'ಭಾರತ ಪರ ಟೆಸ್ಟ್ ಆಡಬೇಕೆಂದರೆ ತಾಳ್ಮೆ ಇರಲೇಬೇಕು': ದಶಕಗಳ ಪರಿಶ್ರಮದ ಬಳಿಕ ಕೊನೆಗೂ ಆಯ್ಕೆಯಾದ Saransh Jain ಮಾತು!
2014-15ರ ಸಾಲಿನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಸಾರಾಂಶ್ ಜೈನ್, ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದ ಭಾಗವಾಗಿದ್ದಾರೆ.

ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ಸತತ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಸಿದ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಮಧ್ಯಪ್ರದೇಶದ ಆಫ್‌ಸ್ಪಿನ್ನರ್ ಸಾರಾಂಶ್ ಜೈನ್ ಅವರಿಗೆ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಮೊದಲ ಬಾರಿ ಸ್ಥಾನ ದೊರೆತಿದೆ.
ಈ ಸಂದರ್ಭದಲ್ಲಿ ತಮ್ಮ ಕ್ರಿಕೆಟ್ ಪಯಣದಲ್ಲಿ ತಾಳ್ಮೆಯೇ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ. 2014-15ರ ಸಾಲಿನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಸಾರಾಂಶ್ ಜೈನ್, ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದ ಭಾಗವಾಗಿದ್ದಾರೆ.
ಸರಣಿಯ ಮೊದಲ ಟೆಸ್ಟ್ ಶನಿವಾರ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ತಮ್ಮ ಆಯ್ಕೆಯ ಸುದ್ದಿ ತಿಳಿದ ಕ್ಷಣವನ್ನು ನೆನಪಿಸಿಕೊಂಡ ಜೈನ್, ತಾವು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಫೋನ್‌ನಲ್ಲಿ ಸರಣಿ ಕರೆಗಳು ಮತ್ತು ಸಂದೇಶಗಳು ಬಂದಿದ್ದವು ಎಂದು ಹೇಳಿದ್ದಾರೆ.
ಜೈನ್ ಹೇಳಿದ್ದೇನು?
“ನನಗೆ ಕರೆ ಬಂದಾಗ ನಾನು ದೇವಸ್ಥಾನದಲ್ಲಿದ್ದೆ. ಅಲ್ಲಿಗೆ ಕಾರಿನಲ್ಲಿ ಹೋಗುತ್ತಿದ್ದೆ. ಮಾರ್ಗಮಧ್ಯೆ ಫೋನ್ ನೋಡಿದಾಗ ಕರೆ ಮತ್ತು ಸಂದೇಶಗಳು ಬಂದಿದ್ದವು. ಆಗಲೇ ನಾನು ಆಯ್ಕೆಯಾಗಿದ್ದೇನೆ ಎಂಬುದು ತಿಳಿಯಿತು,” ಎಂದು ಜೈನ್ ಬಿಸಿಸಿಐ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
33 ವರ್ಷದ ಜೈನ್ ಒಂದು ದಶಕಕ್ಕೂ ಹೆಚ್ಚು ಕಾಲ ದೇಶೀಯ ಕ್ರಿಕೆಟ್ ಆಡಿದ್ದಾರೆ. ಭಾರತ ತಂಡಕ್ಕೆ ಸೇರಿದ ಬಳಿಕವೂ ತಮಗೆ ಯಾವುದೇ ಒತ್ತಡ ಅಥವಾ ಹೊಸತನದ ಭಾವನೆ ಎದುರಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕೆ ಮುಖ್ಯ ಕಾರಣ, ತಂಡದಲ್ಲಿರುವ ಬಹುತೇಕ ಆಟಗಾರರೊಂದಿಗೆ ಈಗಾಗಲೇ ಕ್ರಿಕೆಟ್ ಆಡಿರುವುದು.
