ಕ್ರಿಕೆಟ್

ವೃತ್ತಿಜೀವನದ ಪ್ರಮುಖ ನಿರ್ಧಾರ ತೆಗೆದುಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್; ಮಹತ್ವದ ವಿವರಗಳು ಬಹಿರಂಗ!

ನೆಟ್ಸ್ ಮತ್ತು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡುತ್ತಿದ್ದ ಅರ್ಜುನ್, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಆವೃತ್ತಿಯ ಕೊನೆಯ ಪಂದ್ಯದವರೆಗೂ ಕಾಯಬೇಕಾಯಿತು.

ವೃತ್ತಿಜೀವನದ ಪ್ರಮುಖ ನಿರ್ಧಾರ ತೆಗೆದುಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್; ಮಹತ್ವದ ವಿವರಗಳು ಬಹಿರಂಗ!
ಅರ್ಜುನ್ ತೆಂಡೂಲ್ಕರ್
Published On :

'ಸ್ಪೋರ್ಟ್‌ಸ್ಟಾರ್' ವರದಿ ಪ್ರಕಾರ, ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ತಮ್ಮ ಭವಿಷ್ಯದ ಕುರಿತಾದ ಊಹಾಪೋಹಗಳ ನಡುವೆಯೂ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ತಂಡದ ಪರವಾಗಿ ಆಡುವುದನ್ನು ಮುಂದುವರಿಸಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಭಾಗವಾಗಿದ್ದ 26 ವರ್ಷದ ಎಡಗೈ ವೇಗದ ಬೌಲರ್ ಅರ್ಜುನ್, ಇತ್ತೀಚೆಗೆ ಗೋವಾ ತಂಡದ ಓಮನ್ ಪ್ರವಾಸದಿಂದ ಹೊರಗುಳಿದಿದ್ದರು; ಇದು ಅವರು ತಂಡದಲ್ಲಿ ಮುಂದುವರಿಯುತ್ತಾರೆಯೇ ಎಂಬ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿತ್ತು. ಆದಾಗ್ಯೂ, ಅರ್ಜುನ್ ತಂಡದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ತಂಡದ ಆಂತರಿಕ ಮೂಲಗಳು ಖಚಿತಪಡಿಸಿವೆ ಎಂದು ವರದಿ ತಿಳಿಸಿದೆ. ಅರ್ಜುನ್ 2022-23ರ ದೇಶೀಯ ಆವೃತ್ತಿಗೂ ಮುನ್ನ ಮುಂಬೈನಿಂದ ಗೋವಾಗೆ ವರ್ಗಾವಣೆಗೊಂಡಿದ್ದರು.

ಅವರು ತಂಡದ ನಿಯಮಿತ ಸದಸ್ಯರಾಗಿದ್ದು, ತಂಡಕ್ಕಾಗಿ 50 ಪ್ರಥಮ ದರ್ಜೆ ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ತಮ್ಮ ಬ್ಯಾಟಿಂಗ್‌ನಲ್ಲೂ ಸುಧಾರಣೆ ಕಂಡುಕೊಂಡಿದ್ದು, ತಂಡಕ್ಕಾಗಿ ಕೆಲವು ಮಹತ್ವದ ಇನಿಂಗ್ಸ್‌ಗಳನ್ನು ಆಡಿದ್ದಾರೆ. ರಣಜಿ ಟ್ರೋಫಿಯಲ್ಲಿ ರಾಜಸ್ಥಾನದ ವಿರುದ್ಧ ಶತಕ ಬಾರಿಸಿರುವ ಅವರು, ವಿವಿಧ ಸ್ವರೂಪದ ಪಂದ್ಯಗಳಲ್ಲಿ ಗೋವಾ ತಂಡದ ಪ್ರಮುಖ ಭಾಗವಾಗಿದ್ದಾರೆ.

ಇದಕ್ಕೂ ಮುನ್ನ, ಸದ್ಯ ಐಪಿಎಲ್ (IPL) ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಂತಿಮ ಪಂದ್ಯದಲ್ಲಿ ಎಡಗೈ ವೇಗದ ಬೌಲರ್ ಅರ್ಜುನ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆಗ ಸಚಿನ್ ತೆಂಡೂಲ್ಕರ್ ಅವರ ತಾಳ್ಮೆ ಮತ್ತು ಸಾಮರ್ಥ್ಯವನ್ನು ಶ್ಲಾಘಿಸಿದರು.

ನೆಟ್ಸ್ ಮತ್ತು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡುತ್ತಿದ್ದ ಅರ್ಜುನ್, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಆವೃತ್ತಿಯ ಕೊನೆಯ ಪಂದ್ಯದವರೆಗೂ ಕಾಯಬೇಕಾಯಿತು.

ಪಂಜಾಬ್ ಕಿಂಗ್ಸ್ ವಿರುದ್ಧ ಎಲ್‌ಎಸ್‌ಜಿ (LSG) ತಂಡ ಸೋತ ನಂತರ, ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಬರೆದಿದ್ದರು.

