ಕ್ರಿಕೆಟ್

IPL 2026: ಅತ್ಯಂತ ವೇಗದ ಶತಕ; ವೀರೇಂದ್ರ ಸೆಹ್ವಾಗ್ ದೀರ್ಘಾವಧಿ ದಾಖಲೆ ಪುಡಿಗಟ್ಟಿದ ಕೆಎಲ್ ರಾಹುಲ್!

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಶತಕ ಇದಾಗಿದೆ.

IPL 2026: ಅತ್ಯಂತ ವೇಗದ ಶತಕ; ವೀರೇಂದ್ರ ಸೆಹ್ವಾಗ್ ದೀರ್ಘಾವಧಿ ದಾಖಲೆ ಪುಡಿಗಟ್ಟಿದ ಕೆಎಲ್ ರಾಹುಲ್!
ಕೆಎಲ್ ರಾಹುಲ್
Published On :

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 19ನೇ ಸೀಸನ್​ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಶನಿವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕನ್ನಡಿಗ ಕೆಎಲ್ ರಾಹುಲ್ ಅವರು ಕೇವಲ 47 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸುವ ಮೂಲಕ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿದರು.

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಶತಕ ಇದಾಗಿದೆ. ಈ ಮೂಲಕ ಕರ್ನಾಟಕದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರು ವೀರೇಂದ್ರ ಸೆಹ್ವಾಗ್ ಅವರ 15 ವರ್ಷಗಳ ದೀರ್ಘಾವಧಿಯ ದಾಖಲೆಯನ್ನು ಮುರಿದರು. 2011 ರಲ್ಲಿ ವೀರೇಂದ್ರ ಸೆಹ್ವಾಗ್ ಅವರು ಈಗ ನಿಷ್ಕ್ರಿಯವಾಗಿರುವ ಡೆಕ್ಕನ್ ಚಾರ್ಜರ್ಸ್ ವಿರುದ್ಧ 48 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಮಾಡಿದ್ದರು.

ಇಂದು ಬ್ಯಾಟಿಂಗ್‌ ಸ್ನೇಹಿ ಪಿಚ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆ ಸುರಿಸಿದ ಕೆಎಲ್ ರಾಹುಲ್ ಕೇವಲ 47 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಯಾನ್ಸನ್ ಎಸೆದ 15ನೇ ಓವರ್​ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ 6ನೇ ಶತಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡನೇ ಶತಕವನ್ನು ದಾಖಲಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅವರೊಂದಿಗೆ ಸಮಬಲ ಸಾಧಿಸಿದರು.

ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ 8 ಶತಕ, ಜೋಸ್ ಬಟ್ಲರ್ 7, ಕ್ರಿಸ್ ಗೇಲ್ 6 ಶತಕ ದಾಖಲಿಸಿದ್ದಾರೆ.

ಒಟ್ಟು 67 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್, 16 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್ ಸಹಿತ ಅಜೇಯ 152 ರನ್ ಗಳಿಸಿದರು. ಈ ಮೂಲಕ ರಾಹುಲ್ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಈ ಮೊದಲು 145 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದ ಅಭಿಷೇಕ್ ಶರ್ಮಾ ಅವರನ್ನು ರಾಹುಲ್ ಹಿಂದಿಕ್ಕಿದರು.

ಕೆಎಲ್ ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ದಾಖಲೆಯ 264 ರನ್ ಕಲೆಹಾಕಿದೆ. ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.