T20 World Cup 2026: 'ಟೂರ್ನಿ ಆಡ್ತೇವೆ.. ಆದ್ರೆ ಭಾರತದ ವಿರುದ್ಧ ಆಡಲ್ಲ'; ಐಸಿಸಿಗೆ PCB ಹೊಸ ತಲೆನೋವು!
ಕಳೆದ ಕೆಲವು ದಿನಗಳಿಂದ ಟಿ20 ವಿಶ್ವಕಪ್ನಲ್ಲಿ ನಮ್ಮ ತಂಡ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಐಸಿಸಿಗೆ ದೊಡ್ಡ ಶಾಕ್ ನೀಡಿದೆ.

ಇಸ್ಲಾಮಾಬಾದ್: ಟಿ20 ವಿಶ್ವಕಪ್ ಟೂರ್ನಿ ವಿಚಾರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಹೊಸ ತಲೆನೋವು ಆರಂಭವಾಗಿದ್ದು, ಭಾರತ ತಂಡದ ವಿರುದ್ಧ ಆಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಮತ್ತೊಂದು ವಿವಾದ ಭುಗಿಲೆದ್ದಿದ್ದು, ಇಷ್ಟು ದಿನ ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ವಿವಾದವನ್ನು ಬಗೆಹರಿಸಲು ಹರಸಾಹಸ ಪಟ್ಟಿದ್ದ ಐಸಿಸಿಗೆ (ICC) ಇದೀಗ ಮತ್ತೊಂದು ಹೊಸ ತಲೆನೋವು ಆರಂಭವಾಗಿದೆ.
ಕಳೆದ ಕೆಲವು ದಿನಗಳಿಂದ ಟಿ20 ವಿಶ್ವಕಪ್ನಲ್ಲಿ ನಮ್ಮ ತಂಡ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಐಸಿಸಿಗೆ ದೊಡ್ಡ ಶಾಕ್ ನೀಡಿದೆ.
ತನ್ನ ತಂಡ ಟಿ20 ವಿಶ್ವಕಪ್ನಲ್ಲಿ ಆಡುವುದನ್ನು ಪಾಕಿಸ್ತಾನ ಸರ್ಕಾರ ಖಚಿತಪಡಿಸಿದೆ. ಅಂತೆಯೇ ಈ ಸ್ಪಷ್ಟನೆ ಜೊತೆಗೂ ಮತ್ತೊಂದು ಗೊಂದಲದ ಹೇಳಿಕೆಯನ್ನೂ ಪಿಸಿಬಿ ನೀಡಿದೆ.
ಫೆ.15ರ ಪಂದ್ಯ ನಿಷೇಧ, ಐಸಿಸಿಗೆ PCB ಹೊಸ ತಲೆನೋವು
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆ ಕುರಿತ ಗೊಂದಲ ಪರಿಹಾರವಾಗಿದ್ದು, ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸುತ್ತಿದೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಆದರೆ ಭಾರತ ತಂಡದ ವಿರುದ್ಧ ಆಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸ ಟ್ವಿಸ್ಟ್ ನೀಡಿದೆ.
ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು (India vs Pakistan) ಆಡುವುದಿಲ್ಲ ಎಂದು ಹೇಳಿದೆ. ರಾಜಕೀಯ ಮತ್ತು ಇತ್ತೀಚಿನ ಬೆಳವಣಿಗೆಗಳ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.
ಟಿ20 ವಿಶ್ವಕಪ್ ಆಡಲು ಅನುಮತಿ
ಕೆಲವು ದಿನಗಳ ಹಿಂದೆ ಈ ಬಗ್ಗೆ ಹೇಳಿಕೆ ನೀಡಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಮ್ಮ ತಂಡ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವುದು ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದಿದ್ದರು. ಆ ಬಳಿಕ ಸರ್ಕಾರದೊಂದಿಗೆ ಚರ್ಚೆ ನಡೆಸಿ ತಂಡವನ್ನು ಪ್ರಕಟಿಸಿದ್ದರು.
ಆದರೆ ಭಾರತದ ವಿರುದ್ಧದ ಪಂದ್ಯವನ್ನು ಆಡುವುದರ ಬಗ್ಗೆ ಮಾತ್ರ ಏನನ್ನು ಹೇಳಿರಲಿಲ್ಲ. ಆದರೀಗ ಪಾಕಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾಕ್ಕೆ ಪ್ರಯಾಣಿಸಲು ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆದಿದ್ದು, ಅಲ್ಲಿ ತನ್ನ ಎಲ್ಲಾ ಗ್ರೂಪ್ ಎ ಪಂದ್ಯಗಳನ್ನು ಆಡಲಿದೆ.
ರಾಜಕೀಯ ಕಾರಣಗಳಿಂದಾಗಿ ಪಾಕಿಸ್ತಾನ ಭಾರತದಲ್ಲಿ ಆಡಲು ನಿರಾಕರಿಸಿದ್ದರಿಂದ, ಐಸಿಸಿ ಪಾಕ್ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಅದರಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೀಗ, ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ.
ಐಸಿಸಿ ಕಠಿಣ ನಿರ್ಧಾರ ಸಾಧ್ಯತೆ
ಇನ್ನು ಟಿ20 ವಿಶ್ವಕಪ್ ಟೂರ್ನಿ ವಿಚಾರದಲ್ಲಿ ಈಗಾಗಲೇ ಬಾಂಗ್ಲಾದೇಶ ತಂಡ ಹೊರದಬ್ಬಿಸಿಕೊಂಡಿದ್ದು, ಇದೀಗ ಪಾಕಿಸ್ತಾನ ತಂಡದ ಕ್ಯಾತೆ ಐಸಿಸಿಗೆ ಹೊಸ ತಲೆನೋವಾಗಿದೆ. ಉಭಯ ತಂಡಗಳ ಈ ಪಂದ್ಯ ರದ್ದಾಗಿರುವುದರಿಂದ ಐಸಿಸಿಗೆ ಆರ್ಥಿಕ ನಷ್ಟವಾಗುವುದಂತೂ ಖಚಿತ.
ಏಕೆಂದರೆ ಭಾರತ ಮತ್ತು ಪಾಕಿಸ್ತಾನ ಪಂದ್ಯವು ವಿಶ್ವಕಪ್ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಮತ್ತು ಆದಾಯ ಗಳಿಸುವ ಪಂದ್ಯವಾಗಿದೆ. ಇದೀಗ ಈ ಪಂದ್ಯ ನಡೆಯದಿರುವುದರಿಂದ ಐಸಿಸಿಗೆ ನಷ್ಟವಾಗುವುದು ಮಾತ್ರವಲ್ಲದೆ, ಪಾಕಿಸ್ತಾನ ಕೂಡ ಗಮನಾರ್ಹ ನಷ್ಟವನ್ನು ಎದುರಿಸಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