'ವೆಡ್ ಡನ್ ಅರ್ಜುನ್. ಈ ಆವೃತ್ತಿಯಾದ್ಯಂತ ನೀನು ನಡೆದುಕೊಂಡ ರೀತಿ ನನಗೆ ಹೆಮ್ಮೆ ತಂದಿದೆ; ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು, ತಾಳ್ಮೆಯಿಂದಿದ್ದು, ಮೌನವಾಗಿ ಕಠಿಣ ಪರಿಶ್ರಮ ಪಟ್ಟು ಮತ್ತು ಅಂತಿಮ ಪಂದ್ಯದವರೆಗೂ ಅವಕಾಶಕ್ಕಾಗಿ ಕಾಯಬೇಕಾದ ಪರಿಸ್ಥಿತಿಯಲ್ಲೂ ಸಕಾರಾತ್ಮಕ ಮನೋಭಾವವನ್ನು ಕಾಯ್ದುಕೊಂಡಿದ್ದೀಯ' ಎಂದಿದ್ದಾರೆ.

'ಕ್ರಿಕೆಟ್ ಕೌಶಲದಷ್ಟೇ ತಾಳ್ಮೆಯನ್ನೂ ಪರೀಕ್ಷಿಸುತ್ತದೆ; ಇಂದು ನೀನು ಇವೆರಡನ್ನೂ ಅತ್ಯುತ್ತಮವಾಗಿ ನಿಭಾಯಿಸಿದೆ. ಸದಾ ನೆಲದ ಮೇಲೆಯೇ ಇರು (ವಿನಮ್ರನಾಗಿರು) ಮತ್ತು ಎಂದಿನಂತೆಯೇ ಈ ಆಟದ ಮೇಲಿನ ಪ್ರೀತಿಯನ್ನು ಮುಂದುವರಿಸು. ಸದಾ ನಿನ್ನನ್ನು ಪ್ರೀತಿಸುತ್ತೇನೆ' ಎಂದು ತೆಂಡೂಲ್ಕರ್ ಹೇಳಿದರು.

ಅರ್ಜುನ್ ತಮ್ಮ ಮೊದಲ ಓವರ್‌ನಲ್ಲಿ ಅಚ್ಚುಕಟ್ಟಾಗಿ ಬೌಲಿಂಗ್ ಮಾಡಿದರು; ಪ್ರಭ್ಸಿಮ್ರನ್ ಸಿಂಗ್ ಅವರ ಕಠಿಣ ಕ್ಯಾಚ್ ಅನ್ನು ನಾಯಕ ರಿಷಬ್ ಪಂತ್ ಹಿಡಿದಿದ್ದರೆ ಅವರು ವಿಕೆಟ್ ಪಡೆಯಬಹುದಿತ್ತು. ಆರಂಭಿಕ ಸ್ಪೆಲ್‌ನಲ್ಲಿ ಸರಿಯಾದ ಲೆಂತ್‌ನಲ್ಲಿ ಬೌಲಿಂಗ್ ಮಾಡುವತ್ತ ಗಮನಹರಿಸಿದ್ದ ಅವರು, 15ನೇ ಓವರ್‌ನಲ್ಲಿ ಎಸೆದ 'ಯಾರ್ಕರ್' ಮೂಲಕ ಪ್ರಭ್ಸಿಮ್ರನ್ ಅವರನ್ನು ಸ್ಟಂಪ್‌ಗಳ ಮುಂದೆ ಸಿಲುಕಿಸಿ ಔಟ್ ಮಾಡಿದರು.

ಪಂತ್ ಅವರು ಪವರ್‌ಪ್ಲೇ ಮುಗಿದ ತಕ್ಷಣವೇ ಅರ್ಜುನ್ ಅವರನ್ನು ಬೌಲಿಂಗ್‌ಗೆ ಇಳಿಸಿದರು. ಅವರು ಒಂಬತ್ತನೇ, 15ನೇ ಮತ್ತು 17ನೇ ಓವರ್‌ಗಳನ್ನೂ ಬೌಲ್ ಮಾಡಿ, 36 ರನ್‌ಗಳಿಗೆ ಒಂದು ವಿಕೆಟ್ ಪಡೆದರು. 26 ವರ್ಷದ ಇವರು ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿಯೂ ಆಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರ ಪುತ್ರರಾಗಿರುವುದರಿಂದ ಆರಂಭಿಕ ದಿನಗಳಿಂದಲೇ ಅರ್ಜುನ್ ಸಹಜವಾಗಿಯೇ ಎಲ್ಲರ ಗಮನ ಸೆಳೆದಿದ್ದಾರೆ. ಎಲ್‌ಎಸ್‌ಜಿ (LSG) ತಂಡದ ಸಹಾಯಕ ಸಿಬ್ಬಂದಿಯ ಒಂದು ವರ್ಗವು ಅವರಿಗೆ ಇನ್ನೂ ಮೊದಲೇ ಆಡುವ ಅವಕಾಶ ನೀಡುವ ಪರವಾಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.