಹಿತ 23 ರನ್ ಪೇರಿಸಿದರು.
ಕೈಕೊಟ್ಟ ಕೆಳ ಕ್ರಮಾಂಕ
ಅತ್ತ ಹಾರ್ದಿಕ್ ಪಾಂಡ್ಯಾ ಅರ್ಧಶತಕ ಸಿಡಿಸಿ ಎರಾಸ್ಮಸ್ ಬೌಲಿಂಗ್ ನಲ್ಲಿ ಔಟಾದರೆ, ದುಬೆ ಕೂಡ ಅದೇ ಎರಾಸ್ಮಸ್ ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಅಕ್ಷರಶಃ ನಮೀಬಿಯಾ ಮೇಲುಗೈ ಸಾಧಿಸಿತು. ದುಬೆ ಔಟಾಗುತ್ತಿದ್ದಂತೆಯೇ ಭಾರತ ಪೆವಿಲಿಯನ್ ಪರೇಡ್ ನಡೆಸಿತು. ಅಕ್ಸರ್ ಪಟೇಲ್ ಶೂನ್ಯ ಸುತ್ತಿದರೆ, ರಿಂಕೂ ಸಿಂಗ್ 1ರನ್ ಗಳಿಸಿ ಔಟಾದರು. 2 ರನ್ ಗಳಿಸಿದ್ದ ಅರ್ಶ್ ದೀಪ್ ಸಿಂಗ್ ಅಂತಿಮ ಎಸೆತದಲ್ಲಿ 2ರನ್ ಓಡಲು ಹೋಗಿ ರನೌಟ್ ಆದರು.
ಅಂತಿಮ 4 ಓವರ್ ನಲ್ಲಿ ನಮೀಬಿಯ ಭರ್ಜರಿ ಕಮ್ ಬ್ಯಾಕ್, ಮಿಂಚಿದ ನಾಯಕ
ಭಾರತದ ಭರ್ಜರಿ ಬ್ಯಾಟಿಂಗ್ ಹೇಗಿತ್ತು ಎಂದರೆ ಸ್ಕೋರ್ 250ರ ಗಡಿ ದಾಟಬಹುದಿತ್ತು. ಆದರೆ ಭಾರತದ ಇನ್ನಿಂಗ್ಸ್ ನ ಅಂತಿಮ 4 ಓವರ್ ನಲ್ಲಿ ನಮೀಬಿಯಾ ಭರ್ಜರಿ ಕಮ್ ಬ್ಯಾಕ್ ಮಾಡಿತು. ಅದರಲ್ಲೂ ನಮೀಬಿಯಾ ನಾಯಕ ಎರಾಸ್ಮಸ್ ಕರಾರುವಕ್ಕಾದ ಬೌಲಿಂಗ್ ದಾಳಿ ಮಾಡಿ 4 ವಿಕೆಟ್ ಪಡೆದು ಮಿಂಚಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