“ರಣಜಿ ಟ್ರೋಫಿಗೆ ತನ್ನದೇ ಆದ ವಾತಾವರಣವಿದೆ. ಮೂರು ದಿನಗಳ ಹಿಂದೆ ತಂಡವನ್ನು ಸೇರಿಕೊಂಡಾಗ ನನಗೆ ಹೆಚ್ಚಿನ ವ್ಯತ್ಯಾಸವೇನೂ ಅನಿಸಲಿಲ್ಲ. ತಂಡದಲ್ಲಿರುವ ಶೇ.70ರಿಂದ 80ರಷ್ಟು ಆಟಗಾರರೊಂದಿಗೆ ನಾನು ಈಗಾಗಲೇ ಕ್ರಿಕೆಟ್ ಆಡಿದ್ದೇನೆ. ಹಾಗಾಗಿ ಎಲ್ಲರೊಂದಿಗೂ ಬೇಗನೆ ಬೆರೆತುಹೋಗಿದ್ದೇನೆ” ಎಂದು ಜೈನ್ ಹೇಳಿದ್ದಾರೆ.
ತಾಳ್ಮೆ ಮುಖ್ಯ
ಭಾರತ ಪರ ಟೆಸ್ಟ್ ಕ್ರಿಕೆಟ್ ಆಡಲು ಬಯಸುವ ಯಾವುದೇ ಆಟಗಾರನಿಗೆ ತಾಳ್ಮೆ ಅತ್ಯಗತ್ಯ ಎಂದು ಜೈನ್ ಒತ್ತಿ ಹೇಳಿದ್ದಾರೆ. ತಮ್ಮದೇ ಸುದೀರ್ಘ ಕಾಯುವಿಕೆಯನ್ನೇ ಇದಕ್ಕೆ ಉದಾಹರಣೆಯಾಗಿ ನೀಡಿದ್ದಾರೆ. “ಟೆಸ್ಟ್ ಕ್ರಿಕೆಟ್‌ನಲ್ಲಿ ತಾಳ್ಮೆ ಇರಬೇಕು.
ಭಾರತ ಪರ ಟೆಸ್ಟ್ ಆಡಬೇಕೆಂದರೆ ತಾಳ್ಮೆಯಿಂದ ಕಾಯಬೇಕು. ನಾನು ವೃತ್ತಿಜೀವನ ಆರಂಭಿಸಿದ ದಿನದಿಂದಲೂ ತಾಳ್ಮೆಯಿಂದ ಇದ್ದೇನೆ. 2014-15ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದೆ. ಇದು ಬಹಳ ದೀರ್ಘ ಪ್ರಯಾಣ. ಇದರಲ್ಲಿ ಸಾಕಷ್ಟು ಪರಿಶ್ರಮ ಮತ್ತು ತ್ಯಾಗಗಳಿವೆ. ಒಂದು ದಿನ ನಾನು ಖಂಡಿತವಾಗಿಯೂ ಭಾರತ ಪರ ಆಡುತ್ತೇನೆ ಎಂಬ ನಂಬಿಕೆ ನನ್ನಲ್ಲಿತ್ತು,” ಎಂದು ಅವರು ಹೇಳಿದ್ದಾರೆ.
ಜೈನ್ ಅವರ ವೃತ್ತಿಜೀವನದಲ್ಲಿ ಕುಟುಂಬವೂ ಪ್ರಮುಖ ಪಾತ್ರ ವಹಿಸಿದೆ. ಅವರ ತಂದೆ ಕೂಡ ಮಧ್ಯಪ್ರದೇಶ ಪರ ರಣಜಿ ಟ್ರೋಫಿ ಆಡಿದ್ದಾರೆ. ವೃತ್ತಿಜೀವನದ ಕಠಿಣ ಹಂತಗಳಲ್ಲಿ ತಾಳ್ಮೆಯಿಂದ ಮುಂದುವರಿಯುವಂತೆ ತಂದೆ ಸಲಹೆ ನೀಡಿದ್ದರು.
