ಕ್ರಿಕೆಟ್

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮೂರನೇ ದಿನದಾಟ ಸ್ಥಗಿತಗೊಂಡಾಗ ಶ್ರೀಲಂಕಾ 83.4 ಓವರ್‌ಗಳಲ್ಲಿ 265 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಲಂಕಾ ಮೇಲೆ ಫಾಲೋ ಆನ್ ಹೇರಲು ಭಾರತಕ್ಕೆ 2 ವಿಕೆಟ್ ಬೇಕಿದೆ.

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!
ಭಾರತ-ಶ್ರೀಲಂಕಾ ಪಂದ್ಯ
Published On :

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕೆ ಕೊನೆಯ ಹಂತದಲ್ಲಿ ಮಳೆ ಅಡ್ಡಿಪಡಿಸಿದ್ದು, ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ದಿನದಾಟವನ್ನು ಅಂತ್ಯಗೊಳಿಸಲಾಯಿತು.

ಕೊಲಂಬೋದ ಸಿಂಹಳೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ಸಿಂಹಸ್ವಪ್ನವಾಗಿ ಮಾರ್ಪಟ್ಟಿದ್ದಾರೆ.

ಮೂರನೇ ದಿನದಾಟ ಸ್ಥಗಿತಗೊಂಡಾಗ ಶ್ರೀಲಂಕಾ 83.4 ಓವರ್‌ಗಳಲ್ಲಿ 265 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಲಂಕಾ ಮೇಲೆ ಫಾಲೋ ಆನ್ ಹೇರಲು ಭಾರತಕ್ಕೆ 2 ವಿಕೆಟ್ ಬೇಕಿದೆ. ಅಂತೆಯೇ ಭಾರತ ಮೊದಲ ಇನಿಂಗ್ಸ್‌ನಲ್ಲಿ 503/9ಕ್ಕೆ ಡಿಕ್ಲೇರ್ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಫಾಲೋಆನ್ ತಪ್ಪಿಸಿಕೊಳ್ಳಲು ಶ್ರೀಲಂಕಾ ಇನ್ನೂ 39 ರನ್ ಗಳಿಸಬೇಕಿದೆ.

ಲಂಕಾಗೆ ಆಸರೆಯಾದ ಪಸಿಂದು ಸೂರಿಯಬಂಡಾರ, ಸೋನಲ್ ದಿನೂಷಾ

ಒಂದೆಡೆ ವಿಕೆಟ್‌ಗಳು ನಿಯಮಿತವಾಗಿ ಉರುಳುತ್ತಿದ್ದರೂ, ಶ್ರೀಲಂಕಾದ ಪಸಿಂದು ಸೂರಿಯಬಂಡಾರ ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲೇ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 80 ರನ್ ಗಳಿಸಿದರು. ಅವರ ವಿಕೆಟ್ ಪತನದ ಬಳಿಕ ಸೋನಲ್ ದಿನೂಷಾ ತಂಡದ ಹೋರಾಟವನ್ನು ಮುಂದುವರಿಸಿದ್ದು, ದಿನದಾಟದ ಅಂತ್ಯಕ್ಕೆ 85 ರನ್‌ಗಳೊಂದಿಗೆ ಅಜೇಯರಾಗಿದ್ದಾರೆ.

ಭಾರತದ ಪರ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಹಾಗೂ ಎಡಗೈ ಸ್ಪಿನ್ನರ್ ಮನು ಸುಥಾರ್ ತಲಾ ಮೂರು ವಿಕೆಟ್ ಪಡೆದು ಶ್ರೀಲಂಕಾ ಬ್ಯಾಟಿಂಗ್ ಸರದಿಗೆ ಭಾರೀ ಹೊಡೆತ ನೀಡಿದರು. ರವೀಂದ್ರ ಜಡೇಜಾ ಮತ್ತು ಮನು ಸುಥಾರ್ ತಲಾ ಒಂದು ವಿಕೆಟ್ ಪಡೆದರು.

ಇದೀಗ ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾದ ಉಳಿದ ಎರಡು ವಿಕೆಟ್‌ಗಳನ್ನು ಬೇಗನೆ ಕಬಳಿಸಿ ಫಾಲೋಆನ್ ಹೇರಲು ಭಾರತ ಪ್ರಯತ್ನಿಸಲಿದೆ. ಮತ್ತೊಂದೆಡೆ, ಆತಿಥೇಯರು ಉಳಿದ 39 ರನ್ ಗಳಿಸಿ ಫಾಲೋಆನ್ ತಪ್ಪಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದಾರೆ.

ಮಳೆಯಿಂದಾಗಿ 3ನೇ ದಿನದಾಟ ಮೊಟಕು

3ನೇ ದಿನದಾಟದ ಅಂತ್ಯಕ್ಕೆ ಇನ್ನೂ ಓವರ್ ಗಳು ಬಾಕಿ ಇರುವಂತೆಯೇ ಮಳೆಯಿಂದಾಗಿ ಆಟ ಸ್ಥಗಿತವಾಯಿತು. ಬಳಿಕ ಮಳೆ ನಿರಂತರವಾಗಿ ಸುರಿದ ಹಿನ್ನಲೆಯಲ್ಲಿ ಅಂಪೈರ್ ಗಳು ದಿನದಾಟ ಅಂತ್ಯಗೊಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.