“ನನ್ನ ಕುಟುಂಬ ನನ್ನ ಬೆನ್ನಿಗೆ ನಿಂತಿದೆ. ನನ್ನ ತಂದೆ ರಣಜಿ ಟ್ರೋಫಿ ಆಟಗಾರರಾಗಿದ್ದರು. ಅವರು ನನಗೆ ತಾಳ್ಮೆಯಿಂದ ಇರುವಂತೆ ಹೇಳುತ್ತಿದ್ದರು. ಸಮಯ ಬಂದಾಗ ಅವಕಾಶಗಳು ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಅವರು ಹೇಳುತ್ತಿದ್ದರು,” ಎಂದು ಜೈನ್ ತಿಳಿಸಿದ್ದಾರೆ.
ಯಾರು ಈ ಸಾರಾಂಶ್ ಜೈನ್?
ಎಡಗೈ ಬ್ಯಾಟರ್ ಆಗಿರುವ ಸಾರಾಂಶ್ ಜೈನ್ ಭಾರತ ‘ಎ’ ತಂಡಗಳಲ್ಲೂ ನಿಯಮಿತವಾಗಿ ಆಡಿದ್ದಾರೆ. 54 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 2,223 ರನ್ ಮತ್ತು 188 ವಿಕೆಟ್ ಕಬಳಿಸಿದ್ದಾರೆ. ಹಲವು ವರ್ಷಗಳ ಕಾಲ ಭಾರತ ತಂಡದ ಆಯ್ಕೆಯ ಅಂಚಿನಲ್ಲೇ ಉಳಿದಿದ್ದ ಜೈನ್, 2022ರಲ್ಲಿ ಮಹತ್ವದ ತಿರುವು ಕಂಡರು. ಆ ವರ್ಷ ಅವರು 13 ವಿಕೆಟ್‌ಗಳನ್ನು ಪಡೆದು, ನಾಕೌಟ್ ಹಂತದಲ್ಲಿ ನಿರ್ಣಾಯಕ ಅರ್ಧಶತಕ ಬಾರಿಸುವ ಮೂಲಕ ಮಧ್ಯಪ್ರದೇಶ ತನ್ನ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
2025-26ರ ದೇಶೀಯ ಕ್ರಿಕೆಟ್ ಋತು ಜೈನ್ ವೃತ್ತಿಜೀವನದ ಮತ್ತೊಂದು ಮಹತ್ವದ ಹೆಜ್ಜೆಯಾಯಿತು. ಅವರು 57.55ರ ಸರಾಸರಿಯಲ್ಲಿ 518 ರನ್ ಗಳಿಸುವುದರ ಜೊತೆಗೆ 20.43ರ ಸರಾಸರಿಯಲ್ಲಿ 30 ವಿಕೆಟ್ ಪಡೆದರು. ಇದಾದ ಬಳಿಕ ದುಲೀಪ್ ಟ್ರೋಫಿಯಲ್ಲಿ ಸೆಂಟ್ರಲ್ ಝೋನ್ ಪರ ಅದ್ಭುತ ಪ್ರದರ್ಶನ ನೀಡಿದ ಜೈನ್ ‘ಪ್ಲೇಯರ್ ಆಫ್ ದಿ ಸೀರೀಸ್’ ಗೌರವಕ್ಕೆ ಪಾತ್ರರಾದರು. ಎರಡು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ ಅವರು ಎರಡು ಅರ್ಧಶತಕಗಳನ್ನೂ ಸಿಡಿಸಿದರು.
ನ್ಯೂ ಚಂಡೀಗಢದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸಿದ್ದಾಗ ಜೈನ್ ನೆಟ್ ಬೌಲರ್ ಆಗಿಯೂ ಸೇವೆ ಸಲ್ಲಿಸಿದ್ದರು. ಹೀಗೆ ವರ್ಷಗಳ ಕಾಲ ಭಾರತ ತಂಡದ ಬಾಗಿಲು ತಟ್ಟುತ್ತಿದ್ದ ಸಾರಾಂಶ್ ಜೈನ್, ಇದೀಗ ಕೊನೆಗೂ ಟೀಂ ಇಂಡಿಯಾ ಟೆಸ್ಟ್ ಪದಾರ್ಪಣೆಯ ಹೊಸ್ತಿಲಿಗೆ ಬಂದು ನಿಂತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




